ADVERTISEMENT

ಪರೀಕ್ಷೆ ರದ್ದು ಸೂಕ್ತ ಪರಿಹಾರವಲ್ಲ: ಕೌಲಗಿ

ನಿಗದಿತ ವೇಳಾಪಟ್ಟಿಯಂತೆ ಎಸ್.ಎಸ್.ಎಲ್.ಸಿ,ಪಿ.ಯು.ಸಿ ಪರೀಕ್ಷೆ ನಡೆಸಲು ಮನವಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 12:53 IST
Last Updated 16 ಏಪ್ರಿಲ್ 2021, 12:53 IST
ಬಸವರಾಜ ಕೌಲಗಿ
ಬಸವರಾಜ ಕೌಲಗಿ   

ವಿಜಯಪುರ: ಸಿ.ಬಿ.ಎಸ್.ಇ ನಡೆಸುವ 10ನೇ ತರಗತಿ ಪರೀಕ್ಷೆಗಳನ್ನು ರದ್ದುಮಾಡಿದ್ದು ಸರಿಯಾದ ನಿರ್ಣಯವಲ್ಲ. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪರೀಕ್ಷೆಗಳನ್ನು ನಡೆಸಬೇಕಾಗಿತ್ತು ಎಂದುವಿಜಯಪುರ ಹಾಗೂ ಧಾರವಾಡದಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್‌ಬಸವರಾಜ ಕೌಲಗಿ ಹೇಳಿದ್ದಾರೆ.

ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಜೂನ್ 21 ರಿಂದ ಹಾಗೂ ಪಿ.ಯು.ಸಿ ಪರೀಕ್ಷೆಗಳು ಮೇ 24 ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸಬೇಕು. ರದ್ದುಪಡಿಸುವುದಾಗಲಿ ಅಥವಾ ಮುಂದೂಡುವ ನಿರ್ಧಾರಗಳನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ರದ್ದುಪಡಿಸಬಾರದು. ಪರೀಕ್ಷೆಗಳನ್ನು ಮುಂದೂಡುವುದರಿಂದ ಮಕ್ಕಳ ಮನಸ್ಸಿನ ಮೇಲೆ ಒತ್ತಡ ಬೀಳುವುದು. ವಿದ್ಯಾರ್ಥಿಗಳ ಪಾಲಿಗೆ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳು ನಿರ್ಣಾಯಕವಾದವುಗಳಾಗಿವೆ ಎಂದರು.

ADVERTISEMENT

ಹೋದ ವರ್ಷ ಕೊರೊನಾ ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲೇ ಕಟ್ಟುನಿಟ್ಟಿನ ಕ್ರಮಗಳಿಂದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳನ್ನು ನಡೆಸಿ ಯಶಸ್ವಿಯಾಗಿರುವ ಅನುಭವವಿದೆ. ಅದೇ ರೀತಿ ಮುಂಜಾಗ್ರತಾ ಕ್ರಮಗಳಿಂದ ಪರೀಕ್ಷೆಗಳನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಎರಡು ವರ್ಷ ಪರೀಕ್ಷೆಗಳಿಲ್ಲದೆ, ಸೂಕ್ತ ಪಾಠಗಳಿಲ್ಲದೆ ವಿದ್ಯಾರ್ಥಿಗಳು ಕಲಿಕೆಯಿಂದ ದೂರ ಉಳಿದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಈಗೀಗ ಎಲ್ಲೆಡೆಯೂ ಯತೇಚ್ಛವಾಗಿ ಪಾಲಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಕೊರೊನಾದಿಂದ ಶಿಕ್ಷಣ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದ್ದಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಕಷ್ಟ ಹೇಳತೀರದು. ಅದರಲ್ಲೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಮತ್ತು ಅಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಆಗುವ ತೊಂದರೆಗಳ ಪರಿಚಯವು ಕೂಡ ಸರ್ಕಾರಕ್ಕೆ ಇದೆ. ಈಗಾಗಲೇ ಕೆಲವು ಶಿಕ್ಷಣ ಸಂಸ್ಥೆಗಳು ಮುಚ್ಚಿವೆ. ಬಹಳಷ್ಟು ಶಿಕ್ಷಣ ಸಂಸ್ಥೆಗಳು ಮುಚ್ಚುವ ಹಂತದಲ್ಲಿವೆ. ಶಿಕ್ಷಕರ ಕಷ್ಟ ನೋವುಗಳನ್ನು ಕೇಳುವವರಿಲ್ಲದಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.