ADVERTISEMENT

ವಿಜಯಪುರ: ರಾಷ್ಟ್ರೀಯ ಶಿಕ್ಷಣ ನೀತಿ ಹಿಂಪಡೆಯಲು ಆಗ್ರಹ

ಎಐಡಿಎಸ್‍ಓದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 16:01 IST
Last Updated 11 ನವೆಂಬರ್ 2021, 16:01 IST
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿರೋಧಿಸಿ ಹಾಗೂ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‍ ಪಾಸ್ ಒದಗಿಸಲು ಆಗ್ರಹಿಸಿ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಎಐಡಿಎಸ್‍ಓ ಕಾರ್ಯಕರ್ತರು ಮನವಿ ಸಲ್ಲಿಸಿದರು
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿರೋಧಿಸಿ ಹಾಗೂ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‍ ಪಾಸ್ ಒದಗಿಸಲು ಆಗ್ರಹಿಸಿ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಎಐಡಿಎಸ್‍ಓ ಕಾರ್ಯಕರ್ತರು ಮನವಿ ಸಲ್ಲಿಸಿದರು   

ವಿಜಯಪುರ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಹೇರಿಕೆ ವಿರೋಧಿಸಿ ಹಾಗೂಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‍ ಪಾಸ್ ಒದಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಎಐಡಿಎಸ್‍ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ಎಐಡಿಎಸ್‍ಓ ರಾಜ್ಯ ಸಮಿತಿ ಸದಸ್ಯರಾದ ಅಭಯಾ ದಿವಾಕರ ಮಾತನಾಡಿ, ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗು ಪೋಷಕರ ಅಭಿಪ್ರಾಯ ಪಡೆಯದೇ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ರಾಜ್ಯದಲ್ಲಿ ಎನ್‍ಇಪಿ ಅನುಷ್ಠಾನಕ್ಕೆ ತರಲು ಮುಂದಾಗಿರುವುದು ಖಂಡನೀಯ ಎಂದರು.

ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಏಕಾಏಕಿ ಎನ್‍ಇಪಿ-2020ರ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದೆ. ತರಗತಿಗಳು ಆರಂಭವಾಗಿದ್ದರೂ ಸಹ ಸರ್ಕಾರದ ಬಳಿ ಪಠ್ಯಕ್ರಮ ತಯಾರಿಲ್ಲ, ಪಠ್ಯಪುಸ್ತಕಗಳು ಇಲ್ಲ. ಆ ಮೂಲಕ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರವಾಗಿದೆ ಎಂದು ಆರೋಪಿಸಿದರು.

ADVERTISEMENT

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರ, ಹಿಂದಿನ ಶೈಕ್ಷಣಿಕ ನೀತಿಯಲ್ಲಿ ಯಾವ ಲೋಪದೋಷಗಳಿದ್ದವು, ಯಾವ ಕಾರಣಕ್ಕೆ ನೂತನ ನೀತಿಯ ಅನುಷ್ಠಾನ ಆಗುತ್ತಿದೆ ಎಂಬ ವಿಷಯಗಳ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಅಷ್ಟೇ ಅಲ್ಲ, ವ್ಯಾಪಕ ವಿರೋಧದ ನಡುವೆಯೂ, ಅಪ್ರಜಾತಾಂತ್ರಿಕವಾಗಿ ಶಿಕ್ಷಣ ನೀತಿಯನ್ನು ಜಾರಿ ಮಾಡುತ್ತಿದೆ ಎಂದು ದೂರಿದರು.

ರಾಜ್ಯದ ಶಿಕ್ಷಣ ವ್ಯವಸ್ಥೆ ಈಗಾಗಲೇ ಅಧೋಗತಿಗೆ ತಲುಪಿದೆ. ಶಿಕ್ಷಣ ಖಾಸಗೀಕರಣ, ದುಬಾರಿ ಶುಲ್ಕಗಳಿಂದ ಶಿಕ್ಷಣ ಪಡೆಯುವವರ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ ಎಂದು ಹೇಳಿದರು.

ಕಳೆದ 15 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 9 ಸಾವಿರ ಸರ್ಕಾರಿ ಶಾಲೆಗಳು ಮುಚ್ಚಲ್ಪಟ್ಟಿವೆ. ಏಕ ಶಿಕ್ಷಕ ಶಾಲೆಗಳು ಶೇ 58 ರಷ್ಟುಇದೆ. ಕೇವಲ 13 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇದ್ದರೆ, ಬರೋಬ್ಬರಿ 210 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಕಳೆದ ಕೆಲವು ವರ್ಷಗಳಲ್ಲಿ ತಲೆ ಎತ್ತಿವೆ. 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿದ್ದರೆ, 38 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಅಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಏರುತ್ತಿದೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಸವಾಲುಗಳಿಗೆ ಎನ್‍ಇಪಿ-2020 ಉತ್ತರ ನೀಡಿದೆಯೇ? ಸರ್ಕಾರಿ ಶಾಲೆಗಳಲ್ಲಿ 30ಕ್ಕಿಂತ ಕಡಿಮೆ ಇರುವ ಶಾಲೆಗಳನ್ನು ಒಂದೆಡೆ ಸೇರಿಸಿ ‘ಸಮೂಹ ಶಾಲೆ’ಗಳಾಗಿ ಮಾಡುತ್ತೇವೆ ಎಂದು ಪ್ರತಿಪಾದಿಸುವ ಎನ್‍ಇಪಿ, ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು, ಮೂಲ ಸೌಕರ್ಯಗಳನ್ನು ಒದಗಿಸಲು, ಶಿಕ್ಷಕರ ನೇಮಕಾತಿ ಮಾಡಲು ಆದ್ಯತೆ ನೀಡಿಲ್ಲ ಎಂದರು.

3.2 ಕೋಟಿಯಷ್ಟು ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಸಂದರ್ಭದಲ್ಲಿ ಅವರನ್ನು ಹೇಗೆ ವಾಪಸ್ ಶಿಕ್ಷಣದ ಪರಿದಿಗೆ ತರಬೇಕು, ಅವರನ್ನು ಹೇಗೆ ಪ್ರೇರೇಪಿಸಬೇಕು, ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸಮೂಹ ಶಾಲೆ ಎಂಬ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ದುರಂತ ಎಂದು ಹೇಳಿದರು.

ಎಐಡಿಎಸ್‍ಓ ಕಾರ್ಯಕರ್ತರಾದ ದೀಪಾ, ಶಿಲ್ಪಾ, ರೂಪಾ, ಬಿಂದು, ಕಾವೇರಿ, ದಾನಮ್ಮ, ಕಾವೇರಿ ರಜಪೂತ ಮತ್ತಿತರರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

***

ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ, ಕೋಮುವಾದಿಕರಣಕ್ಕೆ ಕಾರಣವಾಗಿದ್ದು, ಇದನ್ನು ಹಿಂಪಡೆಯಬೇಕು.
–ಅಭಯಾ ದಿವಾಕರ,ರಾಜ್ಯ ಸಮಿತಿ ಸದಸ್ಯೆ,ಎಐಡಿಎಸ್‍ಓ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.