ADVERTISEMENT

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್ ಪಾಸ್ ಸೌಲಭ್ಯ: ಸಿಎಂ ಬೊಮ್ಮಾಯಿ ಘೋಷಣೆ

ಪತ್ರಕರ್ತರ 37ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 11:01 IST
Last Updated 4 ಫೆಬ್ರುವರಿ 2023, 11:01 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಕರ್ತರ 37ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪತ್ರಕರ್ತರ 37ನೇ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿದರು.   

ವಿಜಯಪುರ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ನೀಡಲು ಬಜೆಟ್‌ನಲ್ಲಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಗರದ ಕಂದಗಲ್ ಹನುಮಂತ ರಾಯ ರಂಗಮಂದಿರದಲ್ಲಿ ಆಯೋಜಿರುವ ಎರಡು ದಿನಗಳ ಪತ್ರಕರ್ತರ 37ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ, ಪತ್ರಕರ್ತರ ಬೇಡಿಕೆಗಳ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ನಿವೃತ್ತ ಪತ್ರಕರ್ತರಿಗೆ ಮಾಸಾಶನ ಹೆಚ್ಚಳ ಮಾಡಲು ಬಜೆಟ್‌ನಲ್ಲಿ ಅನುದಾನ ಒದಗಿಸಲಾಗುವುದು ಎಂದರು.

ಪತ್ರಿಕೆಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳ ದರ ಪರಿಷ್ಕರಣೆ ಮಾಡಲಾಗುವುದು ಎಂದು ಹೇಳಿದರು. ಪತ್ರಕರ್ತರನ್ನು ಯಶಸ್ವಿನಿ ಯೋಜನೆ ಸೇರ್ಪಡೆಗೂ ಅಗತ್ಯ ಕ್ರಮಕೈಗೊಳಲಾಗುವುದು. ಜತೆಗೆ, ನಗರ, ಪಟ್ಟಣಗಳ ವಸತಿ ಯೋಜನೆಯಲ್ಲಿ ಪತ್ರಕರ್ತರಿಗೆ ನಿವೇಶನ ಮೀಸಲಿಡಲು ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ವಿಧಾನ ಪರಿಷತ್‌ಗೆ ಹಿರಿಯ ಪತ್ರಕರ್ತರ ನೇಮಕ ಮಾಡಬೇಕು ಎಂಬ ಸಂಘದ ಬೇಡಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಧಾನ ಪರಿಷತ್‌ಗೆ ನೇಮಕವಾಗಲು ನಮ್ಮಲ್ಲೇ ಪೈಪೋಟಿ ಬಹಳ ಇದೆ. ಆದರೂ, ಅವಕಾಶ ನೀಡಲು ಯೋಚಿಸಲಾಗುವುದು ಎಂದರು.

ಪತ್ರಕರ್ತರ ಸಮ್ಮೇಳನ ಎಂಬುದು ಆಧುನಿಕ ಚಿಂತಕರ ಸಮ್ಮೇಳನ ಇದ್ದಂತೆ. ಪತ್ರಕರ್ತರು, ರಾಜಕಾರಣಿಗಳ‌ ನಡುವೆ ಅವಿನಾಭಾವ ಸಂಬಂಧ ಇದೆ.‌ ಅದು ಗಂಡ, ಹೆಂಡತಿ ಸಂಬಂಧ ಇದ್ದಂತೆ ಎಂದು ವ್ಯಾಖ್ಯಾನಿಸಿದರು.

ಪತ್ರಕರ್ತರು, ರಾಜಕಾರಣಿಗಳು ತಮ್ಮ ತಮ್ಮ ಗಡಿ ದಾಟಬಾರದು. ಇಬ್ಬರ ನಡುವೆ ಆರೋಗ್ಯಕರ ಸಂಬಂಧ ಇದ್ದರೆ ರಾಜ್ಯದ ಆರೋಗ್ಯ ಚೆನ್ನಾಗಿರುತ್ತದೆ. ಪತ್ರಕರ್ತರು ಪ್ರಾದೇಶಿಕವಾಗಬಾರದು, ಅಖಂಡ ಕರ್ನಾಟಕದ ಪತ್ರಕರ್ತರಾಗಬೇಕು. ಉತ್ತರ, ದಕ್ಷಿಣ ಎಂಬ ಭೇದಭಾವ ಇರಬಾರದು. ಪತ್ರಕರ್ತ ವೃತ್ತಿ ಗಟ್ಟಿಗೊಳಿಕೊಳ್ಳಲು ವಿಶ್ವಾಸಾರ್ಹತೆ ಮುಖ್ಯ.‌ಅತ್ತ ಎಲ್ಲರೂ ಗಮನಹರಿಸಬೇಕು ಎಂದರು.

‘ನಾಡಿನ ದೊರೆ’ ಎಂದು ನನ್ನನ್ನು ಕರೆಯಬೇಡಿ, ನನಗೆ ಕಸಿವಿಸಿಯಾಗುತ್ತದೆ. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಅಸ್ವಿತ್ವದಲ್ಲಿ ಇದೆ.‌ ಇಲ್ಲಿ ಪ್ರಜೆಗಳೇ ಪ್ರಭುಗಳು.‌ ಪ್ರಜೆಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳು ನಾವು. ಜನ ಸೇವಕನ ಕಾರ್ಯ ನಮ್ಮದು. ಹೀಗಾಗಿ ನಾಡಿನ ದೊರೆ ಎಂದು ಕರೆಯಬೇಡಿ ಎ‌ಂದು ವಿನಂತಿಸಿದರು.

ವಿಜಯಪುರ ಎಂದಾಕ್ಷಣ ನೆನಪಾಗುವುದು ಬಿಳಿ ಜೋಳ. ಇದರಲ್ಲಿ ಇರುವ ಸತ್ವ ಬೇರೆ ಜೋಳದಲ್ಲಿ ಇಲ್ಲ. ವಿಜಯಪುರ ಜೋಳದ ರೀತಿ ಜನರೂ ಸತ್ವಯುತವಾಗಿದ್ದಾರೆ. ಜಿಲ್ಲೆಯ ಕೃಷ್ಣಾ ನದಿ ನೀರು ಐದು ಲಕ್ಷ ಹೆಕ್ಟೇರ್ ಭೂಮಿಗೂ ತಲುಪಬೇಕಿದೆ ಎಂದರು. ಆಣೆಕಟ್ಟೆ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಸಂತ್ರಸ್ತರ ಕನಸು ನನಸಾಗುವಂತೆ ಕೆಲಸ ಎಂದರು.

ನಾನು‌ ಜಲ ಸಂಪನ್ಮೂಲ ಸಚಿವನಾಗಿದ್ದಾಗ, ಕೃಷ್ಣಾ ಯೋಜನೆಯಲ್ಲಿ ಸ್ಕೀಮ್ ಎ, ಸ್ಕೀಮ್ ಬಿ ಎಂದು ಹೇಳಿ ಅನೇಕ ನೀರಾವರಿ ಯೋಜನೆಗಳಿಗೆ ಅಧಿಕಾರಿಗಳು ಅಡ್ಡಿಪಡಿಸಿದ್ದರು.‌ ಕೃಷ್ಣಾ ಎಂದರೆ ಒಂದೇ ಸ್ಕೀಮ್. ‌ಎ, ಬಿ ಎಂದು ಪರಿಗಣಿಸಬೇಡಿ ಎಂದು ಹೇಳಿ ‘ಸ್ಕೀಮ್ ಬಿ’ ಅಡಿ ಬರುವ ಒಂಬತ್ತು ಯೋಜನೆಗಳಲ್ಲಿ ನಾನು ಏಳು ಯೋಜನೆ ಪ್ರಾರಂಭಿಸಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು, ‘ಯೂಟ್ಯೂಬ್ ಚಾನಲ್‌ಗಳ ಹಾವಳಿಯಿಂದ ನೈಜ ಪತ್ರಕರ್ತರು ಕಳೆದುಹೋಗುವ ಸಂದರ್ಭ ಒದಗಿ ಬಂದಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಆಧುನಿಕ ಬದಲಾವಣೆಗೆ ಪತ್ರಕರ್ತರು ಹೊಂದಿಕೊಳ್ಳಬೇಕಿದೆ ಎಂದರು. ಸಂಘದ ಪದಾಧಿಕಾರಿಗಳು ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ವರ್ಷಕ್ಕೊಂದು, ತಿಂಗಳಿಗೊಂದು ಪತ್ರಿಕೆ ತರುವವರು ಪತ್ರಕರ್ತರು ಎಂದು ಬೀಗುತ್ತಿದ್ದಾರೆ. ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ನೈಜ ಪತ್ರಕರ್ತರು ಮರೆಯಾಗುವ ಸ್ಥಿತಿ ಎದುರಾಗಿದೆ ಎಂದು ವಿಷಾದಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ‘ಈ ಪ್ರಪಂಚದಲ್ಲಿ ಒಳ್ಳೆಯದು ಹೇಳಿ ಆಗಿದೆ. ಇನ್ನು ಆಚರಣೆಯಷ್ಟೇ ಬಾಕಿ ಇದೆ’ ಎಂದು ಸಿದ್ದೇಶ್ವರ ಶ್ರೀಗಳು ಹೇಳಿದ್ದಾರೆ. ಹೀಗಾಗಿ ಮಾತಿಗಿಂತ ಕೃತಿಗೆ ಎಲ್ಲರೂ ಆದ್ಯತೆ ನೀಡಬೇಕಿದೆ’ ಎಂದರು.

ಪತ್ರಕರ್ತರು, ರಾಜಕಾರಣಿಗಳು ವಿಶ್ವಾಸ ಕಳೆದುಕೊಂಡಿದ್ದೇವೆ. ಓದುಗರು, ಕೇಳುಗರು, ನೋಡುಗರ ವಿಶ್ವಾಸ ಗಳಿಸುವತ್ತ ಪತ್ರಕರ್ತರು ಗಮನ ಹರಿಸಬೇಕಿದೆ ಎಂದರು. ಸ್ಮಾರ್ಟ್ ಫೋನ್ ಇರುವವರೆಲ್ಲರೂ ಪತ್ರಕರ್ತರಾಗಿದ್ದಾರೆ. ಹೀಗಾಗಿ ನಿಜವಾದ ಪತ್ರಕರ್ತರನ್ನು ಗುರುತಿಸಿಸುವ ಕಾರ್ಯ ಆಗಬೇಕಿದೆ ಎಂದರು.

ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೂಡ ಪತ್ರಕರ್ತರು ಆಗಿದ್ದರು. ಹೀಗಾಗಿ ಪತ್ರಕರ್ತರು ಹೆಮ್ಮೆ ಪಡಬೇಕು ಎಂದರು.

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಪತ್ರಿಕೆಗಳು ಪ್ರೇರಣೆಯಾಗಿದ್ದವು.‌ ಆದರೆ, ಇಂದು ಪತ್ರಿಕಾ ಮಾಧ್ಯಮಗಳಲ್ಲಿ ಸಾಮಾಜಿಕ ಕಳಕಳಿ ಉಳಿದಿಲ್ಲ. ಲಾಭದಾಯಕ ದಂಧೆಯಾಗಿದೆ ಎಂದರು.

ಪತ್ರಿಕೋದ್ಯಮ ಲಾಭ, ನಷ್ಟದ ಲೆಕ್ಕಾಚಾರ ಮಾಡುವಂತಾಗಿದೆ. ಸಾಮಾಜಿಕ ಕಳಕಳಿ ಮರೆಯಾಗಿದೆ. ಮಾಧ್ಯಮ ಮಿತ್ರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪತ್ರಕರ್ತರು, ರಾಜಕಾರಣಿಗಳು ಸ್ವಯಂ ನೀತಿ ಸಂಹಿತೆ ರೂಪಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಪಾಸ್ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುವ ನಕಲಿ ಪತ್ರಕರ್ತರ ಗ್ಯಾಂಗ್ ಹೆಚ್ಚಿದೆ. ಈ ನಿಟ್ಟಿನಲ್ಲಿ ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಯೂಟ್ಯೂಬ್ ಪತ್ರಕರ್ತರ ಹಾವಳಿ ಹೆಚ್ಚಾಗಿದೆ. ಅವರಿಗೆ ಮಾನ, ಮರ್ಯಾದೆ ಇಲ್ಲ ಎಂದು ಆರೋಪಿಸಿದರು. ಒಬ್ಬ ಪ್ರಬುದ್ಧ ರಾಜಕಾರಣಿ ಆಗಲು 25, 30 ವರ್ಷ ಬೇಕು. ಮಾಧ್ಯಮದವರು ಏಕಾಏಕಿ ರಾಜಕಾರಣಿಗಳ ತೇಜೋವಧೆ ಮಾಡಬೇಡಿ. ವಿಶ್ವಾಸಾರ್ಹತೆ ಉಳಿಸಿಕೊಳ್ಳಿ ಎಂದರು.

ದಿನ ಪತ್ರಿಕೆಗಳು ಇಂದಿಗೂ ತಮ್ಮ ವಿಶ್ವಾಸ ಉಳಿಸಿಕೊಂಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮುರುಗೇಶ ನಿರಾಣಿ ಅವರು ವ್ಯಂಗ್ಯ ಚಿತ್ರ ಪ್ರದರ್ಶನ ಉದ್ಘಾಟಿಸಿದರು.

ಸಚಿವ ಸಿ.ಸಿ.ಪಾಟೀಲ ಅವರು ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿದರು. ವಿಜಯಪುರ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.‌ಎಸ್.ಪಾಟೀಲ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ವಿಜುಗೌಡ ಪಾಟೀಲ, ಅಪ್ಪು ಪಟ್ಟಣಶೆಟ್ಟಿ, ಎಸ್.ಕೆ.ಬೆಳ್ಳುಬ್ಬಿ, ಪತ್ರಕರ್ತರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೋಶ, ಜಿಲ್ಲಾ ಘಟಕದ ಅಧ್ಯಕ್ಷ ಸಂಗಮೇಶ ಚೂರಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ರಾಹುಲ್‌ ಶಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.