ADVERTISEMENT

ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಬಿ.ಆರ್. ನಾಡಗೌಡ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 3:05 IST
Last Updated 24 ಡಿಸೆಂಬರ್ 2025, 3:05 IST
ಬಿ.ಅರ್.ನಾಡಗೌಡ
ಬಿ.ಅರ್.ನಾಡಗೌಡ   

ಆಲಮೇಲ: ಡಿಸೆಂಬರ್‌ 24ರಂದು ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ವಿಜಯಪುರ ಹಾಗೂ ವಿಶ್ವೇಶ್ವರ ಬಾಲ ಭಾರತಿ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ಆಲಮೇಲದಲ್ಲಿ ಜರುಗಲಿರುವ 12ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಮಕ್ಕಳ ಸಾಹಿತಿ ಬಿ.ಆರ್.ನಾಡಗೌಡ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡ ಬಿಂದುರಾವ್ ರಾಮರಾವ್ ನಾಡಗೌಡ ಅವರು 10ನೇ ಏಪ್ರಿಲ್ 1944ರಂದು ರಾಮರಾವ್ ಮತ್ತು ಕಮಲಾಬಾಯಿಯವರ ಸುಪುತ್ರರಾಗಿ ಸಿಂದಗಿಯಲ್ಲಿ ಜನಿಸಿದರು.

ಹುನಗುಂದದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಟಿ.ಸಿ.ಎಚ್. ಪಾಸಾಗಿ 1966ರಲ್ಲಿ ತಿಕೋಟಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿ ಜೀವನವನ್ನು ಆರಂಭಿಸಿದರು. ಮಕ್ಕಳಿಗಾಗಿ ಬರೆದ ಕಥೆ, ಕವನ, ಚುಟುಕು ಮತ್ತು ಲೇಖನಗಳನ್ನು ಬರೆದು ಕಳಿಸುವುದರ ಮೂಲಕ ಅವರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯನ್ನಿಟ್ಟರು.ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದ ನಾಡಗೌಡರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ತಿಕೋಟಾದ ಶಾಲೆಯಲ್ಲಿ ಸಾಹಿತ್ಯ ಉತ್ಸವ ಮತ್ತು ಮಕ್ಕಳ ಕವಿಗೋಷ್ಠಿಗಳನ್ನು ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ ಬೆಳೆಸಿದ್ದಾರೆ.

ಜೈನಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕು ವರ್ಷ ಶಿಕ್ಷಕರಾಗಿ ವಿದ್ಯಾರ್ಥಿಗಳ ಮತ್ತು ಪಾಲಕರ ಪ್ರೀತಿಗೆ ಪಾತ್ರರಾಗಿದ್ದಾರೆ. ನಂತರ ಸಾರವಾಡದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕರಾಗಿ ಶಿಕ್ಷಕ ವೃತ್ತಿಯಿಂದ ಸೇವಾ ನಿವೃತ್ತಿ ಹೊಂದಿದ್ದಾರೆ. ನವರಸಪುರ ಉತ್ಸವದಲ್ಲಿ ಹಾಗೂ ಗುಬ್ಬಚ್ಚಿ ಗೂಡು ಮಕ್ಕಳ ಸಮ್ಮೇಳನದಲ್ಲಿ ಕವನ ವಾಚನ ಮಾಡಿದ್ದಾರೆ. ರಾಜ್ಯಮಟ್ಟದ ಮಕ್ಕಳ ಕಥಾ ರಚನಾ ಕಮ್ಮಟ, ನಾಟಕ ರಚನಾ ಕಮ್ಮ ಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಮಕ್ಕಳ ಸಾಹಿತ್ಯ ನಡೆದು ಬಂದ ದಾರಿ ಕುರಿತು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ADVERTISEMENT
90 ವರ್ಷದ ತುಂಬು ಜೀವನ ನಡೆಸುತ್ತಿರುವ ಬಿ.ಆರ್.ನಾಡಗೌಡ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಅಖಂಡ 34 ವರ್ಷಗಳ ಸೇವೆ ಮಾಡುವ ಮೂಲಕ ಅಪಾರ ಶಿಷ್ಯ ಬಳಗ ಹೊಂದಿದ್ದಾರೆ
ಪ್ರೊ. ಎ.ಆರ್. ಹೆಗ್ಗನದೊಡ್ಡಿ ,ಅಧ್ಯಕ್ಷರು, ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ

'ಜೀವಜಲ' ಕವಿತೆ ಐ.ಸಿ.ಎಸ್.ಇ. ಪಠ್ಯಕ್ರಮದ ನಾಲ್ಕನೇ ವರ್ಗದ ಕನ್ನಡ ಪಠ್ಯಪುಸ್ತಕದಲ್ಲಿ ಪ್ರಕಟಗೊಂಡಿರುವುದು ಅವರ ಮಕ್ಕಳ ಸಾಹಿತ್ಯಕ್ಕೆ ಸಂದ ಗೌರವವಾಗಿದೆ. ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ ಸಾಧಕರ ಸಂದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ನಾಡಗೌಡರು ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ನಮ್ಮ ನಾಡು, ಬೆಣ್ಣೆ ಮುದ್ದೆ ಮತ್ತು ರಜೆಯ ಮಜೆ ಕೃತಿಗಳನ್ನು ನೀಡಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯ ಸಾಧನೆಯನ್ನು ಗುರುತಿಸಿ ನಾಡಿನ ವಿವಿಧ ಸಂಘಟನೆಗಳು ವಿಶೇಷ ಪ್ರಶಸ್ತಿ ನೀಡಿ ಗೌರವಿಸಿವೆ. ವಿಜಯಪುರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ವಿಜಯಪುರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.