ADVERTISEMENT

ವಿಜಯಪುರ: ನಿರ್ಗತಿಕರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಬಿಜೆಪಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:11 IST
Last Updated 14 ಸೆಪ್ಟೆಂಬರ್ 2025, 6:11 IST
ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಲಾಯಿತು
ವಿಜಯಪುರ ಜಿಲ್ಲಾ ಬಿಜೆಪಿ ಘಟಕದಿಂದ ಶನಿವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಲಾಯಿತು   

ವಿಜಯಪುರ: ಸಿಂದಗಿಯಲ್ಲಿ 84 ಕುಟುಂಬಗಳ ಮನೆಗಳನ್ನು ತೆರವುಗೊಳಿಸಿ ನಿರ್ಗತಿಕರನ್ನಾಗಿ ಮಾಡಿರುವುದನ್ನು ಖಂಡಿಸಿ ಹಾಗೂ ಎಲ್ಲ ಕುಟುಂಬಗಳಿಗೆ ಕೂಡಲೇ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಶನಿವಾರ ಪ್ರತಿಭಟನೆ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರಗೆ ಮನವಿ ಸಲ್ಲಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಡವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ, ತೆರವು ಕಾಮಗಾರಿ ನಡೆಸುವ ಪೂರ್ವದಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಏಕಾಏಕಿ ಕಾಮಗಾರಿ ನಡೆಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸಿಂದಗಿ ನಗರ ವ್ಯಾಪ್ತಿಯ ವಾರ್ಡ್‌ ನಂ 23 ರಲ್ಲಿನ ಸರ್ವೆ ಸಂಖ್ಯೆ 842/1 ಅ ಕ್ಷೇತ್ರ 4 ಎಕರೆ ಪುರಸಭೆಯ ಜಮೀನಿನಲ್ಲಿ 2004ನೇ ಸಾಲಿನಲ್ಲಿ ಅಂದಿನ ಶಾಸಕರು, ಪುರಸಭೆ ಅಧಿಕಾರಿಗಳು ಹಾಗೂ ತಹಶೀಲ್ದಾರ್‌ ಸಮ್ಮುಖದಲ್ಲಿ ಸುಮಾರು 84 ಮುಗ್ಧ, ಕೂಲಿಕಾರ್ಮಿಕ, ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಎಲ್ಲ ಕುಟುಂಬಗಳಿಗೆ ಕಟ್ಟಡ ಪರವಾನಗಿ ನೀಡಿ, ಪುರಸಭೆಗೆ ತೆರಿಗೆಯೂ ಕೂಡ ಪಾವತಿ ಮಾಡಿದ್ದರು. ಈಗ 20 ವರ್ಷಗಳ ನಂತರ ಅದೇ ಕ್ಷೇತ್ರದ 2 ಎಕರೆ 10 ಗುಂಟೆ ಜಮೀನಿಗೆ ಹಾಗೂ 84 ಕುಟುಂಬಗಳನ್ನು ತೆರವುಗೊಳಿಸಿ ಅನ್ಯಾಯವೆಸಗಿರುವುದು ನೋವು ತಂದಿದೆ, ಸಂಬಂಧಿಸಿದ ಸರ್ವೆ ಹಾಗೂ ಇನ್ನಿತರ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂದು 84 ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಕಾರ್ಯದಿಂದಾಗಿ ಸುಮಾರು ₹2.5 ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ದಿನನಿತ್ಯದ ಕಾರ್ಯಗಳು ಸ್ಥಗಿತಗೊಂಡು ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಈ ವಿಷಯವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸಂಜಯ ಪಾಟೀಲ ಕನಮಡಿ, ಶಿವರುದ್ರ ಬಾಗಲಕೋಟ, ಶಂಕರಗೌಡ ಪಾಟೀಲ, ಈರಣ್ಣ ರೇವೂರ, ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಸಾಬು ಮಾಶ್ಯಾಳ, ಮಲ್ಲಮ್ಮ ಜೋಗೂರ, ಭರತ ಕೋಳಿ, ಬಸವರಾಜ ಹಳ್ಳಿ, ಗೇಸುದರಾಜ್ ಇನಾಮದಾರ, ಶೇಖರ ಬಾಗಲಕೋಟ, ಅಶ್ವಥ ರೆಬಿನಾಳ, ರಾಜೇಶ ತಾವಸೆ, ಸಂತೋಷ ನಿಂಬರಗಿ, ಪಾಪುಸಿಂಗ್ ರಜಪೂತ, ವಿಜಯ ಹಿರೇಮಠ, ರಾಜು ಬಿರಾದಾರ, ಅಪ್ಪು ಕುಂಬಾರ, ಮಹೇಂದ್ರ ನಾಯಕ, ವಕೀಲ ಡೊಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.