ADVERTISEMENT

ಇಂಡಿ: ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತ

ಇಂಡಿ ತಾಲ್ಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಎ.ಸಿ.ಪಾಟೀಲ
Published 5 ಮೇ 2025, 4:29 IST
Last Updated 5 ಮೇ 2025, 4:29 IST
ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದ ಅಂಬಾಭವಾನಿ ದೇವಸ್ಥಾನದ ಕಾಲೊನಿಯಲ್ಲಿ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ
ಇಂಡಿ ತಾಲ್ಲೂಕಿನ ಭತಗುಣಕಿ ಗ್ರಾಮದ ಅಂಬಾಭವಾನಿ ದೇವಸ್ಥಾನದ ಕಾಲೊನಿಯಲ್ಲಿ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ   

ಇಂಡಿ: ತಾಲ್ಲೂಕಿನ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆಯ ಕೊರತೆಯಿಂದ ಸ್ಥಗಿತಗೊಳ್ಳುತ್ತಿದ್ದು, ಕುಡಿಯುವ ನೀರಿಗೆ ಜನ ಪರದಾಟ ನಡೆಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಹಿತಿಯಂತೆ ಇಂಡಿ ತಾಲ್ಲೂಕಿನಲ್ಲಿ ಒಟ್ಟು 190 ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದು, ಈ ಪೈಕಿ 46 ಘಟಕಗಳು ಸಕ್ರಿಯವಾಗಿದ್ದರೆ, ಏಪ್ರಿಲ್‌ ವರೆಗೆ 144 ಘಟಕಗಳು ಸ್ಥಗಿತಗೊಂಡಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾಗಿ ತಲುಪುತ್ತಿಲ್ಲ ಎನ್ನುವುದಕ್ಕೆ ತಾಲ್ಲೂಕಿನಾದ್ಯಂತ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆಯ ಕಾರ್ಯನಿರ್ವಹಣೆಯೇ ಒಂದು ದೊಡ್ಡ ಉದಾಹರಣೆ.

ADVERTISEMENT

ಪಟ್ಟಣದಿಂದ ಗ್ರಾಮೀಣ ಪ್ರದೇಶದವರೆಗೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಕೆಲವೊಂದಕ್ಕೆ ಸರಿಯಾದ ವಿದ್ಯುತ್ ಪೂರೈಕೆ ಇಲ್ಲ, ಕೆಲವೊಂದಕ್ಕೆ ಬಿಡಿಭಾಗಗಳ ಕೊರತೆ, ಕೆಲವು ಘಟಕಗಳು ರಿಪೇರಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜನರು ತಾಲ್ಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆಯಿಂದ ಪರಿತಪಿಸುತ್ತಿದ್ದಾರೆ.

ಇಂಡಿ ಪಟ್ಟಣಗಳಲ್ಲಿ ಖಾಸಗಿ ಶುದ್ಧ ನೀರಿನ ಘಟಕಗಳಿವೆ. ಪಟ್ಟಣದ ಜನಸಾಮಾನ್ಯರು ಒಂದು ಕ್ಯಾನ್ ನೀರಿಗೆ ₹10 ಕೊಟ್ಟು ತರುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ. ಗ್ರಾಮೀಣರು ನಲ್ಲಿಯ ನೀರು, ಇಲ್ಲವೇ ಕೊಳವೇ ಬಾವಿಯ ನೀರಿನ್ನೇ ಕುಡಿಯಬೇಕಿದೆ. ಇದರಿಂದ ಆರೋಗ್ಯದ ಸಮಸ್ಯಯಾಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಹೊಸ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಇಲಾಖೆಯಿಂದ ಅನುಮತಿಯೇ ನೀಡಿಲ್ಲ.

ನಿರ್ವಹಣೆ ಆಗಿಲ್ಲ:

ತಾಲ್ಲೂಕಿನಲ್ಲಿಯ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಟಾಟಾ ಪ್ರೊಜೆಕ್ಟ್‌, ಸೃಜನ್ ಪ್ಯೂವರ್ ಪ್ಲೋ, ಅಕ್ವಾ ಪ್ಲಸ್ ಸಲ್ಯೂಷನ್, ಎಚ್.ಬಿ.ಚೌವಾಣ, ಸತೀಶಕುಮಾರ ಮತ್ತು ಸಹಕಾರಿ ಸಂಸ್ಥೆಗಳು ನಿರ್ವಹಣೆ ಮಾಡಬೇಕು. ಆದರೆ, ಇಲ್ಲಿಯವರೆಗೆ ಶುದ್ಧ ನೀರಿನ ಘಟಕಗಳನ್ನು ನಿರ್ವಹಣೆ ಮಾಡಿಲ್ಲ. ಸ್ಥಗಿತಗೊಂಡಿರುವ ಘಟಕಗಳನ್ನೂ ರಿಪೇರಿ ಮಾಡಿ ಕೊಟ್ಟರೆ ಗ್ರಾ.ಪಂ. ನಿರ್ವಹಣೆ ಮಾಡುತ್ತದೆ. ಗ್ರಾ.ಪಂ ದವರು ನಮಗೆ ಶುದ್ಧ ನೀರಿನ ಘಟಕ ಪ್ರಾರಂಭಮಾಡಿಕೊಟ್ಟರೆ ನಾವು ನಿರ್ವಹಣೆ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಹೀಗಾಗಿ ಕಳೆದ ಅನೇಕ ವರ್ಷಗಳಿಂದ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕಗಳು ಅದೇ ಸ್ಥಿತಿಯಲ್ಲಿ ಇವೆ.

ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರಿಗೂ ಅಗತ್ಯ. ಇದು ಪ್ರತಿಯೊಬ್ಬರೂ ಉಚಿತವಾಗಿ ಪಡೆಯಲೇಬೇಕಾದ ಸಂಪನ್ಮೂಲ. ಕುಡಿಯುವ ನೀರಿನ ಸೌಲಭ್ಯಕ್ಕಾಗಿ ತಾಲ್ಲೂಕಿನಲ್ಲಿ ಕೊರೆಯಲಾದ ಕೊಳವೆಬಾವಿಗಳು 1419, ಕೊಳವೆ ನೀರು ಸರಬರಾಜು ಯೋಜನೆಗಳು 233, ಕಿರು ನೀರು ಸರಬರಾಜು ಯೋಜನೆಗಳು 617.

ತಾಲ್ಲೂಕಿನ ಗ್ರಾಮಗಳಾದ ಹಿರೇಬೇವನೂರ, ಮಸಳಿ, ತಾಂಬಾ, ಕೆಂಗನಾಳ, ಬೆನಕನಹಳ್ಳಿ, ರೂಗಿ, ಸೇರಿದಂತೆ ಇನ್ನು ಅನೇಕ ಗ್ರಾಮಗಳಲ್ಲಿ ಅಶುದ್ಧ ನೀರು ಇರುವುದರಿಂದ ಇಂತಹ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಬೇಕೇ ಬೇಕು. ಅದಲ್ಲದೇ, ಹೊರ್ತಿ, ಗಣವಲಗಾ, ತಡವಲಗಾ, ಬಸನಾಳ, ಲಿಂಗದಳ್ಳಿ, ಕೊಟ್ನಾಳ, ಅಗಸನಾಳ, ಹಂಜಗಿ, ಕೊಳುರಗಿ ಸೇರಿದಂತೆ ಕೆಲವು ಗ್ರಾಮಗಳಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಇಂತಹ ಗ್ರಾಮಗಳಿಗೆ ನೀರಿನ ಪೂರೈಕೆ ಜೊತೆಗೆ ಶುದ್ಧ ಕುಡಿಯುವ ನೀರು ಪೂರೈಸುವುದು ಅಗತ್ಯವಿದೆ.

ಸಾಲೋಟಗಿ ಗ್ರಾ.ಪಂ ವ್ಯಾಪ್ತಿಯಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಅವುಗಳಲ್ಲಿ ಎರಡು ಬಹು ದಿನಗಳಿಂದ ಸ್ಥಗಿತಗೊಂಡಿವೆ. ಪಟ್ಟಣದ ಬಸ್ ನಿಲ್ದಾಣ, ತಾಂಬಾ ಗ್ರಾಮದ ಡಾ. ಬಿ.ಆರ್.ಅಂಬೇಡ್ಕರ್‌ ಕಾಲೊನಿ, ಹಂಜಗಿ, ಹಂಜಗಿ ತಾಂಡಾ, ಲಚ್ಯಾಣ ಗ್ರಾ.ಪಂ ಹತ್ತಿರ, ಕೊಟ್ನಾಳ, ಇಂಗಳಗಿ ಗ್ರಾಮದಲ್ಲಿ 7 ರಲ್ಲಿ 5 ಕೆಟ್ಟಿವೆ. ಭತಗುಣಕಿ, ಬೂದಿಹಾಳ, ನಂದ್ರಾಳ, ಆಳೂರ ಗ್ರಾಮಗಳ 3ರಲ್ಲಿ ಎರಡು, ಇಂಗಳಗಿ, ಶಿರಶ್ಯಾಡ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳಿದ್ದು, ಬಹು ದಿನಗಳಿಂದ ಸ್ಥಗಿತಗೊಂಡಿವೆ.

ಇಂಡಿ ತಾಲ್ಲೂಕಿನಲ್ಲಿರುವ 190 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 50 ಘಟಕಗಳು ಗ್ರಾ. ಪಂ.ಗಳಿಗೆ ಹಸ್ತಾಂತರವಾಗಿವೆ. ಅವು ಸರಿಯಾಗಿ ಕೆಲಸ ಮಾಡುತ್ತಿವೆ. ಆದರೆ, ಇನ್ನುಳಿದ ಘಟಕಗಳ ಗುತ್ತಿಗೆದಾರರು ಗ್ರಾ. ಪಂ.ಗಳಿಗೆ ಹಸ್ತಾಂತರಿಸಿಲ್ಲ. ಒಪ್ಪಿಸಿದರೆ ಅವುಗಳನ್ನೂ ಕೂಡಾ ನಿರ್ವಹಣೆ ಮಾಡುತ್ತೇವೆ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ನಂದೀಪ ರಾಠೋಡ ಹೇಳಿದರು. 

ಇಂಡಿ ತಾಲ್ಲೂಕಿನಲ್ಲಿರುವ 190 ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 64 ಅನ್ನು ಗ್ರಾ. ಪಂ.ಗಳಿಗೆ ಒಪ್ಪಿಸಲಾಗಿದೆ. ಇನ್ನುಳಿದವುಗಳು ಸ್ಥಗಿತಗೊಂಡಿವೆ. ಅವುಗಳನ್ನು ರಿಪೇರಿ ಮಾಡುವಂತೆ ಏಜೆನ್ಸಿಯವರಿಗೆ ಒತ್ತಾಯಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಅಧಿಕಾರಿ ಆರ್.ಎಸ್.ಬಂಡಿ ತಿಳಿಸಿದರು.

ಸರ್ಕಾರ ಲಕ್ಷಾಂತರ ಹಣ ಖರ್ಚು ಮಾಡಿ ಶುದ್ಧ ಕುಡಿಯುವ ನೀರಿನ ಘಟಕಗಳು ಮಾಡಿದ್ದಾರೆ. ಆದರೆ ಅವುಗಳ ಉಪಯೋಗ ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಇದರಿಂದ ಜನಸಾಮಾನ್ಯರಲ್ಲಿ ಅನಾರೋಗ್ಯ ಹೆಚ್ಚಾಗಿದೆ. ಸರ್ಕಾರ ಈ ಬಗ್ಗೆ ಲಕ್ಷ್ಯ ವಹಿಸಬೇಕು
-ಸೋಮು ನಿಂಬರಗಿಮಠ ವಕೀಲ
ಶಿರಶ್ಯಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಈ ಕೂಡಲೇ ರಿಪೇರಿ ಮಾಡಿಸಬೇಕು
ಬಾಳು ಮುಳಜಿ  ಅಧ್ಯಕ್ಷ ಕರವೇ  ತಾಲ್ಲೂಕು ಘಟಕ ಇಂಡಿ
ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳಲ್ಲಿಯ ಜನಸಾಮಾನ್ಯರ ಆರೋಗ್ಯದ ದೃಷ್ಠಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಅಗತ್ಯವಿದೆ. ಕೆಟ್ಟು ಹೋಗಿರುವ ಘಟಕಗಳನ್ನು ಆದಷ್ಟು ಶೀಘ್ರ ದುರಸ್ತಿ ಮಾಡಿ ಜನರಿಗೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗದಂತೆ ತಾಲ್ಲೂಕು ಆಡಳಿತ ಗಮನಿಸಬೇಕು
-ರಾಮಸಿಂಗ್ ಕನ್ನೊಳ್ಳಿಅಧ್ಯಕ್ಷ ಸ್ವಾಮಿ ವಿವೇಕಾನಂದ ಯುವ ಘಟಕ ಇಂಡಿ
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿಯ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ಅಧಿಕಾರಿಗಳು ಲಕ್ಷ್ಯವಹಿಸಿ ಅವುಗಳನ್ನು ರಿಪೇರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
ಪಿ.ಜೆ.ಪ್ಯಾಟಿ ಅಧ್ಯಕ್ಷ ಹಿಂಗಣಿ ಗ್ರಾಮ ಪಂಚಾಯಿತಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.