ADVERTISEMENT

ಸಚಿವ ಈಶ್ವರಪ್ಪ ವಿರುದ್ಧ ಷಡ್ಯಂತ್ರ: ಬಿಜೆಪಿ ಮುಖಂಡ ರಾಜು ಬಿರಾದಾರ ಅನುಮಾನ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 13:26 IST
Last Updated 13 ಏಪ್ರಿಲ್ 2022, 13:26 IST
ರಾಜು ಬಿರಾದಾರ
ರಾಜು ಬಿರಾದಾರ   

ವಿಜಯಪುರ: ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೂ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ. ಈಶ್ವರಪ್ಪ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಮುಖಂಡ ರಾಜು ಬಿರಾದಾರ ಅನುಮಾನ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು ಎಂದಾದರೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

40 ವರ್ಷಗಳ ರಾಜಕಾರಣದಲ್ಲಿ ಈಶ್ವರಪ್ಪ ಅವರು ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಸೌಹಾರ್ದದಿಂದ ನಡೆದುಕೊಂಡಿದ್ದಾರೆ. ಎಂದಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ. ಅನೇಕ ನಾಯಕರನ್ನು ಪಕ್ಷದೊಳಗೆ ಬೆಳೆಸಿದ್ದಾರೆ. ಹೀಗಿರುವಾಗ ಅವರು ನಮ್ಮದೇ ಪಕ್ಷದ ಮುಖಂಡರೊಬ್ಬರಿಂದ ಪರ್ಷಂಟೇಜ್‌ ಪ‍ಡೆಯುವ ವ್ಯಕ್ತಿಯಲ್ಲ. ಇಂತಹ ಕೀಳುಮಟ್ಟದ ರಾಜಕಾರಣ ಮಾಡುವವರಲ್ಲ ಎಂದು ಹೇಳಿದರು.

ADVERTISEMENT

ಆತ್ಮಹತ್ಯೆ ಹಿಂದೆ ಅನೇಕ ಅನುಮಾನಗಳು ಹಿಟ್ಟಿಕೊಂಡಿವೆ. ಅಲ್ಲದೇ,ಈ ಪ್ರಕರಣದ ಹಿಂದೆ ಕಾಂಗ್ರೆಸ್‌ ನಾಯಕರ ಕೈವಾಡ ಇರುವ ಸಂಶಯವಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಈಶ್ವರಪ್ಪ ಅವರು ಪ್ರಾಮಾಣಿಕವಾಗಿರುವುದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.

ಮಕಣಾಪೂರದ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಈ ರೀತಿ ದುರಂತ ಆಗಬಾರದಿತ್ತು. ಸಂತೋಷ್‌ ಪಾಟೀಲ ಜೀವ ಕಳೆದುಕೊಳ್ಳುವ ಹಂತಕ್ಕೆ ಹೋಗದೇ ಇದ್ದು ಹೋರಾಟ ಮಾಡಬೇಕಿತ್ತು. ಇಡೀ ಪ್ರಕರಣಕ್ಕೆ ಅವರೇ ನೇರವಾದ ಹೊಣೆಗಾರರಾಗಿದ್ದಾರೆ ಎಂದರು.

ಆತ್ಮಹತ್ಯೆ ಹಿಂದೆ ಹತ್ತು ಹಲವು ಸಂಶಯಗಳಿದ್ದು, ಅವುಗಳು ಸತ್ಯವೋ, ಅಸತ್ಯವೋ ತಿಳಿಯದಾಗಿವೆ. ಈ ಪ್ರಕರಣವನ್ನು ಮುಂದಿಟ್ಟುಕೊಂಡು ಸಚಿವ ಈಶ್ವರಪ್ಪ ಅವರನ್ನು ಹಣಿಯಲು ರಾಜಕೀಯ ವಿರೋಧಿಗಳು ಷಡ್ಯಂತ್ರ ನಡೆಸಿದ್ದಾರೆ ಎಂದು ಬೇಷರ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡರಾದ ಸಾಬು ಮಾಶ್ಯಾಳ, ಶಿಲ್ಪ ಕುದಗೊಂಡ, ಚಿದಾನಂದ ಚಲುವಾದಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.