ADVERTISEMENT

ಮುದ್ದೇಬಿಹಾಳ: ಬೈಕ್ ನಿಲುಗಡೆಗೆ ಮೀಸಲಾಯ್ತು ಬಸ್ ನಿಲ್ದಾಣ

ಮುದ್ದೇಬಿಹಾಳ ಪಟ್ಟಣದ ಬಸ್ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 6:43 IST
Last Updated 28 ಮಾರ್ಚ್ 2025, 6:43 IST
ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ವಿಜಯಪುರ ಬಸ್‌ಗಳು ನಿಲುಗಡೆಯಾಗುವ ಫ್ಲಾಟ್‌ಫಾರ್‌ಂನಲ್ಲಿ ಬೈಕಗಳನ್ನು ನಿಲುಗಡೆ ಮಾಡಿರುವುದು 
ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ವಿಜಯಪುರ ಬಸ್‌ಗಳು ನಿಲುಗಡೆಯಾಗುವ ಫ್ಲಾಟ್‌ಫಾರ್‌ಂನಲ್ಲಿ ಬೈಕಗಳನ್ನು ನಿಲುಗಡೆ ಮಾಡಿರುವುದು    

ಮುದ್ದೇಬಿಹಾಳ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಇರುವ ಸ್ಥಳದಲ್ಲಿ ಬೈಕ್‌ಗಳನ್ನು ಯದ್ವಾತದ್ವಾ ನಿಲ್ಲಿಸುತ್ತಿರುವುದರಿಂದ ಬಸ್‌ಗಳ ನಿಲುಗಡೆಗೆ ಜಾಗೆವೇ ಇಲ್ಲದಂತಹ ಪರಿಸ್ಥಿತಿ ನಿತ್ಯವೂ ಕಂಡು ಬರುತ್ತಿದೆ.

ಇದೇನು ಬಸ್‌ಗಳ ನಿಲುಗಡೆಗೆ ನಿರ್ಮಿಸಿರುವ ಸ್ಥಳವೋ ಅಥವಾ  ಬೈಕ್‌ಗಳ ನಿಲುಗಡೆಗಾಗಿ ಮಾಡಿದ ಜಾಗವೋ ಎಂಬುದು ಪ್ರಯಾಣಿಕರಿಗೆ ಗೊಂದಲ ಉಂಟು ಮಾಡಿದೆ.

ಬಸ್ ನಿಲ್ದಾಣದ ಅಂಕಣ ಸಂಖ್ಯೆ 9 ರಿಂದ 12ರ ವರೆಗೆ ಬಸ್ ನಿಲುಗಡೆ ಆಗುವ ಬದಲು ಅಲ್ಲಿ ಬೈಕ್‌ಗಳ ನಿಲುಗಡೆ ಮಾಡಲಾಗಿರುತ್ತದೆ. ಬೈಕ್‌ಗಳನ್ನು ನಿಲ್ಲಿಸುತ್ತಿರುವ ಕಾರಣ ಸಾಕಷ್ಟು ತೊಂದರೆಯೂ ಪ್ರಯಾಣಿಕರಿಗೆ ಆಗುತ್ತಿದೆ.

ADVERTISEMENT

ವಿಜಯಪುರ, ಸೋಲಾಪುರ, ಇಚಲಕರಂಜಿ ಸೇರಿದಂತೆ ದೂರದ ಊರುಗಳಿಗೆ ತೆರಳುವ ಬಸ್‌ಗಳೆಲ್ಲ ಇದೇ ಫ್ಲಾಟ್‌ಫಾರಂನಲ್ಲಿ ನಿಲುಗಡೆ ಆಗಬೇಕು. ಆದರೆ ವಿಜಯಪುರ, ಬಸವನ ಬಾಗೇವಾಡಿ ಮಾರ್ಗದಲ್ಲಿ ಹೋಗುವ ಬಸ್‌ಗಳನ್ನು ಫ್ಲಾಟ್‌ಫಾರಂ ಬಿಟ್ಟು ಬೇರೆ ಕಡೆಗೆ ನಿಲ್ಲಿಸಲಾಗುತ್ತಿದೆ.

ಬೇರೆ ಊರುಗಳಿಂದ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪ್ರಯಾಣಿಕರು ತಾವು ಹೋಗುವ ಬಸ್ ಎಲ್ಲಿ ನಿಲುಗಡೆ ಆಗುತ್ತಿವೆ ಎಂಬ ಗೊಂದಲಕ್ಕೆ ಒಳಗಾಗುವಂತಾಗಿದೆ.

ಇಲ್ಲಿರುವ ಸಾರಿಗೆ ನಿಯಂತ್ರಕರು, ಸಾರಿಗೆ ಸಂಸ್ಥೆಯ ಸಿಬ್ಬಂದಿ, ಚಾಲಕರು, ನಿರ್ವಾಹಕರು ನಿಲ್ದಾಣದ ಬಸ್ ನಿಲುಗಡೆ ಆಗುವ ಅಂಕಣಗಳಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಬಾರದು ಎಂದು ಬೈಕ್ ಸವಾರರಿಗೆ ಕಟ್ಟುನಿಟ್ಟಿನ ತಿಳಿವಳಿಕೆ ಹೇಳಬೇಕಿದೆ ಎಂಬುದು ಪ್ರಯಾಣಿಕರು ಒತ್ತಾಯವಾಗಿದೆ.

ಬೈಕುಗಳ ನಿಲುಗಡೆಗೂ ನೆರಳಿನ ವ್ಯವಸ್ಥೆಯನ್ನು ಹುಡುಕಾಡುವ ಬೈಕ್ ಸವಾರರು ನೇರವಾಗಿ ಖಾಲಿ ಇರುವ ಫ್ಲಾಟಫಾರ್‌ಂನಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ.

ಮೊದಲು ಸಾರಿಗೆ ಘಟಕದ ವಿಜಯಪುರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಇಲ್ಲಿ ನಿಲುಗಡೆ ಮಾಡಿಸಿದರೆ ಈ ತೊಂದರೆಗೆ ಬ್ರೇಕ್ ಬೀಳಬಹುದು ಎಂಬುದು ಪ್ರಜ್ಞಾವಂತರ ಅಭಿಮತ.

ಅನುಕೂಲಗಳೂ ಇವೆ:

ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಪುರಸಭೆಯೊಂದಿಗೆ ಕೆಕೆಆರ್‌ಟಿಸಿ ಅಧಿಕಾರಿಗಳು ಶುಚಿತ್ವಕ್ಕೆ ಒತ್ತು ನೀಡಿದ್ದಾರೆ. ರಾತ್ರಿ ಸಮಯದಲ್ಲಿ ಬಸ್ ನಿಲ್ದಾಣದಿಂದ ಬಜಾರದೊಳಕ್ಕೆ ಹೋಗುವ ರಸ್ತೆಗೆ ಸಂಪರ್ಕಿಸುವ ಕಿರುದಾರಿಯಲ್ಲಿ ಪುರಸಭೆಯವರು ಬೀದಿ ದೀಪ ಅಳವಡಿಸಿದ್ದು, ಫೇವರ್ ಬ್ಲಾಕ್ ಹಾಕಿ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಸಾರಿಗೆ ಅಧಿಕಾರಿಗಳು ಬಸ್ ನಿಲ್ದಾಣದ ಪಕ್ಕದಲ್ಲಿಯೇ ಇರುವ ಕೆಬಿಎಂಪಿಎಸ್ ಶಾಲೆಯೊಳಗಡೆ ಪುಂಡಪೋಕರಿಗಳು ಹೋಗದಂತೆ ತಾತ್ಕಾಲಿಕ ತಗಡಿನ ತಡೆಗೋಡೆ ಹಾಕಿದ್ದಾರೆ.

ಸಾರ್ವಜನಿಕರು ಪ್ರಯಾಣಿಕರು ವಿಜಯಪುರಕ್ಕೆ ಹೋಗುವ ಬಸ್‌ಗಳು ಎಲ್ಲಿ ನಿಲುಗಡೆ ಆಗುತ್ತವೆ ಎಂದು ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಸಿಬ್ಬಂದಿ ಫ್ಲಾಟಫಾರ್‌ಂನಲ್ಲಿ ಬೈಕ್ ನಿಲುಗಡೆ ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಬೇಕು.
-ಉದಯ ರಾಯಚೂರ ಯುವ ಹೋರಾಟಗಾರ
ಫ್ಲಾಟಫಾರ್‌ಂನಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಬೇಡಿ ಎಂದರೂ ಕೇಳುತ್ತಿಲ್ಲ. ಬೈಕ್ ನಿಲುಗಡೆಗೆ ಪ್ರತ್ಯೇಕ ಜಾಗೆಯಲ್ಲಿ ಶುಲ್ಕ ಪಾವತಿಯೊಂದಿಗೆ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
-ಎ.ಎಚ್.ಮದಭಾವಿ ಘಟಕ ವ್ಯವಸ್ಥಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.