ಕನ್ನೋಳಿ ಟೋಲ್ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಪುತ್ರನಿಂದ ಹಲ್ಲೆ
ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕನ್ನೋಳಿಯಲ್ಲಿ ವಿಜಯಪುರ –ಕಲಬುರ್ಗಿ ಹೆದ್ದಾರಿಯಲ್ಲಿರುವ ಟೋಲ್ ನಾಕಾ ಸಿಬ್ಬಂದಿಯನ್ನು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಅವರ ಪುತ್ರ ಮತ್ತು ಸಂಗಡಿಗರು ಸೇರಿಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಥಳಿಸಿರುವ ಘಟನೆ ಗುರುವಾರ ನಡೆದಿದೆ.
ವಿಜಯಪುರದಿಂದ ಜೀಪ್‌ನಲ್ಲಿ ಸಿಂದಗಿ ಕಡೆಗೆ ಹೊರಟಿದ್ದ ವಿಜುಗೌಡ ಪಾಟೀಲ ಅವರ ಪುತ್ರ ಸಮರ್ಥಗೌಡ ಪಾಟೀಲ್‌ಗೆ ಟೋಲ್ ಶುಲ್ಕ ಕಟ್ಟುವಂತೆ ಸಿಬ್ಬಂದಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ‘ನಾನು ವಿಜುಗೌಡ ಪುತ್ರ’ ಎಂದು ಸಮರ್ಥಗೌಡ ಹೇಳಿದ್ದಾನೆ. ಆಗ ಸಿಬ್ಬಂದಿ ‘ವಿಜುಗೌಡ ಯಾರು? ನಮಗೆ ಗೊತ್ತಿಲ್ಲ, ಶುಲ್ಕ ಕಟ್ಟಿ’ ಎಂದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಮರ್ಥಗೌಡ ಮತ್ತು ಸ್ನೇಹಿತರು ‘ವಿಜುಗೌಡ ಯಾರು ಎಂದು ಗೊತ್ತಿಲ್ಲವೇ‘ ಎಂದು ಟೋಲ್ ಸಿಬ್ಬಂದಿಯನ್ನು ಗದರಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಆರೋಪಿಗಳ ಥಳಿತದಿಂದ ಸಿಬ್ಬಂದಿ ಸಂಗಪ್ಪ ಎಂಬುವವರಿಗೆ ಗಾಯಗಳಾಗಿದ್ದು, ಸಿಂದಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಮರ್ಥಗೌಡ ಮತ್ತು ಆತನ ಸ್ನೇಹಿತರ ಬೆದರಿಕೆಗೆ ಅಂಜಿ ಅವರ ವಿರುದ್ಧ ದೂರು ನೀಡಲು ಟೋಲ್ ನಾಕಾ ಸಿಬ್ಬಂದಿ ಹಿಂದೇಟು ಹಾಕಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯು ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.