ವಿಜಯಪುರ: ₹500 ಕೋಟಿಗೂ ಅಧಿಕ ಮೊತ್ತದ ಚಡಚಣ ಏತ ನೀರಾವರಿ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಯೋಜನೆ ಅಪೂರ್ಣವಾಗಿದ್ದು, ರೈತರ ಹೊಲಕ್ಕೆ ಹನಿ ನೀರು ಹರಿದಿಲ್ಲ. ಈ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಆಗ್ರಹಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೊಂದು ತಿಂಗಳ ಒಳಗಾಗಿ ಚಡಚಣ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸದೇ ಇದ್ದರೇ ಚಡಚಣ ತಹಶೀಲ್ದಾರ್ ಕಚೇರಿ ಎದುರು ರೈತರೊಂದಿಗೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.
2017ರಲ್ಲಿ ಆರಂಭವಾದ ಈ ಏತ ನೀರವಾರಿ ಯೋಜನೆ 2020ಕ್ಕೆ ಪೂರ್ಣವಾಗಬೇಕಿತ್ತು. ಆದರೆ, ಇದುವರೆಗೂ ಪೂರ್ಣಗೊಂಡಿಲ್ಲ. ಲಿಫ್ಟ್ ಹೆಡ್ ವರ್ಕ್ಸ್ ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್ ₹109.24 ಕೋಟಿಗೆ ನೀಡಲಾಗಿದೆ. ಈ ಕಾರ್ಯ 2019ರಲ್ಲಿ ಪೂರ್ಣವಾಗಬೇಕಿತ್ತು. 2029ರ ವರೆಗೆ ನಿರ್ವಹಣೆ ಮಾಡಬೇಕಿತ್ತು. ಆದರೆ, ಈ ಕಾರ್ಯವಾಗಿಲ್ಲ ಎಂದು ಆರೋಪಿಸಿದರು.
ಪೈಪ್ ವಿತರಣಾ ಜಾಲ ಅನ್ನು ವಿಜಯಪುರದ ಜಿ. ಶಂಕರ್ ಎಂಬುವವರಿಗೆ ನೀಡಲಾಗಿತ್ತು. ₹186.05 ಕೋಟಿ ಮೊತ್ತದ ಈ ಕಾರ್ಯ 2020ಕ್ಕೆ ಪೂರ್ಣವಾಗಬೇಕಿತ್ತು. ಐದು ವರ್ಷ ನಿರ್ವಹಣೆ ಮಾಡಬೇಕಿದೆ. ಆದರೆ, ಕಳಪೆ ಗುಣಮಟ್ಟದ ಪೈಪ್ ಅಳವಡಿಸಿದ್ದು, ಎಲ್ಲೆಡೆ ಒಡೆದು ಹೋಗಿವೆ ಎಂದು ದೂರಿದರು.
ಭೀಮಾ ನದಿ ಉಮರಾಣಿ ಬ್ಯಾರೇಜ್ ನಿಂದ 1.2 ಟಿಎಂಸಿ ಅಡಿ ನೀರು ಬಳಸಿಕೊಂಡಿ ಚಡಚಣ, ರೇವತಗಾಂವ, ಹಾವಿನಾಳ, ಗೋಡಿಹಾಳ, ಹಾಲಹಳ್ಳಿ, ಬರಡೋಲ, ಶಿರಡೋಣ ಭಾಗದ 22,772 ಎಕರೆ ಜಮೀನಿಗೆ ನೀರೊದಗಿಸಬೇಕಾದ ಮಹತ್ವದ ಯೋಜನೆ ಹಳ್ಳ ಹಡಿದಿದೆ. ರೈತರ ಭೂಮಿಗೆ ಇಂದಿನವರೆಗೂ ಹನಿ ನೀರು ಹರಿದಿಲ್ಲ, ಗುತ್ತಿಗೆದಾರರು ಹಣ ತೆಗೆದುಕೊಂಡು ಹೋಗಿದ್ದಾರೆ. ಹೊಸ ಪೈಪ್ ಲೈನ್ ಹಾಕಬೇಕು, ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಆಗ್ರಹಿಸಿದರು.
ಚಡಚಣ ಏತ ನೀರಾವರಿ ಯೋಜನೆ ಹೆಸರಲ್ಲಿ ರೈತರಿಗೆ ಮೋಸ ಮಾಡಲಾಗಿದೆ. ಈಗಲೇ ಇದು ಸರಿಯಾಗಬೇಕು, ಇಲ್ಲವಾದರೆ ಮುಂದೆಂದೂ ಸರಿಯಾಗುವುದಿಲ್ಲ. ಇದರಿಂದ ಈ ಭಾಗದ ಜನರಿಗೆ ತೊಂದರೆ ಆಗಲಿದೆ ಎಂದರು.
ಬಿಜೆಪಿ ಮುಖಂಡರಾದ ಸಿ.ಎಸ್.ಪಾಟೀಲ, ಭೀಮನಗೌಡ ಬಿರಾದಾರ, ವಿಜಯ ಜೋಶಿ ಇದ್ದರು.
ಚಡಚಣ ಏತ ನೀರಾವರಿ ಯೋಜನೆ ಕಳಪೆ ಕಾಮಗಾರಿ ಅವ್ಯವಹಾರ ಆಗಿರುವ ಕುರಿತು ಸಮಗ್ರ ಮಾಹಿತಿಯೊಂದಿಗೆ ಲೋಕಾಯುಕ್ತಕ್ಕೂ ದೂರು ನೀಡಲಾಗುವುದು.ರಮೇಶ ಜಿಗಜಿಣಗಿ ಸಂಸದ
ಪಿಪಿಪಿ ವೈದ್ಯಕೀಯ ಕಾಲೇಜು ಬೇಡ
ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು ಪಿಪಿಪಿ ಬೇಡ ಜಿಲ್ಲಾಸ್ಪತ್ರೆ ಇದೆ. ಅದನ್ನು ಖಾಸಗಿಯರವಿಗೆ ನೀಡಲು ಸರ್ಕಾರ ಮುಂದಾದರೆ ಜಿಲ್ಲೆಯಲ್ಲಿ ಎಲ್ಲರೂ ನನಗೂ ಬೇಕು ಎಂದು ಕೇಳುತ್ತಾರೆ. ಈ ಸಂಬಂಧ ನಡೆಯುತ್ತಿರುವ ಧರಣಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಯುಕೆಪಿ ಮೂರನೇ ಹಂತದಲ್ಲಿ ಮುಳುಗಡೆಯಾಗುವ ರೈತರ ಭೂಮಿಗೆ ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ಒಪ್ಪಿತ ದರವನ್ನು ನಾನು ಸ್ವಾಗತಿಸುತ್ತೇನೆ ಎಂದರು. ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ದಲಿತ ಹೆಣ್ಣು ಮಗಳಿಗೆ ಅವಕಾಶ ಇಲ್ಲ ಎಂಬ ಶಾಸಕ ಯತ್ನಾಳ ಹೇಳಿಕೆ ಖಂಡನೀಯ. ಹಾಗೇ ಹೇಳುವುದು ಸರಿಯಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.