ADVERTISEMENT

ಕೇಂದ್ರ ಅಧ್ಯಯನ ತಂಡದಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 11:11 IST
Last Updated 14 ಡಿಸೆಂಬರ್ 2020, 11:11 IST
   

ವಿಜಯಪುರ: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಬೆಳೆ ಮತ್ತು ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಗೊಳಗಾದ ಪ್ರದೇಶಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಹೈದರಾಬಾದ್‌ನ ಕೃಷಿ ಮತ್ತು ರೈತ ಸಚಿವಾಲಯದ ಬೀಜ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ. ಮನೋಹರನ್, ಬೆಂಗಳೂರು ಜಲಶಕ್ತಿ ಸಚಿವಾಲಯದ (ಎಚ್‍ಒ ಮತ್ತು ಪಿಪಿ) ಸೂಪರಿಟಿಂಡೆಂಟ್‌ ಎಂಜಿನಿಯರ್‌ ಗುರುಪ್ರಸಾದ್.ಜೆ ಹಾಗೂ ನೈಸರ್ಗಿಕ ವಿಕೋಪ ಕೇಂದ್ರ (ಕೆಎಸ್‍ಎನ್‍ಡಿಎಂಸಿ) ಕಂದಾಯ ಇಲಾಖೆಯ ಹಿರಿಯ ಸಮಾಲೋಚಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಅವರನ್ನು ಒಳಗೊಂಡ ತಂಡ ಹಾನಿಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿತು.

ಅಧ್ಯಯನ ತಂಡವು ಸಿಂದಗಿ ಸಮೀಪದ ರಾಂಪೂರ ಗ್ರಾಮದಲ್ಲಿ ತೊಗರಿ, ಹತ್ತಿ ಬೆಳೆ ಹಾನಿ ಹಾಗೂ ಕೋರಹಳ್ಳಿಯಲ್ಲಿ ಹತ್ತಿ ಬೆಳೆ ಹಾನಿ ಕುರಿತಂತೆ ಪರಿಶೀಲನೆ ನಡೆಸಿದರು.

ADVERTISEMENT

ತಾರಪೂರ ಗ್ರಾಮದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ರೈತರಿಂದ ಮಾಹಿತಿ ಪಡೆಯಿತು.

ಅಕ್ಟೋಬರ್ 11 ರಿಂದ 22 ರವರೆಗೆ ಸುರಿದ ಭಾರಿ ಮಳೆಯಿಂದ ಹಾನಿಯಾದ, ಭೀಮಾ ಹಾಗೂ ಡೋಣಿ ನದಿಯಿಂದ ಪ್ರವಾಹಕ್ಕೊಳಗಾದ ಚಡಚಣ, ಇಂಡಿ ಮತ್ತು ಸಿಂದಗಿ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ, ಮನೆ ಹಾನಿ ಹಾಗೂ ಮೂಲ ಸೌಕರ್ಯಗಳ ಹಾನಿಯಾದ ಬಗ್ಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಅವರು ಸಿಂದಗಿ ತಹಶೀಲ್ದಾರ್‌ ಕಚೇರಿಯಲ್ಲಿ ಪಿಪಿಟಿ ಮೂಲಕ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು.

ಚಡಚಣ, ಇಂಡಿ ಹಾಗೂ ಸಿಂದಗಿ ತಾಲ್ಲೂಕುಗಳ 28 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿದ್ದು, 4041 ಮನೆಗಳಿಗೆ ನೀರು ನುಗ್ಗಿದೆ. ಅವರಿಗೆ ತಲಾ ₹ 10 ಸಾವಿರದಂತೆ ಜಿಲ್ಲಾಡಳಿತದಿಂದ ಪರಿಹಾರ ನೀಡಲಾಗಿದೆ ಎಂದರು.

ಪ್ರವಾಹದಲ್ಲಿ ಸಿಲುಕಿದ್ದ 1516 ಜನರನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 42 ಕಾಳಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತರಿಗೆ ಆಶ್ರಯ ನೀಡಲಾಗಿತ್ತು ಎಂದರು.

ಮಳೆ, ಪ್ರವಾಹದಿಂದ ಜಿಲ್ಲೆಯಲ್ಲಿ 12 ಜನ, 13 ಜಾನುವಾರುಗಳು ಸಾವಿಗೀಡಾಗಿವೆ ಎಂದು ತಿಳಿಸಿದರು.

ಕೃಷಿ ಬೆಳೆ ಹಾನಿ: 2,07,146 ಹೆಕ್ಟೆರ್ ಕೃಷಿ ಬೆಳೆ ಹಾಗೂ 1,19,29 ಹೆಕ್ಟೆರ್‌ ತೋಟಗಾರಿಕಾ ಬೆಳೆ ಹಾನಿಯಾಗಿರುವುದಾಗಿ ತಂಡಕ್ಕೆ ಮಾಹಿತಿ ನೀಡಿದರು.

ಇಂಡಿ ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ವಿಲಿಯಮ್ಸ್, ವಿಜಯಪುರ ಉಪವಿಭಾಗಾಧಿಕಾರಿ ರಾಮಚಂದ್ರ, ವಿಪತ್ತು ನಿರ್ವಹಣಾ ಘಟಕದ ಅಧಿಕಾರಿ ರಾಕೇಶ ಜೈನಾಪೂರ, ತೋಟಗಾರಿಕಾ ಉಪನಿರ್ದೇಶಕ ಸಿದ್ಧರಾಯ ಬರಗಿಮಠ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಬಿ. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.