ADVERTISEMENT

ಮರಗೂರ ಮೊರಾರ್ಜಿ ದೇಸಾಯಿ ವಸತಿ ಶಾಲೆ: ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:34 IST
Last Updated 26 ಜುಲೈ 2025, 6:34 IST
ವಿಜಯಪುರ - ಇಂಡಿ ಮಧ್ಯದ ರಾಷ್ಟ್ರೀಯ ಹೆದ್ದಾರಿ ಮೇಲೆ ಶಾಲೆಗೆ ತೆರಳಲು ಶುಕ್ರವಾರ ಬಸ್ಸಿಗಾಗಿ ಕಾಯುತ್ತಿದ್ದ ಮಕ್ಕಳ ಜೊತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸದಸ್ಯರಾದ ಶಶಿಧರ ಕೋಸಂಬೆ, ಡಾ.ಕೆ.ಟಿ. ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ ಮಾತನಾಡಿದರು
ವಿಜಯಪುರ - ಇಂಡಿ ಮಧ್ಯದ ರಾಷ್ಟ್ರೀಯ ಹೆದ್ದಾರಿ ಮೇಲೆ ಶಾಲೆಗೆ ತೆರಳಲು ಶುಕ್ರವಾರ ಬಸ್ಸಿಗಾಗಿ ಕಾಯುತ್ತಿದ್ದ ಮಕ್ಕಳ ಜೊತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸದಸ್ಯರಾದ ಶಶಿಧರ ಕೋಸಂಬೆ, ಡಾ.ಕೆ.ಟಿ. ತಿಪ್ಪೇಸ್ವಾಮಿ, ಶೇಖರಗೌಡ ರಾಮತ್ನಾಳ ಮಾತನಾಡಿದರು   

ವಿಜಯಪುರ: ಜಿಲ್ಲೆಯ ವಿವಿಧೆಡೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಂಡಿ ಮತ್ತು ಚಡಚಣ ತಾಲ್ಲೂಕಿನ ವಿವಿಧ ಶಾಲಾ-ಕಾಲೇಜು, ವಸತಿ ನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ, ಡಾ.ತಿಪ್ಪೇಸ್ವಾಮಿ ಕೆ.ಟಿ ಮತ್ತು ಶೇಖರಗೌಡ ಜಿ ಅವರನ್ನು ಒಳಗೊಂಡ ತಂಡ ಭೇಟಿ ನೀಡಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು.

ಮರಗೂರ ಮೊರಾರ್ಜಿ ದೇಸಾಯಿ ಶಾಲೆಗೆ ಮಕ್ಕಳ ಆಯೋಗದ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ 250 ಮಕ್ಕಳಲ್ಲಿ 100 ಮಕ್ಕಳು ಗೈರಾಗಿರುವುದು ಕಂಡು ತೀವ್ರ ಕಳವಳ ವ್ಯಕ್ತ ಪಡಿಸಿತು.

ADVERTISEMENT

ತಣ್ಣೀರಿನ ಸ್ನಾನದಿಂದ ಚರ್ಮರೋಗದ ಆತಂಕ, ದೈಹಿಕ ಶಿಕ್ಷಣ ಶಿಕ್ಷಕರಿಂದ ಬೆದರಿಕೆ ಸೇರಿ ಸಾಲು ಸಾಲು ಸಮಸ್ಯೆಗಳ ಕುರಿತು ಆಯೋಗದ ಸದಸ್ಯರಿಗೆ ಮಕ್ಕಳು ಗೌಪ್ಯತೆ ಪತ್ರ ಬರೆದು ತಮ್ಮ ಅಳಲು ತೊಡಿಕೊಂಡರು.

ಆಯೋಗ ಮಕ್ಕಳ ಗೌಪ್ಯತೆ ಪತ್ರ ಆಧರಿಸಿ ಶಾಲೆಯ ಪ್ರಾಚಾರ್ಯ, ದೈಹಿಕ ಶಿಕ್ಷಣ ಶಿಕ್ಷಕ ಮತ್ತು ನರ್ಸ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ಸಂಬಂಧಿತ ಇಲಾಖೆಯ ಮೇಲಧಿಕಾರಿಗಳಿಗೆ ಸೂಚನೆ ನೀಡಿತು.

ಬಾಲಕಿಯರಿಗೆ ಶೌಚಗೃಹದ ಕೊರತೆ:

ಝಳಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿಗೆ ಆಯೋಗ ಭೇಟಿ ನೀಡಿತು. ಈ ಸಂದರ್ಭದಲ್ಲಿ 1500 ಮಕ್ಕಳಿರುವ ಶಾಲಾ-ಕಾಲೇಜಿನಲ್ಲಿ ಕೇವಲ ಎರಡು ಶೌಚಾಲಯ ಇರುವ ಬಗ್ಗೆ ಬಾಲಕಿಯರು ಬಗ್ಗೆ ಆಯೋಗದ ಗಮನಕ್ಕೆ ತಂದರು.

ಬಾಲಕರು ಕೂಡ ಇದೇ ಸಮಸ್ಯೆಯನ್ನು ತೊಡಿಕೊಂಡರು. 400 ಮಕ್ಕಳು ಇರುವ ಪ್ರೌಢ ಶಾಲೆಯಲ್ಲಿ ಕಳೆದೊಂದು ವಾರದಿಂದ ಮೊಟ್ಟೆ ನೀಡದೇ ಇರುವುದು, ಅರ್ಧಕ್ಕೂ ಹೆಚ್ಚು ಮಕ್ಕಳಿಗೆ ಬಾಳೆ ಹಣ್ಣು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.

ನಂತರ ದಾಖಲಾತಿ ಮತ್ತು ಹಾಜರಾತಿ ಪುಸ್ತಕ ಆಯೋಗ ಪರಿಶೀಲಿಸಿದ ವೇಳೆ ಒಂದಕ್ಕೊಂದು ತಾಳೇ ಆಗದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸಂಬಂಧಿತರಿಗೆ ನೋಟಿಸ್ ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿತು.

ಕಲಬೆರಿಕೆ ತೊಗರಿ ಬೇಳೆ:

ಶಾಲೆಯ ಬಿಸಿಯೂಟ ಕೋಣೆಗೆ ಆಯೋಗದ ಸದಸ್ಯರು ಭೇಟಿ ನೀಡಿ ತೊಗರಿ ಬೇಳೆ, ತರಕಾರಿ ಮತ್ತಿತರ ಧಾನ್ಯಗಳನ್ನು ಪರಿಶೀಲಿಸಿದರು. ಕಲಬೆರಿಕೆ ತೊಗರಿ ಬೇಳೆ ಪೂರೈಕೆ ಹಿನ್ನೆಲೆಯಲ್ಲಿ ಡಿಸಿ ಮತ್ತು ಬಿಸಿಯೂಟ ನಿರ್ದೇಶಕರಿಗೆ ಪತ್ರ ಬರೆದು ಆಯೋಗಕ್ಕೆ ವರದಿ ನೀಡುವಂತೆ ಸೂಚನೆ ನೀಡಿದರು.

ಪೊಲೀಸ್ ಠಾಣೆಗೆ ಭೇಟಿ:

ಹೊರ್ತಿ ಮತ್ತು ಝಳಕಿ ಪೊಲೀಸ್ ಠಾಣೆಗಳಿಗೆ ಆಯೋಗದ ಸದಸ್ಯರು ಭೇಟಿ ನೀಡಿದರು. ಮಕ್ಕಳ ವಿಶೇಷ ಪೊಲೀಸ್ ಘಟಕದ ಕಾರ್ಯವೈಕರಿ ಸರಿಯಾಗಿ ನಡೆಯದಿರುವ ಬಗ್ಗೆ ಬೇಸರ ವ್ಯಕ್ತ ಪಡಿಸಿ ಇಲ್ಲಿಯ ಪರಿಸ್ಥಿತಿ ಗಮನಿಸಿದರೇ ಜಿಲ್ಲೆಯ ಎಲ್ಲ27 ಪೊಲೀಸ್ ಠಾಣೆಗಳಲ್ಲಿ ಮಕ್ಕಳ ವಿಶೇಷ ಪೊಲೀಸ್ ಘಟಕ ಸರಿಯಾಗಿ ಕಾರ್ಯನಿರ್ವಹಿಸದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾ ನಿರೂಪಣಾಧಿಕಾರಿ ಸಾವಿತ್ರಿ ಗೂಗ್ಗರಿ, ಡಿಸಿಪಿಒ ದೀಪಾಕ್ಷಿ ಜಾನಕಿ ಇದ್ದರು.  

ಬಾಲ್ಯವಿವಾಹ ಅಪೌಷ್ಠಿಕತೆ ಬಾಲಕಾರ್ಮಿಕ ಪದ್ಧತಿ ವಿಷಯಗಳಲ್ಲಿ ಮಕ್ಕಳಿಗೆ ಪಾಲಕರಿಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಕಾಲಕಾಲಕ್ಕೆ ಗ್ರಾ. ಪಂ. ಮಟ್ಟದಲ್ಲಿ ಸಭೆ ನಡೆಸಬೇಕು
ಕೆ.ನಾಗಣ್ಣಗೌಡ ಅಧ್ಯಕ್ಷ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಮಕ್ಕಳಿಗೆ ಬಸ್ ಹತ್ತಿಸಿದ ಆಯೋಗ:

ವಿವಿಧೆಡೆ ಆಯೋಗ ಭೇಟಿ ನೀಡಿದ ವೇಳೆ ವಿಜಯಪುರ-ಇಂಡಿ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ನಿಂತಿರುವುದು ಗಮನಿಸಿದರು. ತಕ್ಷಣ ಮಕ್ಕಳಿಗೆ ಬಳಿಗೆ ಆಯೋಗದ ತಂಡ ಭೇಟಿ ನೀಡಿ ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ಬಸ್ ಇಲ್ಲದಿರುವುದನ್ನು ಗಮನಕ್ಕೆ ತಂದರು.

ಮುಂದಿನ ದಿನಗಳಲ್ಲಿ ಶಾಲಾ-ಕಾಲೇಜಿನ ಅವಧಿಯಲ್ಲಿ ಬಸ್ ಸಂಚರಿಸುವಂತೆ ಸಾರಿಗೆ ಅಧಿಕಾರಿಗಳ ಜತೆಗೆ ಪತ್ರ ವ್ಯವಹಾರ ಮಾಡುವುದಾಗಿ ಭರವಸೆ ನೀಡಿ ಮಕ್ಕಳಿಗೆ ಬಸ್ ಹತ್ತಿಸಿ ಕಾಳಜಿ ಮೆರೆದರು.  

ಮಕ್ಕಳ ಹಕ್ಕುಗಳ ರಕ್ಷಣೆ ಮುಂದಾಗಿ: ನಾಗಣ್ಣಗೌಡ 

ವಿಜಯಪುರ: ಮಕ್ಕಳ ರಕ್ಷಣೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.  ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ-ಯೋಜನೆಗಳ ಕುರಿತು ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಎದ್ದು ಕಾಣುವಂತೆ ಮಾಹಿತಿ ಫಲಕ ಅಳವಡಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಸಭೆ ನಡೆಸಿ ನಡಾವಳಿಯನ್ನು ನಿರ್ವಹಿಸಬೇಕು ಎಂದರು. ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಬೇಕು. ಅನಿಮಿಯಾ ಮುಕ್ತ ಜಿಲ್ಲೆಯನ್ನಾಗಿಸಲು ವ್ಯಾಪಕವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಅಪೌಷ್ಠಿಕತೆ ತಾಯಿ-ಮಕ್ಕಳ ಮರಣ ಪ್ರಮಾಣ ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ಕಾಯ್ದೆಯನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ  ಸೂಚನೆ ನೀಡಿದರು. 

ಜಿಲ್ಲೆಯ ಅಂಗವಾಡಿ ಕೇಂದ್ರಗಳಲ್ಲಿ ಅವಶ್ಯವಿದ್ದೆಡೆ ಮೂಲ ಸೌಲಭ್ಯ ಕಂಪೌಂಡ್ ಗೋಡೆ ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.  ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಕಲೆ ಹಾಕಿ ಈ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಿ ಮರಳಿ ಮಕ್ಕಳಿಗೆ ಶಾಲೆಗೆ ಕರೆತರಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು. ವಸತಿ ನಿಲಯ ವಸತಿ ಶಾಲೆ ಮಕ್ಕಳಿಗೆ ಕಲ್ಪಿಸಲಾಗುತ್ತಿರುವ ಆಹಾರ ಮೂಲ ಸೌಲಭ್ಯಗಳ ಪರಿಶೀಲನೆ ನಡೆಸಿ ಮಕ್ಕಳ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಅವರು ಹೇಳಿದರು.  

ಜಿಲ್ಲಾಧಿಕಾರಿ ಡಾ.ಆನಂದ ಕೆ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಡಿವೈಎಸ್‍ಪಿ ಬಸವರಾಜ ಯಲಿಗಾರ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ್‌ ಸೌದಾಗರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ದೀಪಾಕ್ಷಿ ಜಾನಕಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.