ADVERTISEMENT

ಕಾಂಗ್ರೆಸ್ ಲಿಂಗಾಯತ ನಾಯಕರಿಗೆ ನೈತಿಕತೆ ಇಲ್ಲ: ಬಸನಗೌಡ ಪಾಟೀಲ ಯತ್ನಾಳ

ಶಾಮನೂರು, ಎಂ.ಬಿ.ಪಾಟೀಲ ವಿರುದ್ಧ ಹರಿಹಾಯ್ದ ಬಿಜೆಪಿ ಶಾಸಕ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 11:15 IST
Last Updated 20 ಜುಲೈ 2021, 11:15 IST
ಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ
ಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ಯಡಿಯೂರಪ್ಪ ಪರವಾಗಿ ಮಾತನಾಡುವ ನೈತಿಕತೆ ಕಾಂಗ್ರೆಸ್ ಲಿಂಗಾಯತ ನಾಯಕರಿಗಿಲ್ಲ. ಯಡಿಯೂರಪ್ಪ ಅವರನ್ನು ತೆಗೆದರೆ ಬಿಜೆಪಿ ಹಾಳಾಗುತ್ತದೆ ಅನ್ನೋಕೆ ಶಾಮನೂರು, ಎಂ.ಬಿ.ಪಾಟೀಲ ಯಾರು? ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಮಾಡೋದು ಬಿಜೆಪಿ‌ ಹೈಕಮಾಂಡ್ ಕೈಯಲ್ಲಿದೆ. ಬಿಜೆಪಿ ನಾಯಕತ್ವ, ಆಂತರಿಕ ವಿಚಾರದ ಬಗ್ಗೆ ಮಾತನಾಡೋಕೆ‌ ಇವರ್ಯಾರು ಎಂದರು.‌

ಲಿಂಗಾಯತರ ಮೂಲಕ ಬಿಜೆಪಿಯನ್ನ ಮುಗಿಸುವುದಕ್ಕೆ ಕಾಂಗ್ರೆಸ್ ಯೋಜನೆ ಹಾಕಿದೆ. ಯಡಿಯೂರಪ್ಪ ಅವರನ್ನ ತೆಗೆದು ಬಿಟ್ಟರೆ ಲಿಂಗಾಯತರೆಲ್ಲ ಕಾಂಗ್ರೆಸ್‌ಗೆ ಹೋಗೋಕೆ ಸಾಧ್ಯವಿಲ್ಲ. ರಾಜ್ಯದ ಮತದಾರರು ಜಾಣರಿದ್ದಾರೆ. ಇನ್ನೊಬ್ಬ ವೀರಶೈವ ಲಿಂಗಾಯತ ನಾಯಕನನ್ನು ಸಿಎಂ ಮಾಡಿದ್ರೆ ಇವರಿಗೇನು ತಕರಾರು ಎಂದರು.

ADVERTISEMENT

ಕಾಂಗ್ರೆಸ್ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ, ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ. ಸಚಿವರಾಗಲು ಸೋನಿಯಾಗಾಂಧಿ, ರಾಹುಲ್ ಗಾಂಧಿ ಕಾಲು ಹಿಡಿಯುವ ಕಾಂಗ್ರೆಸ್‌ ನಾಯಕರಿಗೆ ತಾಕತ್ತಿದ್ದರೇ ಲಿಂಗಾಯತರೇ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಿ. ಬೇಕಾದರೆ ಎಂ.ಬಿ.ಪಾಟೀಲ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಸಲಿ ಎಂದು ಸವಾಲು ಹಾಕಿದರು.

ಶಾಮನೂರು ಅವರಿಗ್ಯಾಕೆ ಯಡಿಯೂರಪ್ಪ ಬಗ್ಗೆ ಇಷ್ಟೊಂದು ಕಾಳಜಿ, ಪ್ರೀತಿ ಉಕ್ಕಿ ಹರಿಯುತ್ತಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಪ್ರೈವೆಟ್ ಲಿಮಿಟೆಡ್ ಆಗಿದೆ. ಹೊಸದಾಗಿ ಯಡಿಯೂರಪ್ಪ ಮಗಳು ಈ ಕಂಪನಿಗೆ ಸೇರಿದ್ದಾರೆ. ಮಂತ್ರಿಯಾಗಲಿಕ್ಕೆ ವೀರಶೈವ ಮಹಾಸಭಾವನ್ನು ಉಪಯೋಗ ತೆಗೆದುಕೊಂಡಿದ್ದಾರೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಶಾಮನೂರು ಕಾಣಿಕೆ‌ ಏನು ಇಲ್ಲ ಎಂದರು.

ನಿರಾಣಿ ಲಾಬಿ:ಮುಖ್ಯಮಂತ್ರಿ ಖುರ್ಚಿಗಾಗಿ ಸಚಿವ ಮುರುಗೇಶ ನಿರಾಣಿ ದೊಡ್ಡ ಲಾಬಿ ನಡೆಸಿದ್ದಾರೆ. ನಿರಾಣಿ ಬಳಿ ಸಿಕ್ಕಾಪಟ್ಟೆ ಹಣವಿದೆ ಎಂದು ಯತ್ನಾಳ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.