ADVERTISEMENT

ಕರ್ತವ್ಯಕ್ಕೆ ಹಾಜರಾದರೆ ₹ 200 ಪ್ರೋತ್ಸಾಹಧನ!

ನಾಲ್ಕು ದಿನ ಪೂರೈಸಿದ ಸಾರಿಗೆ ನೌಕರರ ಮುಷ್ಕರ; ಕೆಲಸಕ್ಕೆ ಬರಲು ನಿವೃತ್ತರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 12:08 IST
Last Updated 10 ಏಪ್ರಿಲ್ 2021, 12:08 IST
ವಿಜಯಪುರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಶನಿವಾರ ಬಸ್‌ಗಾಗಿ ಕಾದುಕುಳಿತಿರುವ ಪ್ರಯಾಣಿಕರು–ಪ್ರಜಾವಾಣಿ ಚಿತ್ರ
ವಿಜಯಪುರ ಕೇಂದ್ರ ಬಸ್‌ ನಿಲ್ದಾಣದಲ್ಲಿ ಶನಿವಾರ ಬಸ್‌ಗಾಗಿ ಕಾದುಕುಳಿತಿರುವ ಪ್ರಯಾಣಿಕರು–ಪ್ರಜಾವಾಣಿ ಚಿತ್ರ   

ವಿಜಯಪುರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ನಾಲ್ಕನೇ ದಿನ ಪೂರೈಸಿದ್ದು, ಜಿಲ್ಲೆಯಲ್ಲಿ ಸಾರ್ವಜನಿಕ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.

ಸಾರಿಗೆ ಬಸ್‌ಗಳ ಸಂಚಾರವನ್ನು ಆರಂಭಿಸಲು ಅಧಿಕಾರಿಗಳು ಪರ್ಯಾಯ ಮಾರ್ಗಗಳ ಮೊರೆ ಹೋದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಿವೃತ್ತ ಚಾಲಕ, ನಿರ್ವಾಹಕರಿಗೆ ಕರೆ ಪತ್ರ ನೀಡಿದರೂ ಇದುವರೆಗೂ ಯಾರೊಬ್ಬರೂ ಕೆಲಸಕ್ಕೆ ಹಾಜರಾಗಿಲ್ಲ.

ಪ್ರೋತ್ಸಾಹ ಧನ:

ADVERTISEMENT

ಮುಷ್ಕರ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ವೇತನದ ಜೊತೆಗೆ ದಿನವೊಂದಕ್ಕೆ ₹ 200 ಪ್ರೋತ್ಸಾಹಧನ ನೀಡಲಾಗುವುದು. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಹಾಜರಾಗಬೇಕು ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ವಿಭಾಗೀಯ ಸಂಚಾಲಕ ನಾರಾಯಣಪ್ಪ ಕುರುಬರ ಮನವಿ ಮಾಡಿದ್ದಾರೆ.

ಸುಳ್ಳು ಸುದ್ದಿ:

ವಿಜಯಪುರ ಘಟಕ 1,2 ಮತ್ತು 3 ಹಾಗೂ ಮುದ್ದೇಬಿಹಾಳ ಘಟಕದದ ವ್ಯವಸ್ಥಾಪಕರು ಕರ್ತವ್ಯಕ್ಕೆ ಬರುವ ಸಿಬ್ಬಂದಿಗಳನ್ನು ವಾಪಸ್‌ ಕಳುಹಿಸುತ್ತಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಕುರುಬರ ಹೇಳಿದರು.

ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರ ಮನೆ,ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಅವರು ವಿನಂತಿಸಿದರು.

245 ಜನ ಹಾಜರು:

ಶನಿವಾರ 245 ಜನ ಚಾಲಕ, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿದ್ದು, ಒಟ್ಟು 40 ಬಸ್‌ಗಳು ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿವೆ ಎಂದು ಕುರುಬರ ತಿಳಿಸಿದರು.

ಖಾಸಗಿ ವಾಹನ ಕಾರ್ಯಾಚರಣೆ:

ನಗರ ಕೇಂದ್ರ ಬಸ್‌ ನಿಲ್ದಾಣದ ಫ್ಲಾಟ್‌ ಫಾರಂನಿಂದಲೇ ಖಾಸಗಿ ಬಸ್‌, ಕ್ರೂಸರ್‌, ಟಂಟಂ, ಆಟೊಗಳು ಕಾರ್ಯಾಚರಣೆ ನಡೆಸಿದವು. ಹುಬ್ಬಳ್ಳಿ, ಕಲಬುರ್ಗಿ ಸೇರಿದಂತೆ ಜಿಲ್ಲೆಯ ಸಿಂದಗಿ, ಇಂಡಿ, ಮುದ್ದೇಬಿಹಾಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಖಾಸಗಿ ವಾಹನಗಳು ಸಂಚರಿಸಿದವು. ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕ್ಷೀಣವಾಗಿತ್ತು.

ಮುಷ್ಕರದ ಹಿನ್ನೆಲೆಯಲ್ಲಿ ಹಾಗೂ ಈ ನಡುವೆ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ನಗರದ ಮಾರುಕಟ್ಟೆಯಲ್ಲಿ ಯುಗಾದಿ ಹಬ್ಬದ ಖರೀದಿಯೂ ಕಳೆಗುಂದಿದೆ. ಅಂಗಡಿಕಾರರು ನಿರೀಕ್ಷಿತ ಪ್ರಮಾಣದ ವ್ಯಾಪಾರ, ವಹಿವಾಟು ಇಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.