ADVERTISEMENT

ಅಪಘಾತ ವಲಯ; ನಿಧಾನವಾಗಿ ಚಲಿಸಿ...

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಬ್ಲ್ಯಾಕ್‌ ಸ್ಪಾಟ್‌ಗಳ ಸುಧಾರಣೆಗೆ ಬೇಕಿದೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 2:50 IST
Last Updated 11 ಡಿಸೆಂಬರ್ 2021, 2:50 IST
ವಿಜಯಪುರ ನಗರದ ಭೂತನಾಳ ಕೆರೆ ಸಮೀಪ ವಿಜಯಪುರ – ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಭೂತನಾಳ ಕೆರೆ ಸಮೀಪ ವಿಜಯಪುರ – ಸೋಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯರಸ್ತೆಗಳಲ್ಲಿ ಪ್ರತಿನಿತ್ಯ ಒಂದಲ್ಲ, ಒಂದು ಅಪಘಾತ ಸಂಭವಿಸಿ, ಸಾವು, ನೋವು ಉಂಟಾಗುತ್ತಲೇ ಇವೆ.

ಹದಗೆಟ್ಟ ರಸ್ತೆಗಳು, ಅವೈಜ್ಞಾನಿಕ ರಸ್ತೆ ತಿರುವುಗಳು, ರಸ್ತೆ ಉಬ್ಬುಗಳು ಹಾಗೂ ಚಾಲಕರ ನಿರ್ಲಕ್ಷ್ಯ ಈ ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. 2021ರಲ್ಲಿ 700ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, ಸುಮಾರು 400 ಜನ ಜಿಲ್ಲೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ಇಲಾಖೆ ಅಂಕಿಅಂಶಗಳಿಂದ ತಿಳಿದುಬರುತ್ತದೆ.

ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಮೇಲಿಂದ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುವ 15 ಕುಖ್ಯಾತ ಅಪಘಾತ ವಲಯ (ಬ್ಲ್ಯಾಕ್‌ ಸ್ಪಾಟ್‌)ಗಳನ್ನು ಪೊಲೀಸ್‌ ಇಲಾಖೆ ಈಗಾಗಲೇ ಗುರುತಿಸಿದೆ.

ADVERTISEMENT

ಇಷ್ಟೇ ಅಲ್ಲದೇ,ಹೊರ್ತಿಯಿಂದ ನಿಂಬಾಳ ಮತ್ತು ಇಂಚಗೇರಿ ರಸ್ತೆ ತಿರುವುಗಳಲ್ಲಿ ಸೂಚನಾ ಫಲಕ ಇಲ್ಲದೇ ಆಗಾಗ ಅಪಘಾತಗಳು ಸಂಭವಿಸುತ್ತಲಿವೆ.

ರಸ್ತೆಗಳಲ್ಲಿ ಸೂಚನಾ ಫಲಕಗಳು ಇಲ್ಲದೇ ಇರುವುದರಿಂದ ಈ ರಸ್ತೆಗಳಿಗೆ ಸಂಚರಿಸುವ ಹೊಸಬರು ಹೆಚ್ಚಾಗಿ ಅಫಘಾತಕ್ಕೆ ಒಳಗಾಗಿ ಕೈ, ಕಾಲು ಮುರಿದುಕೊಂಡು, ಜೀವ ಕಳೆದುಕೊಂಡ ಪ್ರಸಂಗಗಳು ನಡೆದಿವೆ.

ಬಸವನಬಾಗೇವಾಡಿಪಟ್ಟಣದಲ್ಲಿ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಹಾದು ಹೋಗಿದೆ. ಪಟ್ಟಣ ಪ್ರವೇಶಿಸುತಿದ್ದಂತೆ ದ್ವಿಪಥ ರಸ್ತೆಗಳಿವೆ. ಆದರೆ, ರಸ್ತೆ ಮಧ್ಯದಲ್ಲಿನ ಡಿವೈಡರ್‌ಗಳಿಗೆ ರೇಡಿಯಂ ಅಳವಡಿಸದೇ ಇರುವುವುದರಿಂದ ರಾತ್ರಿ ಸಂಚರಿಸುವ ಬೈಕುಗಳು ಸೇರಿದಂತೆ ಇತರೆ ವಾಹನಗಳು ಡಿವೈಡರ್‌ಗೆ ಡಿಕ್ಕಿ ಹೊಡೆದ ಉದಾಹರಣೆಗಳಿವೆ.

ದ್ವಿಪಥ ರಸ್ತೆಗೆ ಪೂರ್ಣ ಪ್ರಮಾಣದ ವಿದ್ಯತ್ ದೀಪ ಅಳವಡಿಸಬೇಕು ಎಂದು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕೆಲ ಸ್ಥಳೀಯರ ಆಗ್ರಹವಾಗಿದೆ. ‌

ರಸ್ತೆ ನಿಯಮ ಪಾಲಿಸಿ ವಾಹನ ಸಂಚಾರ ಮಾಡುವಂತೆ ಪೊಲೀಸ್ ಇಲಾಖೆಯೊಂದಿಗೆ ವಿವಿಧ ಸಂಘಟನೆಯವರು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಜೇನುಗೂಡು ಸಂಸ್ಥೆಯ ಸತೀಶ ಕ್ವಾಟಿ ಅಭಿಪ್ರಾಯ ಪಡುತ್ತಾರೆ.

ಗ್ರಾಮೀಣ ಪ್ರದೇಶದ ತಿರುವು ರಸ್ತೆಗಳು, ರಸ್ತೆ ಪಕ್ಕದಲ್ಲಿ ದೊಡ್ಡ ತಗ್ಗುಗಳು, ತೋಟದ ಬಾವಿಗಳಿರುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸುವುದು ಸೇರಿದಂತೆ ಅಗತ್ಯತೆ ಅರಿತುಕೊಂಡು ರಸ್ತೆ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು. ರಸ್ತೆ ಪಕ್ಕದಲ್ಲಿ ಅಲ್ಲಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳಿಂದಾಗಿ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಅಂತಹ ಸ್ಥಳದಲ್ಲಿ ಕೆಲವೊಮ್ಮೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಗಿಡಗಂಟಿಗಳನ್ನು ಮೇಲಿಂದ ಮೇಲೆ ತೆರವುಗೊಳಿಸುವ ಕಾರ್ಯವಾಗಬೇಕು ಎಂದು ಕಣಕಾಲ ಗ್ರಾಮದ ರಾಜಶೇಖರ ಹುಲ್ಲೂರ ಒತ್ತಾಯಿಸುತ್ತಾರೆ.

ದೇವರಹಿಪ್ಪರಗಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 50ರ ಸಿಂದಗಿ ರಸ್ತೆಯಲ್ಲಿಯ ಶಾಂಭವಿ ಡಾಬಾ ಹತ್ತಿರದ ತಿರುವು ಅಫಘಾತಕ್ಕೆ ಆಹ್ವಾನ ನೀಡುವಂತಿದ್ದು, ಇಲ್ಲಿ ಕಾಲುವೆಗೆ ನಿರ್ಮಿಸಿದ ಸೇತುವೆ ಹತ್ತಿರ ಹಾಗೂ ತಿರುವಿನಲ್ಲಿ ಎಚ್ಚರಿಕೆಯ ಫಲಕ ನೆಟ್ಟು ಚಾಲಕರಿಗೆ, ವಾಹನ ಸವಾರರಿಗೆ ಎಚ್ಚರಿಸಲಾಗುತ್ತಿದೆ. ಅದಾಗ್ಯೂ ಕಳೆದ ಎರಡು ವರ್ಷದಲ್ಲಿ ಇದೇ ಸ್ಥಳದಲ್ಲಿ 5 ಜನ ಅಫಘಾತಕ್ಕೆ ಬಲಿಯಾಗಿದ್ದಾರೆ.

ವಿಜಯಪುರ ರಸ್ತೆಯಲ್ಲಿನ ಎಸ್.ಕೆ.ಡಾಬಾ ಹತ್ತಿರದಲ್ಲಿ ಕಳೆದ ಎರಡು ವರ್ಷದಲ್ಲಿ ಅಫಘಾತಕ್ಕೆ 3 ಜನ ಮೃತಪಟ್ಟಿದ್ದು, ಈ ಸ್ಥಳದಲ್ಲಿಯೂ ಸಹ ಎರಡು ಎಚ್ಚರಿಕೆಯ ಫಲಕಗಳನ್ನು ಅಳವಡಿಸಲಾಗಿದೆ.

ದೇವರಹಿಪ್ಪರಗಿ ಪಟ್ಟಣದ ಬಸವನ ಬಾಗೇವಾಡಿ ರಸ್ತೆಯ ಬಾಣತಿಗುಡಿಯ ಹತ್ತಿರದ ತಿರುವು ಹಾಗೂ ಇಂಡಿ ರಸ್ತೆಯ ಹಳ್ಳದ ಸೇತುವೆಯ ತಿರುವು ಅಫಘಾತಗಳಿಗೆ ಆಹ್ವಾನ ನೀಡುವಂತಿದೆ.

ಇಂಡಿ ಪಟ್ಟಣದಿಂದ ಕಲಬುರಗಿ ನಗರಕ್ಕೆ ಹೋಗುವ ರಾಜ್ಯ ಹೆದ್ದಾರಿ ಮಧ್ಯ ನಾದ (ಬಿ.ಕೆ) ಗ್ರಾಮದ ಬಳಿ ಜಮಖಂಡಿ ಸಕ್ಕರೆ ಕಾರ್ಖಾನೆಗೆ ತೆರಳಲು ಹೆದ್ದಾರಿಗೆ ಅಡ್ಡಲಾಗಿರುವ ಅಡ್ಡರಸ್ತೆಯಲ್ಲಿ ಅಪಘಾತ ಸಂಭವಿಸುತ್ತವೆ. ಆದರೆ, ಈ ರಾಜ್ಯ ಹೆದ್ದಾರಿಯಿಂದ ಒಡೆದು ಕಾರ್ಖಾನೆಗೆ ಹೋಗುವ ರಸ್ತೆಯ ಬಗ್ಗೆ ಮುನ್ಸೂಚನೆ ನೀಡುವ ಬಗ್ಗೆ ಯಾವುದೇ ಮುನ್ನೆಚರಿಕೆಯ ಫಲಕಗಳಿಲ್ಲ.

ಹೆದ್ದಾರಿಯಲ್ಲಿ ಅಡ್ಡಾಡುವ ವಾಹನಗಳ ಚಾಲಕರಿಗೆ ಈ ಭಾಗದಲ್ಲಿ ಕಾರ್ಖಾನೆಗೆ ಹೋಗುವ ಅಡ್ಡ ರಸ್ತೆಯ ಬಗ್ಗೆ ಮಾಹಿತಿ ಸಿಗುವುದಿಲ್ಲ. ಅದರಲ್ಲೂ ರಾತ್ರಿ ವೇಳೆ ಈ ಸ್ಥಳದಲ್ಲಿ ಅಡ್ಡರಸ್ತೆಯಿದೆ ಎನ್ನುವ ಮಾಹಿತಿ ಸಿಗುವುದಿಲ್ಲ. ಇದರಿಂದ ಈ ಸ್ಥಳದಲ್ಲಿ ಅಪಘಾತಗಳು ಸಂಭವಿಸುತ್ತಿವೆ.

ಸಿಂದಗಿ ಬಸವೇಶ್ವರ ವೃತ್ತ:

ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಿಂದ ಶಹಾಪೂರ-ಯಾದಗಿರಿ ರಾಜ್ಯ ಹೆದ್ದಾರಿ, ಜೇವರ್ಗಿ ರಾಷ್ಟ್ರೀಯ ಹೆದ್ದಾರಿಗೆ ಜೋಡಣೆಯಾಗುವ ವೃತ್ತವಾಗಿದೆ. ಇಲ್ಲಿಂದ ಅಪಾರ ಸಂಖ್ಯೆಯಲ್ಲಿ ವಾಹನಗಳ ಓಡಾಡುತ್ತವೆ.
ಈ ವೃತ್ತ ವಿಸ್ತಾರದಲ್ಲಿ ತುಂಬಾ ವಿಶಾಲವಾಗಿದೆ. ಮೂರು ಪ್ರಮುಖ ರಸ್ತೆಗಳು ವಿಭಜನೆಗೊಂಡಿವೆ. ಆದರೆ, ಇಲ್ಲಿ ರಸ್ತೆ ಡಿವೈಡರ್ ಇಲ್ಲವೇ ಇಲ್ಲ. ಹೀಗಾಗಿ ವಾಹನಗಳು ಎತ್ತಿಂದ ಬರುತ್ತವೆ. ಎತ್ತ ಹೋಗುತ್ತವೆ ಎಂಬುದು ಗೊತ್ತಾಗುವುದೇ ಇಲ್ಲ. ಇಲ್ಲಿ ಪದೇ, ಪದೇ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇಲ್ಲಿಂದ ವಿಜಯಪುರ ಮಾರ್ಗದಲ್ಲಿ ಒಂದು ಕಲಬುರ್ಗಿ-ಯಾದಗಿರಿ ಕಡೆ ಇನ್ನೊಂದು ಡಿವೈಡರ್ ಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಸಿಂದಗಿ ತಾಲ್ಲೂಕಿನ ರಾಂಪೂರ ಪಿ.ಎ ಗ್ರಾಮದಿಂದ ಆಲಮೇಲಕ್ಕೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕೇವಲ 100-150 ಮೀಟರ್ ಅಂತರದಲ್ಲಿ ರಸ್ತೆ ಮಧ್ಯೆದಲ್ಲಿಯೇ ಐದು ವೃತ್ತಗಳನ್ನು ಅನಧಿಕೃತವಾಗಿ ಸ್ಥಾಪನೆ ಮಾಡಲಾಗಿದೆ. ಇಲ್ಲಿಯೂ ಪದೇ, ಪದೇ ಅಪಘಾತಗಳು ಸಂಭವಿಸುತ್ತವೆ.

***

ಪರಿಶೀಲನೆಗೆ ತಂಡ ರಚನೆ: ಎಸ್‌ಪಿ

ವಿಜಯಪುರ ಜಿಲ್ಲೆಯಲ್ಲಿ 15ಕ್ಕೂ ಅಧಿಕ ಅಪಘಾತ ವಲಯಗಳನ್ನು ಈಗಾಗಲೇ ಪೊಲೀಸ್‌ ಇಲಾಖೆ ಗುರುತಿಸಿದೆ. ಈ ಸ್ಥಳಗಳಲ್ಲಿ ಹೆಚ್ಚು ಅಪಘಾತ ಸಂಭವಿಸಲು ಕಾರಣಗಳೇನು ಎಂಬುದರ ವೈಜ್ಞಾನಿಕ ಪರಿಶೀಲನೆಗೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಅರಸಿದ್ಧಿ ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ ಎನ್ನುತ್ತಾರೆಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌.

ಅಪಘಾತಗಳಿಗೆ ಕಾರಣವೇನೆ ಎಂಬುದನ್ನು ತಿಳಿದು ಅಗತ್ಯ ಇರುವೆಡೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು ಹಾಗೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಹಾನಗರ ಪಾಲಿಕೆ, ಪುರಸಭೆಗಳಿಗೆ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುಲಾಗುವುದು ಎನ್ನುತ್ತಾರೆ ಅವರು.

ರಸ್ತೆ ಸುರಕ್ಷತಾ ಅಭಿಯಾನದ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲು ಆದ್ಯತೆ ನೀಡಲಾಗುವುದು. ಜನರು ಹೆಲ್ಮೆಟ್‌, ಸೀಟ್‌ಬೆಲ್ಟ್‌ ಕಡ್ಡಾಯವಾಗಿಹಾಕಿಕೊಳ್ಳುವಂತೆ ಸೂಚಿಸಲಾಗುವುದು. ಜೊತೆಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಆದ್ಯತೆ ನೀಡಲಾಗುವುದು. ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸದಂತೆ ನಿರ್ಬಂಧ ವಿಧಿಸಲಾಗುವುದು. ಕುಡಿದು ವಾಹನ ಚಲಾಯಿಸದಂತೆ ಜಾಗೃತಿ ಮೂಡಿಸಲಾಗುವುದು ಎನ್ನುತ್ತಾರೆ ಆನಂದಕುಮಾರ್‌.

ಅಗತ್ಯ ಇರುವೆಡೆ ರಸ್ತೆ ಉಬ್ಬು ನಿರ್ಮಾಣ, ರಿಪ್ಲೆಕ್ಟರ್‌, ಸೈನ್‌ ಬೋರ್ಡ್‌ಅಳವಡಿಕೆಗೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಎಸ್‌ಪಿ.

ತಕ್ಷಣಕ್ಕೆ ಹೊಸ ರಸ್ತೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದರೂ ಗುಂಡಿ ಮುಚ್ಚಲು, ಅವೈಜ್ಞಾನಿಕ ರಸ್ತೆ ಉಬ್ಬು ತೆರವಿಗೆ ಸೂಚಿಸಲಾಗುವುದು ಎನ್ನುತ್ತಾರೆ ಅವರು.

***

ಜಿಲ್ಲೆಯಲ್ಲಿವೆ 15 ಬ್ಲ್ಯಾಕ್‌ಸ್ಪಾಟ್‌!

ವಿಜಯಪುರ ಜಿಲ್ಲೆಯಲ್ಲಿ ಒಟ್ಟು 15 ಕುಖ್ಯಾತ ಅಪಘಾತಗಳು ಸ್ಥಳಗಳನ್ನು ಜಿಲ್ಲಾ ಪೊಲೀಸ್‌ ಇಲಾಖೆ ಗುರುತಿಸಿದೆ.

ಹೊರ್ತಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎನ್‌.ಎಚ್‌.52 ರಲ್ಲಿಅಗಸನಾಳ ಕ್ರಾಸ್‌, ದೇಗಿನಾಳ ಕ್ರಾಸ್‌, ಸೋನಕನಹಳ್ಳಿ ಕ್ರಾಸ್‌, ಸಿಂದಗಿ ಪೊಲೀಸ್‌ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಚಿಕ್ಕಸಿಂದಗಿ ಬೈಪಾಸ್‌, ಬಮ್ಮನಜೋಗಿ ಕ್ರಾಸ್‌, ದೇವರ ಹಿಪ್ಪರಗಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ 110ಕೆವಿ ಕೆಇಬಿ, ವಿಜಯಪುರ ನಗರದ ಟ್ರಾಫಿಕ್‌ ಪೊಲೀಸ್‌ ಠಾಣೆಯ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಸಿಂದಗಿ ಬೈಪಾಸ್‌, ಮನಗೂಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 218ರ ಮನಗೂಳಿ ಕ್ರಾಸ್‌ ಮತ್ತು ಮುಳವಾಡ ಕ್ರಾಸ್‌, ಕೂಡಗಿ ಕ್ರಾಸ್‌, ಮಲಘಾಣ ಕ್ರಾಸ್‌, ನಿಡಗುಂದಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಾಷ್ಟ್ರೀಯಹೆದ್ದಾರಿ 50ರಲ್ಲಿ ಬಸವನ ಬಾಗೇವಾಡಿ ಕ್ರಾಸ್‌, ನಿಡಗುಂದಿ ಹೊಸ ಬಸ್‌ ನಿಲ್ದಾಣ, ಯಲಗೂರು ಕ್ರಾಸ್‌ ಹಾಗೂ ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಯ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಹಿಟ್ನಳ್ಳಿಯನ್ನು ಅಪಘಾತ ವಲಯ ಎಂದು ಗುರುತಿಸಲಾಗಿದೆ.

–ಪ್ರಜಾವಾಣಿ ತಂಡ: ಬಸವರಾಜ್‌ ಸಂಪಳ್ಳಿ, ಶಾಂತೂ ಹಿರೇಮಠ,ಎ.ಸಿ.ಪಾಟೀಲ, ಪ್ರಕಾಶ ಮಸಬಿನಾಳ, ಅಮರನಾಥ ಹಿರೇಮಠ,ಕೆ.ಎಸ್.ಈಸರಗೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.