ADVERTISEMENT

‘ನರೇಗಾ’ ಮಾರ್ಪಾಡಿಗೆ ಆಕ್ಷೇಪ: ತಲೆ ಮೇಲೆ ಬುಟ್ಟಿ ಹೊತ್ತು ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:43 IST
Last Updated 26 ಫೆಬ್ರುವರಿ 2026, 5:43 IST
ವಿಜಯಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರ ಬಳಸುವ ಪರಿಕರಗಳೊಂದಿಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ವಿಜಯಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರ ಬಳಸುವ ಪರಿಕರಗಳೊಂದಿಗೆ ವಿನೂತನವಾಗಿ ಪ್ರತಿಭಟನೆ ನಡೆಸಿದರು.   

ವಿಜಯಪುರ: ನರೇಗಾ ಯೋಜನೆಯನ್ನು ಮಾರ್ಪಾಡುಗೊಳಿಸಿ ಕಾರ್ಮಿಕರ ಹಾಗೂ ಗ್ರಾಮೀಣ ಬಡಜನತೆಯ ಹಕ್ಕುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ದಮನ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಿಕರು ಕರ್ತವ್ಯಕ್ಕೆ ಬಳಸುವ ಪರಿಕರಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕರಂತೆ ಹೆಗಲಿಗೆ ಟವೆಲ್ ಹಾಕಿ, ಬುಟ್ಟಿಯನ್ನು ತಲೆಯ ಮೇಲೆ ಹೊತ್ತುಕೊಂಡು ಗಾಂಧೀ ವೃತ್ತದಲ್ಲಿ ಧರಣಿ ನಡೆಸಿದರು. ನಂತರ ಕಾಲ್ನಡಿಗೆಯ ಮೂಲಕ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತಕ್ಕೆ ತಲುಪಿದರು. ಅಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ ಮುಶ್ರೀಫ್ ಮಾತನಾಡಿ, ‘ಬಿಜೆಪಿ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತ ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದ್ದ ಜನಪರ, ಬಡವರಪರ, ಶೋಷಿತರಪರ, ರೈತಪರ ಯೋಜನೆಗಳನ್ನು ಕ್ರಮಬದ್ಧವಾಗಿ ಸ್ಥಗಿತಗೊಳಿಸುವಲ್ಲಿ ತಲ್ಲೀನವಾಗಿದೆ. ಇದು ಜನವಿರೋಧಿ ಸರ್ಕಾರವಾಗಿದೆ’ ಎಂದು ದೂರಿದರು.

ADVERTISEMENT

‘ಈ ಸರ್ಕಾರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾಪುರುಷರ ಹೆಸರುಗಳನ್ನು ಶಾಶ್ವತವಾಗಿ ತೆಗೆಯುವ ಹುನ್ನಾರ ನಡೆಸಿದೆ. ಮಹಾತ್ಮಾಗಾಂಧಿಯವರ ಹೆಸರು ತೆಗೆದು ವಿಬಿ ಜಿ ರಾಮ್‌ ಜಿ ಎಂದು ಹೆಸರಿಟ್ಟಿರುವುದು ಮಹಾತ್ಮಾಗಾಂಧಿಯವರಿಗೆ ಮಾಡಿದ ಅಪಮಾನ. ಕೇಂದ್ರ ಸರ್ಕಾರದ ಈ ಕೃತ್ಯ ಜನ ಎಂದಿಗೂ ಮರೆಯಲಾರರು’ ಎಂದರು.

‘ಕೇಂದ್ರ ಸರ್ಕಾರ ಯೋಜನೆಯ ನಿಯಂತ್ರಣವನ್ನು ತನ್ನ ಕೈಯ್ಯಲ್ಲಿಟ್ಟುಕೊಂಡು ತಮಗೆ ಬೇಕಾದ ಬಂಡವಾಳಶಾಹಿಗಳ ಪಾಲು ಮಾಡಲು ಹೊರಟಿದ್ದು, ಬಡವರ ಉದ್ಯೋಗ ಕಸಿದುಕೊಳ್ಳುತ್ತಿದೆ. ರಾಷ್ಟ್ರಪತಿಯವರು ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಕೇಂದ್ರ ಬಿಜೆಪಿ ಸರ್ಕಾರ ತಂದಂತಹ ಕಾನೂನಿಗೆ ಮಾನ್ಯತೆ ನೀಡದೇ ತಕ್ಷಣ ಅದನ್ನು ರದ್ದುಪಡಿಸಿ ಈ ಮೊದಲಿದ್ದ ಮನರೇಗಾವನ್ನು ಪುನರ್ ಸ್ಥಾಪಿಸಿ ರೈತರಿಗೆ, ಕೂಲಿಕಾರ್ಮಿಕರಿಗೆ, ಶೋಷಿತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೊಹ್ಮದರಫೀಕ ಟಪಾಲ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಮೀರಹ್ಮದ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪುರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಮಿಜಾ ನದಾಫ್, ಮಹಾನಗರಪಾಲಿಕೆ ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಶಬ್ಬೀರ ಜಾಗೀರದಾರ, ಚಾಂದಸಾಬ ಗಡಗಲಾವ, ಆಜಾದ ಪಟೇಲ, ಕನ್ನಾನ ಮುಶ್ರೀಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.