ADVERTISEMENT

ಯತ್ನಾಳ ನಕಲಿ ಬಿಜೆಪಿ, ನಾವು ಅಸಲಿ: ಹದನೂರ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:30 IST
Last Updated 15 ಆಗಸ್ಟ್ 2025, 5:30 IST
ಭೀಮಾಶಂಕರ ಹದನೂರ
ಭೀಮಾಶಂಕರ ಹದನೂರ   

ವಿಜಯಪುರ: ‘ಪಾಲಿಕೆ ಚುನಾವಣೆ ವಿಜಯೋತ್ಸವದಲ್ಲಿ ಅಸಲಿ ಬಿಜೆಪಿಯರು ಮಾತ್ರ ಭಾಗವಹಿಸಿದ್ದೇವೆ, ನಕಲಿ ಬಿಜೆಪಿಯವರು ಬಂದಿಲ್ಲ’ ಎಂಬ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹೇಳಿಗೆ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿರುಗೇಟು ನೀಡಿದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಭೀಮಾ ಶಂಕರ ಹದನೂರ, ‘ಅಸಲಿ ಬಿಜೆಪಿ ಯಾರು, ನಕಲಿ ಬಿಜೆಪಿ ಯಾರೂ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ’ ಎಂದರು.

‘ನಾವ್ಯಾರೂ ನಕಲಿ ಅಲ್ಲ,‌ 30ರಿಂದ 40 ವರ್ಷಗಳಿಂದ ಜಿಲ್ಲಾ ಬಿಜೆಪಿಯಲ್ಲಿ ಇದ್ದೇವೆ, ಸೋಲು, ಗೆಲುವು ಯಾವುದನ್ನೂ ಲೆಕ್ಕಿಸದೇ ಪಕ್ಷದಲ್ಲಿ ನಿಷ್ಠೆಯಿಂದ ಇದ್ದೇವೆ, ಅವಕಾಶ ಸಿಕ್ಕಿಲ್ಲ ಎಂದು ಬೇರೆ ಪಕ್ಷಗಳಿಗೆ ಹೋಗಿಲ್ಲ’ ಎಂದು ಹರಿಹಾಯ್ದರು.

‘ಬಸನಗೌಡ ಪಾಟೀಲ ಯಾವ ಲೆಕ್ಕದಲ್ಲಿ ಅಸಲಿ ಬಿಜೆಪಿಗ ಎಂಬುದನ್ನು ಸಾಬೀತು ಪಡಿಸಬೇಕು’ ಎಂದು ಸವಾಲು ಹಾಕಿದರು

ADVERTISEMENT

‘ತನ್ನ ಸ್ವಾರ್ಥ ರಾಜಕಾರಣಕ್ಕೆ ಬಿಜೆಪಿಯನ್ನು ಬಲಿಕೊಟ್ಟು ಮೋಸ ಮಾಡಿರುವ, ಪಕ್ಷವನ್ನು ಬಿಟ್ಟು ಜೆಡಿಎಸ್‌ಗೆ ಹೋಗಿರುವ, ಬಿಜೆಪಿ ನಾಯಕರನ್ನು ಟೀಕೆ ಮಾಡಿ ಎರಡು ಬಾರಿ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನಕಲಿ ಬಿಜೆಪಿಗ, ಜಿಲ್ಲೆಯಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ನಾವೆಲ್ಲರೂ ಅಸಲಿ’ ಎಂದು ಸಮರ್ಥಿಸಿಕೊಂಡರು.

‘ಈ ಹಿಂದೆ ವಿಧಾನ ಪರಿಷತ್‌ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ನ್ಯಾಮಗೊಂಡ ವಿರುದ್ಧ ಪಕ್ಷ ವಿರೋಧಿಯಾಗಿ ಸ್ಪರ್ಧಿಸಿದ್ದು ಯಾರು? ಇತ್ತೀಚೆಗೆ ನಡೆದ ಸಹಕಾರ ಭಾರತಿ ಚುನಾವಣೆಯಲ್ಲಿ ಬಿಜೆಪಿ–ಸಂಘದ ಅಧಿಕೃತ ಅಭ್ಯರ್ಥಿ ಸಂಜಯ ಪಾಟೀಲ ಕನಮಡಿ ವಿರುದ್ಧ ಪುತ್ರನನ್ನು ಕಣಕ್ಕಿಳಿಸಿದವರು ಯಾರು? ವಾಜಪೇಯಿ ಸರ್ಕಾರದ ಅವಧಿಯಲ್ಲಿ ಅಣು ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿ ಮತ ಹಾಕದೇ ಓಡಿ ಹೋದವರು ಯಾರು? ಎಂದು ಪ್ರಶ್ನಿಸಿದರು.

‘ವಿಜಯಪುರ ನಗರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮೂರ್ತಿ ಉದ್ಘಾಟನೆಯನ್ನು ಪ್ರಧಾನಿ ಮೋದಿ ಅವರು ವರ್ಚುವಲ್‌ ಮೂಲಕ ಉದ್ಘಾಟಿಸಲಿದ್ದಾರೆ ಎಂದು ಸಿದ್ದೇಶ್ವರ ಶ್ರೀಗಳಿಗೆ ಸುಳ್ಳು ಹೇಳಿ ಅವರನ್ನು ಕಾರ್ಯಕ್ರಮಕ್ಕೆ ಕರೆದೊಯ್ದವರು ಯಾರು?’ ಎಂದು ಪ್ರಶ್ನಿಸಿದರು.

‘ಮುಖ್ಯಮಂತ್ರಿಯಾಗಲು ಬಿಜೆಪಿಯಲ್ಲಿ ₹2 ಸಾವಿರ ಕೋಟಿ ಕೊಡಬೇಕು, ಕೋವಿಡ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ  ಹಗರಣವಾಗಿದೆ, ಪಕ್ಷದ ಈ ಹಿಂದಿನ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್ ಹಣ ತೆಗೆದುಕೊಂಡು ಹೋಗಲು ಬಂದಿದ್ದಾರೆ’ ಎಂದೆಲ್ಲ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವಾಗುವಂತೆ ಮಾಡಿದವರು ಯಾರು? ಎಂದು ಪ್ರಶ್ನಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.