ಬಸವನಬಾಗೇವಾಡಿ: ನಿಡಗುಂದಿ ತಾಲ್ಲೂಕಿನ ಇಟಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಲಿಹಾಳ ಗ್ರಾಮದಲ್ಲಿ ಮನೆ ನಳದಲ್ಲಿ ಬಂದ ಕಲುಷಿತ ನೀರು ಸೇವಿಸಿ ಕಳೆದ ಮೂರು ದಿನಗಳಲ್ಲಿ ಗ್ರಾಮದ 50 ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು 30ಕ್ಕು ಅಧಿಕ ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈಚೆಗೆ ಮಳೆಯಿಂದ ಬ್ಯಾಲಿಹಾಳ ಗ್ರಾಮದ ಹಳ್ಳದಲ್ಲಿ ಸಂಗ್ರಹವಾದ ಕೊಳಚೆ ನೀರು ಸಮೀಪದ ಕೊಳೆವೆಬಾವಿಗೆ ಸೇರಿಕೊಂಡಿದ್ದು ಅದೇ ಕಲುಷಿತ ನೀರನ್ನು ಪಂಚಾಯಿತಿ ಅಧಿಕಾರಿಗಳು ಗ್ರಾಮದ ಮನೆಗಳಿಗೆ ಸರಬರಾಜು ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಮನೆಯ ನಳಗಳಲ್ಲಿ ಸರಬರಾಜಾದ ಕಲುಷಿತ ನೀರು ಸೇವಿಸಿದ ಪರಿಣಾಮ ಗ್ರಾಮದ 50ಕ್ಕು ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ಈ ಪೈಕಿ ಗಂಭೀರ ಸ್ಥಿತಿಯಲ್ಲಿರುವ 10 ಜನರನ್ನು ಬಾಗಲಕೋಟೆ ಹಾಗೂ ವಿಜಯಪುರದ ಖಾಸಗಿ, ಜಿಲ್ಲಾಸ್ಪತ್ರೆಗಳಿಗೆ ರವಾನಿಸಲಾಗಿದೆ. ಇನ್ನೂ 20 ಕ್ಕು ಅಧಿಕ ಜನರಿಗೆ ಬಸವನಬಾಗೇವಾಡಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕಳೆದ ಶನಿವಾರ ರಾತ್ರಿ ಗ್ರಾಮದ ಕೆಲವರಲ್ಲಿ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ. ಆದರ ಬಳಿಕ ಭಾನುವಾರ, ಸೋಮವಾರ 25ಕ್ಕು ಅಧಿಕ ಜನರಲ್ಲಿ ವಾಂತಿಬೇಧಿ ಅತಿಯಾಗಿದೆ. ಹೀಗಾಗಿ ಪರಿಸ್ಥಿತಿ ಗಂಭಿರವಾಗಿರುವ ಕಾರಣ ಬ್ಯಾಲಿಹಾಳ ಗ್ರಾಮದಲ್ಲಿ ಸದ್ಯ ತಾತ್ಕಾಲಿಕವಾಗಿ ವೈದ್ಯಕೀಯ ತಂಡ ಬೀಡು ಬಿಟ್ಟಿದ್ದು 2 ಅಂಬುಲೆನ್ಸ್ ವಾಹನಗಳನ್ನು ಇರಿಸಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಗ್ರಾಮದಲ್ಲಿ ಕಲುಷಿತ ನೀರು ಸೇವನೆ ಬಗ್ಗೆ ಮನೆಮನೆ ತಪಾಸಣೆ ನಡೆಸುತ್ತಾ ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
‘ಗ್ರಾಮದ ಮುಖಂಡ ಅವಣ್ಣ ಗ್ವಾತಗಿ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ಬ್ಯಾಲಿಹಾಳ ಗ್ರಾಮದ ಹಳ್ಳದಲ್ಲಿರುವ ಬೋರ್‌ವೆಲ್ ನಿಂದ ನಳಗಳ ಮೂಲಕ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಒಂದು ವಾರದಿಂದ ಅತಿ ಹೆಚ್ಚು ಮಳೆಯಾದ ಪರಿಣಾಮ ಹಳ್ಳ ಉಕ್ಕಿ ಹರಿದಿದೆ. ಹಳ್ಳದ ನೀರಿನಲ್ಲಿ ಗ್ರಾಮದ ಚರಂಡಿ ನೀರು ಸೇರ್ಪಡೆಯಾಗಿದೆ. ಕೊಳಚೆ ನೀರು ಅಂತರ್ಜಲ ತಲುಪಿದ್ದು, ಇದೆ ನೀರನ್ನು ಗ್ರಾಮದ ಮನೆ ಮನೆಗೂ ಅಧಿಕಾರಿಗಳು ಕುಡಿಯುವ ನೀರಿಗಾಗಿ ಸರಬರಾಜು ಮಾಡಿದ್ದಾರೆ. ಪಂಚಾಯಿತಿ ಹಾಗೂ ನೀರು ಸರಬರಾಜು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಈ ಅನಾಹುತಕ್ಕೆ ಕಾರಣ‘ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ಎರಡ್ಮೂರು ವರ್ಷಗಳಾಗುತ್ತಿದ್ದರೂ ಅದನ್ನು ದುರಸ್ತಿಪಡಿಸಿಲ್ಲ. ಈ ಮೊದಲೇ ಗ್ರಾಮಸ್ಥರು ಹಳ್ಳದ ಬೋರ್ ವೆಲ್ ನೀರಿನ ಬದಲು ಬೇರೆ ಬೋರ್‌ವೆಲ್ ನೀರು ಸರಬರಾಜು ಮಾಡುವಂತೆ ಗ್ರಾಮಸ್ಥರು ಮನವಿ ಮಾಡಿದರೂ, ಅಧಿಕಾರಿಗಳ ಶುದ್ದ ಕುಡಿಯುವ ನೀರಿನ ಘಟಕ ದುರಸ್ತಿಪಡಿಸದೇ, ಬೇರೆ ಬೋರ್ ವೆಲ್ ನೀರಿನ ವ್ಯವಸ್ಥೆಯೂ ಮಾಡದೇ ಹಳ್ಳದಿಂದ ಬಂದ ಕಲುಷಿತ ನೀರು ಹರಿಸಿದ್ದಾರೆ. ಈ ಅನಾಹುತಕ್ಕೆ ಕಾರಣವಾದ ಅಧಿಕಾರಿಗಳು, ಸಿಬ್ಬಂದಿ ಮೇಲೆ ಜಿಲ್ಲಾಡಳಿತ ಕ್ರಮ ಜರುಗಿಸಿ ಕೂಡಲೇ ಗ್ರಾಮದಲ್ಲಿ ಶುದ್ದ ಕುಡಿಯುವ ನೀರು ಪೂರೈಸುವಂತೆ ಕ್ರಮವಹಿಸಿಬೇಕೆಂದು ಅವಣ್ಣ ಗ್ವಾತಗಿ ಮತ್ತು ಮಲ್ಲು ಕೋಳೂರು ಒತ್ತಾಯಿಸಿದ್ದಾರೆ.ಕವಿತಾ ದೊಡ್ಡಮನಿ ತಾಲ್ಲೂಕು ವೈದ್ಯಾಧಿಕಾರಿ ಬಸವನಬಾಗೇವಾಡಿ
ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ನಾನು ಬ್ಯಾಲಿಹಾಳ ಗ್ರಾಮಕ್ಕೆ ಭೇಟಿ ನೀಡಿದ್ದೇವೆ. ಬ್ಯಾಲಿಹಾಳದಲ್ಲಿ ತಾತ್ಕಾಲಿಕ ಒಪಿಡಿ ಘಟಕ ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ 49 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. ಅದರಲ್ಲಿ 30 ಜನರು ಹೆಚ್ಚಿನ ಚಿಕಿತ್ಸೆಗಾಗಿ ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು ಸದ್ಯ 9 ಜನ ಬಸವನಬಾಗೇವಾಡಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದವರು ಡಿಶ್ಚಾರ್ಜ್ ಆಗಿದ್ದಾರೆ.ಕವಿತಾ ದೊಡ್ಡಮನಿ ತಾಲ್ಲೂಕು ವೈದ್ಯಾಧಿಕಾರಿ ಬಸವನಬಾಗೇವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.