ADVERTISEMENT

ಬ್ರಾಹ್ಮಣರಿಗೂ ಜಾತಿ, ಆದಾಯ ಪ್ರಮಾಣ ಪತ್ರ: ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 16:49 IST
Last Updated 27 ಸೆಪ್ಟೆಂಬರ್ 2021, 16:49 IST

ವಿಜಯಪುರ: ಬ್ರಾಹ್ಮಣ ಸಮುದಾಯದ ಬಡ ಕುಟುಂಬಗಳಿಗೆ ಹಿಂದುಳಿದ ವರ್ಗಗಳ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ಇಡಬ್ಲ್ಯುಎಸ್‌ ಸರ್ಟಿಫಿಕೆಟ್‌) ವನ್ನು ನೀಡಲು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದಮೂರ್ತಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೂ ಬ್ರಾಹ್ಮಣ ಸಮುದಾಯದವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಿಗುತ್ತಿರಲಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದ ಬಳಿಕ ಇದೀಗ ಜಾತಿ–ಆದಾಯ ಪ್ರಮಾಣ ಪತ್ರ ಕೊಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಮಂಡಳಿಗೆ ಪ‍್ರಸಕ್ತ ವರ್ಷ ಬಜೆಟ್‌ನಲ್ಲಿ ₹ 50 ಕೋಟಿ, ಹಿಂದಿನ ಬಜೆಟ್‌ನಲ್ಲಿ ₹25 ಕೋಟಿ ಅನುದಾನ ನೀಡಲಾಗಿತ್ತು. ಈ ಅನುದಾನವನ್ನು ಸಮಾಜದ ಏಳಿಗೆಗಾಗಿ 13 ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ADVERTISEMENT

ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ 40 ಸಾವಿರ ಆಹಾರ ಕಿಟ್‌ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ 70 ಸಾವಿರ ಆಹಾರ ಕಿಟ್‌ಗಳನ್ನು ವಿವಿಧ ಸಂಘ–ಸಂಸ್ಥೆಗಳಿಂದ ಸಂಗ್ರಹಿಸಿ, ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಲಾಕ್‌ಡೌನ್‌ ಅವಧಿಯಲ್ಲಿ ವಿತರಿಸಲಾಗಿದೆ ಎಂದರು.

ಚಾಣಕ್ಯ ಆಡಳಿತ ತರಬೇತಿ:

ಚಾಣಕ್ಯ ಆಡಳಿತ ತರಬೇತಿ ಯೋಜನೆಯಡಿ ನವದೆಹಲಿಯ ಸಂಕಲ್ಪ ಐಎಎಸ್‌ ಅಕಾಡೆಮಿಯಲ್ಲಿ ಸಮುದಾಯದ ಅರ್ಹ 150 ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ಕೊಡಿಸಲಾಗುತ್ತಿದೆ. ಇದಕ್ಕಾಗಿ ₹76.11 ಲಕ್ಷ ವೆಚ್ಚವಾಗಿದೆ ಎಂದು ತಿಳಿಸಿದರು.

ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲ ಮೂರು ಸ್ಥಾನ ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ (ಮೊದಲ ಸ್ಥಾನ ಪಡೆದವರಿಗೆ ₹ 15 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ₹ 10 ಸಾವಿರ, ಮೂರನೇ ಸ್ಥಾನ ಪಡೆದವರಿಗೆ ₹ 5 ಸಾವಿರ) ಹಾಗೂ ಬೆಳ್ಳಿ ಪದಕ, ಪ್ರಶಸ್ತಿ ಪತ್ರ ಹಾಗೂ ನಿಘಂಟು ಪುಸ್ತಕ ವಿತರಿಸಲಾಗುತ್ತಿದೆ. ಈ ಯೋಜನೆಯಡಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಒಟ್ಟು 144 ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ. ಇದಕ್ಕಾಗಿ ₹ 13.55 ಕೋಟಿ ವೆಚ್ಚವಾಗಿದೆ ಎಂದು ಹೇಳಿದರು.

ದೇವತಾರ್ಚನೆ ಶಿಬಿರ:

ಸಮುದಾಯದ ತ್ರಿಮತಸ್ಥ ಉಪನೀತ ವಟುಗಳು ಸೇರಿದಂತೆ ಗೃಹಸ್ಥರಿಗೆ ನಿತ್ಯ ಸಂಧ್ಯಾ ವಂದನೆ ಮತ್ತು ನಿತ್ಯ ದೇವತಾರ್ಚನೆ ತರಬೇತಿಯನ್ನು ನೀಡುವ ಶಿಬಿರದಲ್ಲಿ ಪಾಲ್ಗೊಂಡವರಿಗೆ ತಲಾ ₹ 500ರಂತೆ ಹಾಗೂ ಪ್ರಾಧ್ಯಾಪಕರಿಗೆ ₹ 500ರಂತೆ ಪ್ರೋತ್ಸಾಹ ಧನ ನೀಡಿಲು ಉದ್ದೇಶಿಸಲಾಗಿದೆ. ಈಗಾಗಲೇ 17 ಜಿಲ್ಲೆಗಳಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಯೋಜನೆಗಾಗಿ ₹ 35 ಲಕ್ಷ ವೆಚ್ಚವಾಗಲಿದೆ ಎಂದರು.

ಸಾಂದೀಪನಿ ಶಿಷ್ಯ ವೇತನ:

ಮೆಟ್ರಿಕ್‌ ನಂತರದ ಉನ್ನತ ಕೋರ್ಸ್‌ಗಳನ್ನು ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ನಿರ್ವಹಣಾ ವೆಚ್ಚ ಮತ್ತು ಶುಲ್ಕ ಮರುಪಾವತಿ ಮಾಡಲು ಉದ್ದೇಶಿಸಲಾಗಿದ್ದು, ಅರ್ಜಿ ಸಲ್ಲಿಸಿದ್ದ 9185 ವಿದ್ಯಾರ್ಥಿಗಳಿಗೆ ತಲಾ ₹ 15 ಸಾವಿರ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ₹ 15 ಕೋಟಿ ಮೀಸಲಿಡಲಾಗಿದೆ ಎಂದು ಹೇಳಿದರು.

ಅಡುಗೆ ಭಟ್ಟರು, ಸಹಾಯಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರ್ಪಡೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಪುರುಷೋತ್ತಮ ಸ್ವಯಂ ಉದ್ಯೋಗ ಯೋಜನೆ, ಅನ್ನದಾನ ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ಸಮುದಾಯದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳ ತಡೆಗೆ ಹಾಗೂ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಜೊತೆಗೆ 40 ವರ್ಷ ಮೀರುತ್ತಿದ್ದರೂ ಗಂಡುಮಕ್ಕಳ ಮದುವೆಗೆ ಕನ್ಯೆಯರು ಸಿಗುತ್ತಿಲ್ಲ. ಈ ಸಮಸ್ಯೆಗಳ ನಿವಾರಣೆಗಾಗಿ ಗಮನ ಹರಿಸಲಾಗುತ್ತಿದೆ. ಉತ್ತರಪ್ರದೇಶ ರಾಜ್ಯದಲ್ಲಿರುವ ಸಮಾಜದ ಯುವತಿಯರೊಂದಿಗೆ ವಿವಾಹ ಏರ್ಪಡಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಹೇಳಿದರು.

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಶ್ರೀನಿವಾಸ ಬೆಟಗೇರಿ, ಕೃಷ್ಣ ಗುನ್ಹಾಳಕರ, ವಿಜಯ ಜೋಶಿ, ಮಂಡಳಿಯ ನಿರ್ದೇಶಕರಾದ ಜಗದೀಶ ಹುನಗುಂದ, ಪವನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.