ADVERTISEMENT

ಲೋಕಾಯುಕ್ತ ಕತ್ತು ಹಿಸುಕಿದ್ದು ಕಾಂಗ್ರೆಸ್‌: ಪ್ರತಾಪ ಸಿಂಹ

ತಳವಾರ ಸಮಾಜಕ್ಕೆ ಬಿಜೆಪಿ ಸರ್ಕಾರದಿಂದ ನ್ಯಾಯ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 14:04 IST
Last Updated 4 ಮಾರ್ಚ್ 2023, 14:04 IST
ಪ್ರತಾಪ ಸಿಂಹ
ಪ್ರತಾಪ ಸಿಂಹ   

ವಿಜಯಪುರ: ಲೋಕಾಯುಕ್ತ ಕಿತ್ತು ಹಿಸುಕಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಲೋಕಾಯುಕ್ತಕ್ಕೆ ಮರುಜೀವ ನೀಡಿರುವುದು ಬಿಜೆಪಿ ಸರ್ಕಾರ ಎಂದು ಮೈಸೂರು ಸಂಸದ ಪ್ರತಾಪ ಸಿಂಹ ಹೇಳಿದರು.

‌ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ಬಲಹೀನ ಮಾಡಿ, ಎಸಿಬಿ ಆರಂಭಿಸಿದರು. ಎಸಿಬಿ ಒಬ್ಬೇ ಒಬ್ಬ ರಾಜಕಾರಣಿ, ಅಧಿಕಾರಿ ವಿರುದ್ಧ ಕ್ರಮಕೈಗೊಂಡಿದೆಯಾ ಎಂದು ಅವರು ಪ್ರಶ್ನಿಸಿದರು.

ಲೋಕಾಯುಕ್ತವನ್ನು ಬಲಪಡಿಸಿದ ಪರಿಣಾಮ ಇಂದು ಆಡಳಿತ ರೂಢ ಬಿಜೆಪಿ ಶಾಸಕರೊಬ್ಬರ ಪುತ್ರನನ್ನು ಯಾವುದೇ ಮುಲಾಜಿಲ್ಲದೇ ಬಂಧಿಸುವ ಮೂಲಕ ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಇದು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಬದ್ಧತೆ ಸಾಬೀತು ಪಡಿಸುತ್ತದೆ ಎಂದರು.

ADVERTISEMENT

ಕಾಂಗ್ರೆಸ್‌ ನಾಯಕರು ದಿನ ಬೆಳಗಾದರೆ ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಸುಳ್ಳು ಆರೋಪ ಮಾಡುತ್ತಾರೆ. ಸಾಕ್ಷಾಧಾರಗಳಿದ್ದರೆ ಲೋಕಾಯುಕ್ತ ಅಥವಾ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು ಎಂದು ಸವಾಲು ಹಾಕಿದರು.

ಬಿಜೆಪಿ ಆಡಳಿತವಾಧಿಯಲ್ಲಿ ಆಗುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಂದ ಇರುಸು, ಮುರುಸುಗೊಂಡ ಸಂಸದ ಪ್ರತಾಪ ಸಿಂಹ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.

ತಳವಾರ ಸಮಾಜಕ್ಕೆ ನ್ಯಾಯ:

ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಳವಾರ, ಪರಿವಾರ ಸಮಾಜದವರು ಇದ್ದಾರೆ. ಈ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಸಂಬಂಧ 2010ರಲ್ಲೇ ರಾಜ್ಯ ಬಿಜೆಪಿ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಕ್ರಮಕೈಗೊಂಡಿತ್ತು. ಇದಾದ ಬಳಿಕ 2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾಗ ತಳವಾರ ಪರಿವಾರ ಎಸ್‌ಟಿ ಗೆ ಸೇರ್ಪಡೆ ಭರವಸೆ ನೀಡಿದ್ದರು. ಎಲ್ಲರ ಪ್ರಯತ್ನದ ಫಲವಾಗಿ ಇಂದು ತಳವಾರ, ಪರಿವಾರ ಸಮಾಜ ಎಸ್‌ಟಿಗೆ ಸೇರ್ಪಡೆ ಮಾಡುವ ಮೂಲಕ ಸಮಾಜಕ್ಕೆ ಆಗಿದ್ದ ಅನ್ಯಾಯ ಸರಿಪಡಿಸಲಾಗಿದೆ. ಕಾಂಗ್ರೆಸ್ ರೀತಿ ಕೇವಲ ಮತಕ್ಕಾಗಿ ಅಲ್ಲ ಎಂದರು.

₹ 3 ಸಾವಿರ ಕೋಟಿ ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಮಾರ್ಚ್ 9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಯೋಜನೆ ಅನುಷ್ಠಾನದಿಂದ ಇಂಡಿ, ಚಡಚಣ ಭಾಗದ ಕೆರೆಗಳಿಗೆ ನೀರು ತುಂಬಲಿದೆ. ಬರ ಪೀಡಿತ ಪ್ರದೇಶ ನೀರಾವರಿಗೆ ಒಳಪಡಲಿದೆ. ರೈತರಿಗೆ ಅನುಕೂಲವಾಗಲಿದೆ. ಇದು ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಯಾಗಿದೆ ಎಂದರು.

ವಿಜಯಪುರದ ಸ್ಟೇಷನ್‌ ರಸ್ತೆಯಲ್ಲಿರುವ ಅಂಚೆ ಕಚೇರಿಯಲ್ಲಿ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ ಆರಂಭವಾಗಿದೆ. ಇದರಿಂದ ಜಿಲ್ಲೆಯ ಜನರು ಪಾಸ್‌ ಪೋರ್ಟ್‌ ಮಾಡಿಸಲು ದೂರದ ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿಗೆ ಹೋಗುವುದು ತಪ್ಪಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಎಸ್‌.ಪಾಟೀಲ ಕೂಚಬಾಳ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಮುಖಂಡ ದಯಾಸಾಗರ ಪಾಟೀಲ, ಸುರೇಶ ಬಿರಾದಾರ, ಶಿವರುದ್ರ ಬಾಗಲಕೋಟಿ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

***

ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಎಲ್ಲ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಲಿದೆ

–ಪ್ರತಾಪ ಸಿಂಹ, ಸಂಸದ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.