ADVERTISEMENT

ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಜಾನುವಾರು ಜಾತ್ರೆ: ದರ ಗಗನಮುಖಿ

ಅಲ್ಲಮಪ್ರಭು ಕರ್ಜಗಿ
Published 19 ಜನವರಿ 2026, 2:50 IST
Last Updated 19 ಜನವರಿ 2026, 2:50 IST
ಚಡಚಣದ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಕಂಡುಬಂದ ರಾಸುಗಳು
ಚಡಚಣದ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಕಂಡುಬಂದ ರಾಸುಗಳು   

ಚಡಚಣ: ಸ್ಥಳೀಯ ಸಂಗಮೇಶ್ವರ ದೇವರ ಜಾತ್ರೆ ಅಂಗವಾಗಿ ಭಾನುವಾರದಿಂದ ಆರಂಭಗೊಂಡಿರುವ ಜಾನುವಾರು ಜಾತ್ರೆಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ದರ ಏರಿಕೆಯಾಗಿದೆ. 

ಶ್ರೀ ಸಂಗಮೇಶ್ವರ ಸಂಸ್ಥೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಪಟ್ಟಣ ಪಂಚಾಯಿತಿ  ಸಹಯೋಗದಲ್ಲಿ ಜಾತ್ರೆ ಆಯೋಜಿಸಲಾಗಿದ್ದು, ಜಾನುವಾರುಗಳಿಗೆ ಆರೋಗ್ಯ ರಕ್ಷಣೆಯ ವ್ಯವಸ್ಥೆ, ನೀರು ಮತ್ತು ಬೆಳಕಿನ ಸೌಲಭ್ಯ, ಉತ್ತಮ ರಾಸುಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಕರ್ನಾಟಕ, ಮಹಾರಾಷ್ಟ್ರ,ಕೇರಳ, ಆಂಧ್ರ ಪ್ರದೇಶ, ಗುಜರಾತ ಹಾಗೂ ಗೋವಾ ರಾಜ್ಯಗಳ ವಿವಿಧ ತಳಿಯ  ಹೆಚ್ಚಿನ ಜಾನುವಾರುಗಳು ಜಾತ್ರೆಯಲ್ಲಿವೆ, ಭಾನುವಾರ ರಾಸುಗಳ ವಹಿವಾಟು ನಿಧಾನಗತಿಯಲ್ಲಿ ಆರಂಭಗೊಂಡಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಜಾತ್ರೆಗೆ ಆಗಮಿಸಿದ ಜಾನುವಾರುಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ.

ADVERTISEMENT

ರಾಸುಗಳಿಗೆ ತಕ್ಕಂತೆ  ದರ ನಿಗದಿಪಡಿಸಲಾಗಿದೆ. ಒಂದು ವರ್ಷದ ಹೋರಿಕರು ಕನಿಷ್ಠ ₹50 ಸಾವಿರದಿಂದ ಆರಂಭಗೊಂಡು, ಉತ್ತಮ ತಳಿಯ ಹೋರಿಕರುಗಳು ₹3ರಿಂದ ₹4 ಲಕ್ಷದವರೆಗೂ ಬೆಲೆ ನಿಗದಿಪಡಿಸಲಾಗಿದೆ.   ಜೋಡೆತ್ತುಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದ್ದು, ಅವುಗಳ ಕನಿಷ್ಠ ಬೆಲೆ ಒಂದೂವರೆ ಲಕ್ಷ.

ಜಾನುವಾರುಗಳ ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ದನ ಕರುಗಳನ್ನು ಸಾಕಿ, ಕೃಷಿ ಮಾಡುವವ ರೈತರ ಸಂಖ್ಯೆಯೂ ಕಡಿಮೆಯಾಗಿ, ಯಂತ್ರೋಪಕರಣ ಬಳಕೆ ಹೆಚ್ಚಾಗಿದೆ. ಹೀಗಾಗಿ ಜಾನುವಾರುಗಳ ಸಂತತಿಯೂ ಕಡಿಮೆಯಾಗುತ್ತಿದೆ  ಎನ್ನುತ್ತಾರೆ ಸ್ಥಳೀಯ ರೈತ ಲಾಲಸಾಬ ಅತ್ತಾರ.

ಜಾತ್ರೆ ಹಿನ್ನೆಲೆ : 1942ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಚಲೇಜಾವ ಚಳವಳಿ ಮೇರು ಘಟ್ಟವಾಗಿತ್ತು.ಇದೇ ಸಂದರ್ಭದಲ್ಲಿ ಸೋಲಾಪುರದಲ್ಲಿ ನಡೆಯುತ್ತಿದ್ದ ಜಾನುವಾರು ಜಾತ್ರೆಯಲ್ಲಿ ಬ್ರಿಟಿಷರು ನಡೆಸಿದ ದಬ್ಬಾಳಿಕೆಗೆ ರೈತರು ತಮ್ಮ ಜನ ದನಕರುಗಳೊಂದಿಗೆ ಪುಷ್ಯ ಮಾಸದಲ್ಲಿ ಓಡಿ ಬಂದು ಚಡಚಣದ  ಸಂಗಮೇಶ್ವರ ದೇವಸ್ಥಾನದ ಎರಡು ಹಳ್ಳಗಳ ವಿಶಾಲ ಮೈದಾನದಲ್ಲಿ ಬೀಡು ಬಿಟ್ಟರು.

 ಜಾನುವಾರುಗಳನ್ನು ಕಂಡ ಗ್ರಾಮದ ಹಿರಿಯರು, ರೈತರಿಗೆ ಆಹಾರದ ವ್ಯವಸ್ಥೆ, ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆಯೊಂದಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲಾಯಿತು. ಅಂದಿನಿಂದ ಆರಂಭಗೊಂಡ ಜಾನುವಾರು ಜಾತ್ರೆ ವರ್ಷದಿಂದ ವರ್ಷಕ್ಕೆ ನಡೆಯುತ್ತಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಜಾನುವಾರುಗಳ ಬೆಲೆ ಹೆಚ್ಚಾಗಿದೆ. ಸಾಮಾನ್ಯ ರೈತ ಖರೀದಿಸುವುದು ಕಷ್ಟ
ಬಸಣ್ಣ ಗಡ್ಡದ ರೈತ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.