ವಿಜಯಪುರ:‘ಬಿಜೆಪಿ ಕಾರ್ಯಕರ್ತರ ಪಕ್ಷ. ಎತ್ತರ, ದಾಢಸಿ ಇದ್ದಾಕ್ಷಣ ನಾಯಕನಾಗಲ್ಲ. ಇಲ್ಲಿ ಪಕ್ಷವೇ ಹೀರೋ. ರಾಜ್ಯ ಘಟಕದ ಅಧ್ಯಕ್ಷರ ಸ್ಥಾನಕ್ಕೆ ಟವೆಲ್ ಹಾಕಲು ಅದೇನು ಬಸ್ಸು–ರೈಲಿನ ಸೀಟಲ್ಲ’ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಯತ್ನಾಳ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ನೀಡಿದರು.
‘ವರಿಷ್ಠರು ಸಮರ್ಥರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಅರ್ಹತೆ ಇದ್ದವರು ಆಗ್ತಾರೆ. ನಾನು ಆಕಾಂಕ್ಷಿಯಲ್ಲ. ಆದರೆ ಎಲ್ಲ ಅರ್ಹತೆಗಳನ್ನು ಹೊಂದಿರುವೆ’ ಎಂದು ಸೋಮವಾರ ನಗರದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.
‘ನಾನು ಪಕ್ಷ ನಿಷ್ಠ. ನನ್ನ ರಾಜಕಾರಣ ಏನಿದ್ದರೂ ಬಿಜೆಪಿಯಲ್ಲೇ. ಪಕ್ಷ ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಉತ್ತರ ಕರ್ನಾಟಕ–ದಕ್ಷಿಣ ಕರ್ನಾಟಕ ಎಂಬ ಭಾಗ ಬೇಡ. ಈ ಭಾಗದವರಿಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂಬುದಕ್ಕೆ ನನ್ನದು ಸಹಮತವಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯ ಘಟಕದ ಅಧ್ಯಕ್ಷರಲ್ಲ, ರಾಷ್ಟ್ರೀಯ ಘಟಕದ ಅಧ್ಯಕ್ಷರಾದರೂ ನಾನು ಬಿಜೆಪಿ ಬಿಡಲ್ಲ. ನನ್ನ ರಾಜಕಾರಣ ಬಿಜೆಪಿಯಲ್ಲೇ’ ಎಂದು ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪುನರುಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.