
ಹೊರ್ತಿ: ಸಮೀಪದ ಕನಕನಾಳ ಗ್ರಾಮದ ರೈತರಾದ ದುಂಡಪ್ಪ ತುಕಾರಾಮ ಪವಾರ ಮತ್ತು ಅವರ ಮಗ ಅಶೋಕ ಪವಾರ ತಮ್ಮ ತೋಟದ ಒಂದೂವರೆ ಎಕರೆಯಲ್ಲಿ ಬದನೆಕಾಯಿ ಬೆಳೆದು ಉತ್ತಮ ಲಾಭ ಗಳಿಸಿದ್ದಾರೆ.
ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಸಾಂಗೋಲಾ ಜವಾರಿ’ ತಳಿಯ ಬದನೆಕಾಯಿ ಸಸಿಗಳನ್ನು ಒಂದೂವರೆ ಎಕರೆಯಲ್ಲಿ ನಾಟಿ ಮಾಡಿದ್ದಾರೆ. ಅಂದಾಜು ₹ 15 ಸಾವಿರದಷ್ಟು ಖರ್ಚು ಮಾಡಿ, 1,000 ಸಸಿಗಳನ್ನು ಬೆಳೆದಿದ್ದಾರೆ. ನಾಟಿ ಮಾಡಿದ ನಾಲವತ್ತೈದು ದಿನಗಳಲ್ಲಿ ಬದನೆಕಾಯಿ ಬೆಳೆ ಬಂದಿದೆ.
ಗಿಡದ ಬುಡಕ್ಕೆ ಮಲ್ಚಿಂಗ್ ಪೇಪರ್ ಹಾಕಿದ್ದಲ್ಲದೇ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು, ಡಿಸೆಂಬರ್ ತಿಂಗಳ ಮೂದಲ ವಾರದಲ್ಲಿ ಕಟಾವು ಮಾಡಲು ಆರಂಭಿಸಿದರು. ಈಗ ವಾರದಲ್ಲಿ ಐದು ದಿನ ಅಂದಾಜು, 20ಕ್ಕೂ ಹೆಚ್ಚು ತುಂಬಿದ ಟ್ರೇಗಳನ್ನು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಒಂದು ಟ್ರೇನಲ್ಲಿ ಅಂದಾಜು 15ರಿಂದ 18ಕೆ.ಜಿ.ವರೆಗೆ ಬದನೆಕಾಯಿಗಳು ಇರುತ್ತವೆ.
‘ಸ್ಥಳೀಯ ಇಂಚಗೇರಿ, ಜಿಗಜಿವಣಿ, ಕನ್ನೂರ, ಹೊರ್ತಿ ಸಂತೆ ಹಾಗೂ ಚಡಚಣ ಮಾರುಕಟ್ಟೆಗೂ ಕಳುಹಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಪ್ರತಿ ಟ್ರೇಗೆ ₹500 ರಿಂದ ₹550ರ ದರದಲ್ಲಿ ಮಾರಾಟವಾಗುತ್ತದೆ. ವಾರದಲ್ಲಿ ಐದು ದಿನಗಳ ಕಾಲ ಕಟಾವು ಮಾಡುತ್ತೇವೆ. ಬೆಳೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಿದರೆ ಏಳೆಂಟು ತಿಂಗಳುಗಳ ಕಾಲ ಉತ್ತಮ ಇಳುವರಿ ಪಡೆಯಬಹುದು’ ಎನ್ನುತ್ತಾರೆ ದುಂಡಪ್ಪ.
‘ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮಾಡಗ್ಯಾಳ ಗ್ರಾಮದ ಅಗ್ರಿ ಮಾಲ್ ನರ್ಸರಿಯಿಂದ ಜವಾರಿ ಬದನೆ ಸಸಿ ತಂದು ಬದನೆಕಾಯಿ ಬೆಳೆಯಲಾಗಿದೆ. ಮುಂಬರುವ ನಾಲ್ಕೈದು ತಿಂಗಳುಗಳಲ್ಲಿ ಉತ್ತಮ ಲಾಭ ಪಡೆದುಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ ದಿನವೂ ಒಬ್ಬ ಕೂಲಿ ಕಾರ್ಮಿಕರಿಗೆ ₹ 400ರಂತೆ ನಾಲ್ಕೈದು ಮಹಿಳಾ ಕೃಷಿ ಕಾರ್ಮಿಕರಿಗೆ ಉದ್ಯೋಗ ನೀಡಲು ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.
ಶಾಲಾ ಶಿಕ್ಷಕರಾಗಿರುವ ಅಶೋಕ ದುಂಡಪ್ಪ ಪವಾರ ಶಾಲೆಯ ರಜೆ ಮತ್ತು ಬಿಡುವಿನ ಸಮಯದಲ್ಲಿ ತೋಟದ ಕಾರ್ಯದಲ್ಲಿ ತಂದೆಯ ಜೊತೆ ಕೃಷಿ ಕಾಯಕ ಮಾಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.