ADVERTISEMENT

ಜಿಲ್ಲೆಯಲ್ಲಿ ಕ್ರಿಸ್‌ಮಸ್‌ ಕಾತರ; ಚರ್ಚ್‌, ಮನೆಗಳಲ್ಲಿ ವಿದ್ಯುತ್‌ ದೀಪಾಲಂಕಾರ

ಡಿ.25ರಂದು ಸಂಭ್ರಮದಿಂದ ಕ್ರಿಸ್‌ಮಸ್‌ ಆಚರಣೆ; ಕೇಕ್ ವಿತರಣೆ

ಸುಭಾಸ ಎಸ್.ಮಂಗಳೂರ
Published 24 ಡಿಸೆಂಬರ್ 2019, 12:10 IST
Last Updated 24 ಡಿಸೆಂಬರ್ 2019, 12:10 IST
ವಿಜಯಪುರದ ಸಂತ ಅಣ್ಣಮ್ಮನ ದೇವಾಲಯದ ಆವರಣದಲ್ಲಿ ಗೋದಲಿ ನಿರ್ಮಿಸಿರುವುದು
ವಿಜಯಪುರದ ಸಂತ ಅಣ್ಣಮ್ಮನ ದೇವಾಲಯದ ಆವರಣದಲ್ಲಿ ಗೋದಲಿ ನಿರ್ಮಿಸಿರುವುದು   

ವಿಜಯಪುರ: ಜಗತ್ತಿಗೆ ಶಾಂತಿ ಸಂದೇಶ ಸಾರಿದ ಯೇಸುಕ್ರಿಸ್ತನ ಜನ್ಮ ದಿನವಾದ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಭರದ ಸಿದ್ಧತೆಗಳನ್ನು ನಡೆಸಿದ್ದಾರೆ.

ಡಿ.25ರಂದು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕ್ರೈಸ್ತ ಸಮುದಾಯದವರು ಕಾತರದಿಂದ ಕಾಯುತ್ತಿದ್ದಾರೆ. ಇಲ್ಲಿಯ ಸಂತ ಅಣ್ಣಮ್ಮನ ದೇವಾಲಯ ಮತ್ತು ಸಿಎಸ್‌ಐ ಬೆತ್ಲಹೇಮ್‌ ಚರ್ಚ್‌ ಆವರಣದಲ್ಲಿ ಯೇಸುವಿನ ಜನನವನ್ನು ನೆನಪಿಸುವ ಗೋದಲಿಯನ್ನು ನಿರ್ಮಿಸಲಾಗಿದೆ. ಚರ್ಚ್‌ಗಳಿಗೆ ವಿದ್ಯುತ್ ದೀಪಾ
ಲಂಕಾರ ಮಾಡಲಾಗಿದ್ದು, ಕ್ರೈಸ್ತರ ಮನೆಗಳಲ್ಲಿ ಹಬ್ಬದ ಸಂಭ್ರಮ ಇಮ್ಮಡಿಯಾಗಿದೆ.

ಕೇಂದ್ರ ಬಸ್ ನಿಲ್ದಾಣ ಸಮೀಪದ ಸಿಎಸ್‌ಐ ಚರ್ಚ್‌ ಸಿಂಗರಿಸಲಾಗಿದ್ದು, ನಕ್ಷತ್ರ ಹಾಗೂ ವೃತ್ತಾಕಾರ ಮಾದರಿ ತೂಗು ದೀಪಗಳು ಗಮನ ಸೆಳೆಯುತ್ತಿವೆ. ಯೇಸುವಿನ ಆರಾಧನೆ ಮತ್ತು ವಿಶೇಷ ಪ್ರಾರ್ಥನೆ ಸಲ್ಲಿಸಲು ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ADVERTISEMENT

ಕ್ರೈಸ್ತ ಧರ್ಮದ ಸಂಪ್ರದಾಯ, ಆಚರಣೆಯಂತೆ ಈಗಾಗಲೇ ನಾಲ್ಕು ಭಾನುವಾರ ವಿವಿಧೆಡೆ ಧರ್ಮ ಸಭೆಗಳನ್ನು ನಡೆಸಲಾಗಿದೆ. ಹಬ್ಬದ ಹಿಂದಿನ ದಿನ ಕ್ಯಾರಲ್ ಗಾಯನ ನಡೆಯಲಿದೆ. ಶಾಂತಿ, ಸಂತಸ, ನಿರೀಕ್ಷೆ ಮತ್ತು ನಂಬಿಕೆ ಈ ನಾಲ್ಕು ಮಂತ್ರಗಳನ್ನು ಸಾರಲಾಗಿದೆ.

‘ಡಿ.24ರಂದು ರಾತ್ರಿ 9.30 ಗಂಟೆಗೆ ಕ್ಯಾರಲ್ ಗಾಯನ, 9.30 ರಿಂದ 10.30ರ ವರೆಗೆ ಪೂಜೆ, ನಂತರ ಸಿಹಿ ವಿತರಣೆ ನಡೆಯಲಿದೆ. ಡಿ.25ರಂದು ಬೆಳಿಗ್ಗೆ 9.30 ಗಂಟೆಗೆ ವಿಶೇಷ ಪೂಜೆ, ಆಶೀರ್ವಾದ ಜರುಗಲಿದೆ. ಚರ್ಚ್‌ನ ಹೊಸ ಕಟ್ಟಡ ನಿರ್ಮಿಸುತ್ತಿರುವುದರಿಂದ ಡಿ.25ರಂದು ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಗೋದಲಿ ಅತ್ಯಾಕರ್ಷಕವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ’ ಎಂದು ಸಂತ ಅಣ್ಣಮ್ಮ ದೇವಾಲಯದ ಫಾದರ್ ಜಾನ್ ಡಿಸೋಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಡಿ.24ರಂದು ಮಕ್ಕಳಿಂದ ಹಾಗೂ ಡಿ.29ರಂದು ಯುವಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಯೇಸುವಿನ ಜನನವನ್ನು ನೆನಪಿಸುವ ಗೋದಲಿಯನ್ನು ನಿರ್ಮಿಸಲಾಗಿದೆ. ಡಿ.31ರಂದು ರಾತ್ರಿ ಆರಾಧನೆ ಬಳಿಕ, ಹೊಸ ವರ್ಷಕ್ಕೆ ಮುನ್ನುಡಿ ಬರೆಯಲಾಗುವುದು’ ಎಂದು ಸಿಎಸ್‌ಐ ಬೆತ್ಲಹೇಮ್ ಚರ್ಚ್‌ನ ರೆವರೆಂಡ್ ಬಾಲರಾಜ್ ಸುಚಿತ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.