ADVERTISEMENT

ಗಣೇಶ ಚತುರ್ಥಿ, ಮೊಹರಂ ಸೌಹಾರ್ದವಾಗಿ ಆಚರಿಸಿ: ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 14:03 IST
Last Updated 19 ಆಗಸ್ಟ್ 2020, 14:03 IST
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು
ವಿಜಯಪುರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾತನಾಡಿದರು   

ವಿಜಯಪುರ: ಗಣೇಶ ಚತುರ್ಥಿ ಹಾಗೂ ಮೊಹರಂ ಅನ್ನು ಕೋವಿಡ್ ಹಿನ್ನೆಲೆಯಲ್ಲಿ ಅತ್ಯಂತ ಜಾಗೃತಿಯಿಂದ ಹಾಗೂ ಸರ್ಕಾರದ ಪರಿಷ್ಕೃತ ಮಾರ್ಗಸೂಚಿಗಳನ್ವಯ ಆಚರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮನವಿ ಮಾಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಹಬ್ಬದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಗಸ್ಟ್ 22 ರಿಂದ ಆಚರಿಸಲಾಗುವ ಗಣೇಶ ಹಬ್ಬ ಮತ್ತು ಆಗಸ್ಟ್ 30 ರಂದು ಆಚರಿಸಲಾಗುವ ಮೊಹರಂ ಅನ್ನು ಸರಳವಾಗಿ, ಶಾಂತಿ ಮತ್ತು ಸೌಹಾರ್ದವಾಗಿ ಹಾಗೂ ಕೋವಿಡ್ ಹಿನ್ನೆಲೆ ತಮ್ಮ ಕುಟುಂಬಗಳ ಹಿತದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಸಾರ್ವಜನಿಕ ಗಣೇಶ ಮಂಡಳಿಗಳು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಮತ್ತು ಎನ್‍ಒಸಿ ಪಡೆಯಬೇಕು. ಅನುಮತಿಗೆ ಈ ಬಾರಿ ಯಾವುದೇ ಶುಲ್ಕ ಆಕರಿಸಲಾಗುವುದಿಲ್ಲ ಎಂದರು.

ಗಣೇಶ ವಿಸರ್ಜನೆ ದಿನಗಳಾದ ಒಂದನೇ ದಿನಕ್ಕೆ ₹200, ಐದನೇ ದಿನಕ್ಕೆ ₹760, ಏಳನೇ ದಿನಕ್ಕೆ ₹1040, ಒಂಬತ್ತನೆ ದಿನಕ್ಕೆ ₹1320 ಹಾಗೂ 11ನೇ ದಿನಕ್ಕೆ ₹1600 ಅನ್ನು ಗಣೇಶ ವಿಸರ್ಜಿಸುವಂತಹ ಮಂಡಳಿಗಳು ವಿದ್ಯುತ್ ಬಿಲ್ ಚಲನ್‍ಗಳನ್ನು ತಕ್ಷಣ ಭರಿಸಬೇಕು ಎಂದು ಸೂಚನೆ ನೀಡಿದರು.

ಗಣೇಶ ಮಂಡಳಿಗಳ ಪಟ್ಟಿಯನ್ನು ಕಾರ್ಯಕರ್ತರ ಮಾಹಿತಿ, ಗಣೇಶ ವಿಸರ್ಜನಾ ದಿನಾಂಕ ನಮೂದಿಸಿ ನೀಡಬೇಕು. ಸರ್ಕಾರದ ಸೂಚಿಸಿರುವ ಗಾತ್ರದ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕು. ವಿಸರ್ಜನೆ ಸಂದರ್ಭದಲ್ಲಿ ಮಹಾನಗರ ಪಾಲಿಕೆಗೆ, ಗ್ರಾಮಾಂತರ ಪ್ರದೇಶದಲ್ಲಿ ಆಯಾ ಪಿಡಿಒಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಿ, ಮೊಬೈಲ್ ವ್ಯಾನ್ ಮೂಲಕ ವಿಸರ್ಜಿಸಬೇಕು ಎಂದು ಹೇಳಿದರು.

ಈ ಎರಡು ಹಬ್ಬಗಳ ಆಚರಣೆ ಸಂದರ್ಭದಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಮದ್ಯಪಾನ ಮಾರಾಟ ಮತ್ತು ನಿಷೇಧದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಕೋವಿಡ್-19 ಮುನ್ನೆಚ್ಚರಿಕೆ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲಾಗುವುದು. ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ತಪ್ಪದೇ ಪಾಲಿಸಬೇಕು ಎಂದರು.

ಸಾರ್ವಜನಿಕ ಸ್ಥಳ ಮತ್ತು ದೇವಸ್ಥಾನಗಳಲ್ಲಿ ಭಕ್ತಾದಿಗಳಿಗಾಗಿ ಕಡ್ಡಾಯವಾಗಿ ಸ್ಥಳ ಗುರುತು ಮಾಡಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ತಮ್ಮ ತಮ್ಮ ಮನೆ ಆವರಣಗಳಲ್ಲಿ ವಿಸರ್ಜಿಸಬೇಕು. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.

ಶ್ರೀ ಗಣೇಶ ಮಂಡಳಿಗಳು ಪ್ರಚೋದನಾಕಾರಿ ಹಾಡುಗಳು ಪ್ರಸಾರವಾಗದಂತೆ ಎಚ್ಚರಿಕೆ ವಹಿಸಬೇಕು. ಗ್ರಾಮ ಮತ್ತು ಊರುಗಳ ಜನರು ಕೈಜೋಡಿಸಿ ಈ ಎರಡು ಹಬ್ಬಗಳನ್ನು ಆಚರಿಸಬೇಕು. ಆಯಾ ತಾಲ್ಲೂಕು ತಹಶೀಲ್ದಾರರು ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಕೂಡ ತಮ್ಮ ಜೊತೆಗಿರಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸೂಕ್ತ ಸಹಕಾರ ನೀಡುವಂತೆ ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಶ್ರೀ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗೆ ನಗರ ಪ್ರದೇಶದಂತೆ ಗ್ರಾಮೀಣ ಪ್ರದೇಶದಲ್ಲೂ ಸಮಾನ ನಿಯಮಗಳು ಇರಲಿವೆ. ಗ್ರಾಮದಲ್ಲಿ ಒಂದೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮನವಿ ಮಾಡಿದರು.

ಮಹಾನಗರ ಪಾಲಿಕೆ ಆಯುಕ್ತ ಶ್ರೀ ಹರ್ಷಾ ಶೆಟ್ಟಿ, ಸಾರ್ವಜನಿಕ ಗಣೇಶ ವಿಸರ್ಜನೆಗೆ ಕೃತಕ ಹೊಂಡಗಳನ್ನು ನಿರ್ಮಿಸಲಾಗುವುದು. ಪರಸ್ಪರ ಅಂತರದೊಂದಿಗೆಮೂರ್ತಿ ವಿಸರ್ಜಿಸಬೇಕು. ಗಾಂಧಿಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮತಿಗಾಗಿ ಐದು ಕೌಂಟರ್‌ಗಳನ್ನು ನಿರ್ಮಿಸಲಾಗುವುದು. ಸಹಾಯವಾಣಿ ನಂಬರ್ ಮತ್ತು ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ, ಮುಖಂಡರಾದ ಅಡಿವೆಪ್ಪ ಸಾಲಗಲ್, ಗೋಪಾಲ ಘಟಕಾಂಬಳೆ, ಶಿವಾಜಿ ಪಾಟೀಲ, ಶ್ರೀಭಕ್ಷಿ, ಸೈಯದ್ ಖಾದ್ರಿ, ಮುಶ್ರೀಫ್, ಮುಲ್ಲಾ, ಮುತ್ತು ಜಂಗಮಶೆಟ್ಟಿ, ಸುನೀಲ್ ಭೈರವಾಡಗಿ, ರಾಘು ಅಣ್ಣಿಗೇರಿ, ವಿಜಯ ಜೋಶಿ, ರವಿ ಚವ್ಹಾಣ ಸೇರಿದಂತೆ ವಿವಿಧ ಗಣೇಶ ಮಂಡಳಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪರಿಸರ ಸ್ನೇಹಿ ಮಣ್ಣಿನ ಮೂರ್ತಿ ಪ್ರತಿಷ್ಠಾಪಿಸಲು ಸಲಹೆ

ಪೆಂಡಾಲ್‍ದಲ್ಲಿ 24X7 ಕಾರ್ಯಕರ್ತರು ಇರಲು ಸೂಚನೆ

ಸಿಸಿ ಟಿವಿ ಕ್ಯಾಮೆರಾ ಅಳವಡಿಸುವುದು ಕಡ್ಡಾಯ

ಪರಸ್ಪರ ಅಂತರ ಕಾಪಾಡಬೇಕು, ಸ್ಯಾನಿಟೈಜರ್ ವ್ಯವಸ್ಥೆ ಕಲ್ಪಿಸಬೇಕು

ಈ ಎರಡು ಹಬ್ಬಗಳಿಗೆ ಮೆರವಣಿಗೆಗೆ ಅವಕಾಶವಿರುವುದಿಲ್ಲ

ಸಂಗೀತ ವಾದ್ಯ ಬಳಕೆಗೆ ನಿಷೇಧ

20ಕ್ಕಿಂತ ಹೆಚ್ಚಿನ ಜನರು ಒಂದೇ ಕಡೆ ಸೇರುವಂತಿಲ್ಲ

ಗಣೇಶ ಮೂರ್ತಿಗಳನ್ನು ಮನೆ ಆವರಣದಲ್ಲಿ ವಿಸರ್ಜಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.