ADVERTISEMENT

ಒಳಮೀಸಲಾತಿ ಜಾರಿಗೆ ಮುನ್ನವೇ ನೇಮಕಾತಿ ಅಧಿಸೂಚನೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:43 IST
Last Updated 26 ಫೆಬ್ರುವರಿ 2026, 5:43 IST
ಜೈ ಭೀಮ್ ಮುತ್ತಗಿ
ಜೈ ಭೀಮ್ ಮುತ್ತಗಿ   

ವಿಜಯಪುರ: ಒಳಮೀಸಲಾತಿ ಜಾರಿಯಾಗುವ ಮುನ್ನವೇ ಒಂದು ಸಮುದಾಯದ ಓಲೈಕೆಗಾಗಿ ಅವೈಜ್ಞಾನಿಕ ರೋಸ್ಟರ್ ಬಿಂದು ಆಧರಿಸಿ ವಿವಿಧ ಇಲಾಖೆಗಳ ನೇಮಕಾತಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಿರುವುದು ಛಲವಾದಿ ಸಮಾಜಕ್ಕೆ ಮರಣ ಶಾಸನವಾಗಿಸಿದೆ ಎಂದು ಛಲವಾದಿ ಸಮಾಜದ ಮುಖಂಡ ಜೈ ಭೀಮ್ ಮುತ್ತಗಿ ಅಸಮಾಧಾನ ವ್ಯಕ್ತ ಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಒಳ ಮೀಸಲಾತಿಯೇ ಇನ್ನೂ ಜಾರಿಯಾಗಿಲ್ಲ. ಅದಕ್ಕೆ ಇನ್ನೂ ರಾಜ್ಯಪಾಲರ ಅಂಕಿತವೇ ಬಿದ್ದಿಲ್ಲ. ಅಲೆಮಾರಿ ಸಮುದಾಯ ಒಳ ಮೀಸಲಾತಿ ಹಂಚಿಕೆ ವಿಷಯವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ. ಕೇವಲ ಒಂದು ಸಮುದಾಯದ ಓಲೈಕೆ ಮಾಡುವುದಕ್ಕಾಗಿ ರೋಸ್ಟರ್ ಬಿಂದುವಿನ ಮೂಲಕ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. ಇದು ಛಲವಾದಿ ಸಮಾಜಕ್ಕೆ ಮರಣ ಶಾಸನವಾಗಿದೆ ಅಷ್ಟೇ ಅಲ್ಲದೇ ಪ್ರವರ್ಗ ಬಿ, ಪ್ರವರ್ಗ ಸಿ ಸಮುದಾಯಗಳಿಗೂ ದೊಡ್ಡ ಅನ್ಯಾಯವಾಗಿದೆ. ಒಂದು ಸಮುದಾಯಕ್ಕೆ ಸುಣ್ಣ, ಒಂದು ಸಮುದಾಯಕ್ಕೆ ಬೆಣ್ಣೆ ಕೊಡುವುದು ಸರಿಯಲ್ಲ’ ಎಂದರು.

‘ವಿವಿಧ ಇಲಾಖೆಗಳಲ್ಲಿ ಅನೇಕ ಹುದ್ದೆಗಳಿಗೆ ಪ್ರವರ್ಗ 1 ರ ಸಮುದಾಯಕ್ಕೆ ಹೆಚ್ಚಿನ ಹುದ್ದೆಗಳನ್ನು ಮೀಸಲಿರಿಸಲಾಗಿದೆ. ನಾವು ಪ್ರವರ್ಗ -1 ರ ಸಮುದಾಯದ ವಿರೋಧಿಗಳಲ್ಲ. ನಮ್ಮ ಹಕ್ಕನ್ನು ಮಾತ್ರ ನಾವು ಕೇಳುತ್ತಿದ್ದೇವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅಧಿಸೂಚನೆ ರದ್ದುಗೊಳಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು, ಯಾವ ಸಚಿವರೂ ಜಿಲ್ಲೆ ಪ್ರವೇಶಿಸದಂತೆ ಅಡ್ಡಿಪಡಿಸುವ ಮೂಲಕ ಹೋರಾಟ ನಡೆಸಲು ನಾವು ಸಿದ್ಧರಾಗಿದ್ದೇವೆ’ ಎಂದರು.

ADVERTISEMENT

ಛಲವಾದಿ ಸಮಾಜ ಮುಖಂಡರಾದ ಗುರು ಪ್ರಸಾದ್, ಗುರುರಾಜ್ ಓಲೇಕಾರ, ಹುಚ್ಚಪ್ಪ ಬಾವಿಮನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.