
ಇಂಡಿ: ತಾಲ್ಲೂಕಿನ ಬರಗುಡಿಯಿಂದ ಲಚ್ಯಾಣ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ನೀರಿನ ಟ್ಯಾಂಕ್ ಹತ್ತಿರದ ಪಕ್ಕದ ಹೊಲದಲ್ಲಿ ಸಿದ್ರಾಮ ದೊಂಡಿಬಾ ಕ್ಷತ್ರಿ (31) ಎಂಬುವವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಆರೋಪಿಗಳಾದ ಅದೇ ಗ್ರಾಮದ ಲಾಲ್ಯಾ ಅಲಿಯಾಸ್ ರಜನಿಕಾಂತ ಗಿರಣಿವಡ್ಡರ, ಪರಸು ದಶರಥ ಕ್ಷತ್ರಿ, ಸರ್ಜನ ಸಿದ್ದಾರಾಮ ಕ್ಷತ್ರಿ, ಕಾಂತಪ್ಪ ಗಜಪ್ಪ ಕ್ಷತ್ರಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮತ್ತು ಕೊಲೆಯಾದ ವ್ಯಕ್ತಿ ಪರಸ್ಪರ ಸಂಬಂಧಿಗಳಾಗಿದ್ದಾರೆ. ಹಳೇ ವೈಷಮ್ಯದಿಂದ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಮಾರಕಾಸ್ತ್ರಗಳಿಂದ ಹೊಡೆದು ಶನಿವಾರ ರಾತ್ರಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ ಡಿವೈಎಸ್‌ಪಿ ಸದಾಶಿವ ಕಟ್ಟಿಮನಿ, ಪಿಎಸ್ಐ ರಾಜು ಮಮದಾಪುರ ಭೇಟಿ ನೀಡಿ ಪರಿಶೀಲಿಸಿದರು. ಇಂಡಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.