ADVERTISEMENT

‘ಬೂತ್ ಮಟ್ಟದಲ್ಲಿ ಬಿಜೆಪಿ ಬಲಿಷ್ಠ’

​ಪ್ರಜಾವಾಣಿ ವಾರ್ತೆ
Published 25 ಮೇ 2022, 14:12 IST
Last Updated 25 ಮೇ 2022, 14:12 IST
ವಿಜಯಪುರ ನಗರದಲ್ಲಿ ಬುಧವಾರ ನಡೆದ ಬಿಜೆಪಿ ನಗರ ಮಂಡಳ ಕಾರ್ಯಕಾರಣಿ ಸಭೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಉದ್ಘಾಟಿಸಿದರು
ವಿಜಯಪುರ ನಗರದಲ್ಲಿ ಬುಧವಾರ ನಡೆದ ಬಿಜೆಪಿ ನಗರ ಮಂಡಳ ಕಾರ್ಯಕಾರಣಿ ಸಭೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಉದ್ಘಾಟಿಸಿದರು   

ವಿಜಯಪುರ:ಬೂತ್ ಮಟ್ಟದಲ್ಲಿ ಬಿಜೆಪಿ ಸಂಘಟನೆ ಚುರುಕುಗೊಂಡಿದ್ದು, 225 ಬೂತ್ ಸಮಿತಿಗಳು ಕಾರ್ಯಾರಂಭ ಮಾಡುತ್ತಿರುವುದು ಬಿಜೆಪಿಯ ಕ್ರೀಯಾಶೀಲ ಪಕ್ಷ ಸಂಘಟನೆಯ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಮಳುಗೌಡ ಪಾಟೀಲ ಹೇಳಿದರು.

ನಗರದಲ್ಲಿ ನಡೆದ ಬಿಜೆಪಿ ನಗರ ಮಂಡಳ ಕಾರ್ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.

ಬೂತ್ ಮಟ್ಟದಲ್ಲಿ ಪಕ್ಷ ಬಲಿಷ್ಠವಾಗಿದೆ, ಪಕ್ಷದ ಸಂಘಟನೆಯ ಕಾರ್ಯ ಇನ್ನೂ ಚುರುಕುಗೊಳಿಸಬೇಕಿದೆ, ಬಿಜೆಪಿ ಸರ್ಕಾರ ರೂಪಿಸಿರುವ ಜನಪರ ಯೋಜನೆ, ಸಾಧನೆಗಳ ಬಗ್ಗೆ ಜನರ ಮನೆಬಾಗಿಲಿಗೆ ಮುಟ್ಟಿಸುವ ಕೆಲಸ ನಡೆಯಬೇಕಿದೆ ಎಂದರು.

ADVERTISEMENT

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಕಾರ್ಯಕರ್ತರೇ ಬಿಜೆಪಿಯ ಅಮೂಲ್ಯ ಆಸ್ತಿ, ಕಾರ್ಯಕರ್ತರೇ ಬಿಜೆಪಿಯ ಬೆನ್ನೆಲುಬು, ನಿಷ್ಠೆಯಿಂದ ದುಡಿಯುವ ಕೋಟಿ ಕೋಟಿ ಕಾರ್ಯಕರ್ತರ ಶ್ರಮ ಹಾಗೂ ಆಶೀರ್ವಾದ ಬಿಜೆಪಿಗೆ ಇದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಮಾತನಾಡಿ, ಪರಿಶುದ್ಧವಾದ ಆಡಳಿತವನ್ನು ನಡೆಸುತ್ತಿರುವ ಪ್ರಧಾನಿ ಮೋದಿ ಅವರು ಜನರ ನಾಡಿಮಿಡಿತ ಅರಿತಿದ್ದಾರೆ, ಈ ಹಿಂದೆ ಸಾಧಕರು ಪ್ರಶಸ್ತಿಗೆ ಅರ್ಜಿ ಹಾಕಬೇಕಿತ್ತು, ಆದರೆ ಈಗ ನೈಜ ಸಾಧಕರಿಗೆ ಪ್ರಶಸ್ತಿ ಮನೆಬಾಗಿಲಿಗೆ ಹುಡುಕಿಕೊಂಡು ಬರುತ್ತಿದೆ, ಇದು ಮೋದಿ ಅವರ ಆಡಳಿತ ಎಂದರು.

ರಷ್ಯಾ-ಉಕ್ರೇನ್ ಯುದ್ಧ ತಡೆಗೆ ವಿಶ್ವಸಂಸ್ಥೆಯೇ ಮೋದಿ ಅವರ ಮೊರೆ ಹೋಗಿತ್ತು, ಇದು ಭಾರತದ ಬಲಿಷ್ಠತೆಗೆ ಉದಾಹರಣೆ. ಗತವೈಭವದಿಂದ ಕಂಗೊಳಿಸುತ್ತಿದ್ದ ನಮ್ಮ ಹೆಮ್ಮೆಯ ಭಾರತವನ್ನು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಅಧೋಗತಿಗೆ ತಳ್ಳಿತ್ತು, ಈಗ ಮೋದಿ ಭಾರತದ ಗತವೈಭವವನ್ನು ಮರಳಿ ತರುವ ನಿಟ್ಟಿನಲ್ಲಿ ಶ್ರಮವಹಿಸಿ ದುಡಿಯುತ್ತಿದ್ದಾರೆ, ಇದು ಕಾಂಗ್ರೆಸ್‍ನವರಿಗೆ ಸಹಿಸಲು ಆಗುತ್ತಿಲ್ಲ, ಪಠ್ಯಕ್ರಮ ವಿಷಯವಾಗಿ ಸುಮ್ಮನೆ ತಗಾದೆ ತೆಗೆಯುತ್ತಿದ್ದಾರೆ ಎಂದರು.

ಬಿಜೆಪಿಗೆ ಕಾರ್ಯಕರ್ತರೇ ದೊಡ್ಡ ಆಸ್ತಿ, ಕ್ರೀಯಾಶೀಲ ಕಾರ್ಯಕರ್ತರ ಶ್ರಮದ ಫಲವಾಗಿಯೇ ಬಿಜೆಪಿ ಪಕ್ಷ ಬಲಿಷ್ಠವಾಗಿದೆ ಎಂದರು.

ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿದರು. ಪಕ್ಷದ ಪ್ರಮುಖರಾದ ವಿವೇಕಾನಂದ ಡಬ್ಬಿ, ಮಹಾನಗರ ಪಾಲಿಕೆಯ ಮಾಜಿ ಉಪಮಹಾಪೌರ ಗೋಪಾಲ ಘಟಕಾಂಬಳೆ, ಛಾಯಾ ಮಸಿಯನವರ, ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬಿರಾದಾರ, ಪಾಪುಸಿಂಗ್ ರಜಪೂತ, ಭರತ್ ಕೋಳಿ, ಭೀಮಾಶಂಕರ ಹದನೂರ, ಡಾ.ಸುರೇಶ ಬಿರಾದಾರ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರು, ವಿವಿಧ ಘಟಕಗಳ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು ಮಹಿಳಾ ಮೋರ್ಚಾ ಪದಾಧಿಕಾರಿಗಳು ನಗರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.