ADVERTISEMENT

ಆಲಮಟ್ಟಿ | ಕಾಲುವೆ ಕಾಮಗಾರಿ ಕಳಪೆ ಆರೋಪ: ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:35 IST
Last Updated 16 ಜುಲೈ 2025, 5:35 IST
ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಬಳಿ, ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ಕಾಮಗಾರಿಯ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಕೆಬಿಜೆಎನ್ ಎಲ್ ಅಧಿಕಾರಿಗಳಾದ ಐ.ಎಲ್. ಕಳಸಾ, ಉಮೇಶ ಭೇಟಿ ನೀಡಿ ಮನವಿ ಸ್ವೀಕರಿಸಿದರು
ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿ ಬಳಿ, ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ಕಾಮಗಾರಿಯ ತನಿಖೆ ನಡೆಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಕೆಬಿಜೆಎನ್ ಎಲ್ ಅಧಿಕಾರಿಗಳಾದ ಐ.ಎಲ್. ಕಳಸಾ, ಉಮೇಶ ಭೇಟಿ ನೀಡಿ ಮನವಿ ಸ್ವೀಕರಿಸಿದರು   

ಆಲಮಟ್ಟಿ: ‘ಮುಳವಾಡ ಏತ ನೀರಾವರಿ ಯೋಜನೆ ಹಂತ 3 ರ ಅಡಿಯಲ್ಲಿ ಬರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ವಿತರಣಾ ಕಾಲುವೆ ನಂ.1 ರಿಂದ 7ರ ಅಡಿ ಬರುವ ಲ್ಯಾಟರಲ್ ಮತ್ತು ಸಬ್ ಲ್ಯಾಟರಲ್ ಕಾಲುವೆಯ ಕಾಮಗಾರಿಗಳು ಕಳಪೆಯಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಬಳಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ.


ಭಾರತೀಯ ದ್ರಾವಿಡ ದಲಿತ ಸೇನಾ ನೇತೃತ್ವದಲ್ಲಿ ಸೋಮವಾರದಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮಂಗಳವಾರ ಎರಡು ದಿನ ಪೂರ್ಣಗೊಳಿಸಿತು.


ಸರ್ಕಾರದ ಅಂದಾಜು ಪತ್ರಿಕೆಯ ಪ್ರಕಾರ ಕಾಮಗಾರಿ ನಿರ್ವಹಿಸಿಲ್ಲ, ಕಳಪೆ ಕಾಮಗಾರಿಯಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT


ಇದರಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರವಾಗಿದೆ. ನಿರ್ಮಾಣಗೊಂಡು ವರ್ಷ ಕಳೆಯುವ ಮೊದಲೇ ಎಲ್ಲಾ ಲ್ಯಾಟರಲ್ ಕಾಲುವೆಗಳು ಕಳಪೆ ಕಾಮಗಾರಿಯ ಕಾರಣ ಒಡೆದು ಹೋಗಿವೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಹೀಗಾಗಿ ಕಾಮಗಾರಿಯ ತನಿಖೆ ನಡೆಸಬೇಕು, ತಪ್ಪಿತಸ್ಥ ಮೂವರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು, ಕಾಲುವೆಗಳನ್ನು ‌ಮರುನಿರ್ಮಿಸಬೇಕು ಎಂದು ಆಗ್ರಹಿಸಿದರು.


ಧರಣಿ ಸ್ಥಳಕ್ಕೆ ಉಪ ಮುಖ್ಯ ಎಂಜಿನಿಯರ್ ಐ.ಎಲ್. ಕಳಸಾ, ತಾಂತ್ರಿಕ ಸಹಾಯಕ ಉಮೇಶ ಮತ್ತಿತರರು ಮಂಗಳವಾರ ಭೇಟಿ ನೀಡಿ ಮನವಿ ಸ್ವೀಕರಿಸಿ, ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ ಪ್ರತಿಭಟನಕಾರರು ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದರು.


ಮಲ್ಲು ಜಾಲಗೇರಿ, ಸೋಮು ಹಟ್ಟಿ, ಯಮನಪ್ಪ ಮಾಯವಂಶಿ, ಸಂತೋಷ ಟಕ್ಕೆ, ನಾಮದೇವ ಹೊಸಮನಿ, ಸೋಮರಾಜ ಚಲವಾದಿ, ರಮೇಶ ಹಾಲ್ಯಾಳ, ರಾಹುಲ ಹೊಸಮನಿ ಮತ್ತಿತರರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.