ADVERTISEMENT

ಪರಿವಾರವನ್ನು ಪಣಕ್ಕಿಟ್ಟ ಪೊಲೀಸರು: ಅಗರವಾಲ್‌

ಪೊಲೀಸ್‌ ಹುತಾತ್ಮ ದಿನಾಚರಣೆ; ಮಡಿದವರಿಗೆ ನಮನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:10 IST
Last Updated 21 ಅಕ್ಟೋಬರ್ 2020, 16:10 IST
ವಿಜಯಪುರ ಜಿಲ್ಲಾ ಪೊಲೀಸ್‌ ಕವಾಯತ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಮಾತನಾಡಿದರು
ವಿಜಯಪುರ ಜಿಲ್ಲಾ ಪೊಲೀಸ್‌ ಕವಾಯತ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಮಾತನಾಡಿದರು   

ವಿಜಯಪುರ:ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪೊಲೀಸರು ಈ ಬಾರಿ ತಮ್ಮ ಪರಿವಾರವನ್ನು ಪಣಕ್ಕಿಟ್ಟಿ, ಕೊರೊನಾ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್‌ ಹೇಳಿದರು.

ನಗರದ ಜಿಲ್ಲಾ ಪೊಲೀಸ್‌ ಕವಾಯತ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಪೊಲೀಸ್‌ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ದೇಶದ ಬಾಹ್ಯ ಹಾಗೂ ಆಂತರಿಕ ರಕ್ಷಣೆ ಸಂದರ್ಭದಲ್ಲಿ ಉಗ್ರರು, ನಕ್ಸಲರ ವಿರುದ್ಧ ಹೋರಾಡುವಾಗ ಮತ್ತು ಗಲಭೆಗಳನ್ನು ನಿಯಂತ್ರಿಸುವಾಗ ಪೊಲೀಸರು ಹುತಾತ್ಮರಾಗುತ್ತಿದ್ದಾರೆ. ಆದರೆ, ಈ ವರ್ಷ ಪ್ರಪಂಚಕ್ಕೆ ಎದುರಾಗಿರುವ ಕೋವಿಡ್‌ ನಿಯಂತ್ರಣದಲ್ಲೂ ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆ ಸಾವನಪ್ಪಿದ್ದಾರೆ ಎಂದರು.

ADVERTISEMENT

ದೇಶದಲ್ಲಿ ಪ್ರತಿ ವರ್ಷವು ಸಾಕಷ್ಟು ಪೊಲೀಸರು ತಮ್ಮ ಕರ್ತವ್ಯ ನಿರ್ವಹವಣೆಯಲ್ಲಿ ಶೂರತನದಿಂದ ಹೋರಾಡಿ ವೀರಶ್ವರ್ಗ ಹೊಂದುತ್ತಿರುವರು. ಅವರ ಕಾರ್ಯದ ನೆನಪಿಗಾಗಿ ಪೊಲೀಸ್‌ ಹುತಾತ್ಮರ ದಿನಾಚರಣೆಯನ್ನು ಪ್ರತಿ ವರ್ಷ ಅಕ್ಟೋಬರ್‌ 21ರಂದು ಆಚರಿಸಲಾಗುತ್ತಿದೆ ಎಂದರು.

ಈ ವರ್ಷ ದೇಶದಲ್ಲಿ 264 ಜನ ಪೊಲೀಸರು ತಮ್ಮ ಕರ್ತವ್ಯದ ವೇಳೆಹುತಾತ್ಮರಾಗಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಮಾತನಾಡಿ, ದೇಶದ ಆಂತರಿಕ ರಕ್ಷಣೆ ಸಂದರ್ಭದಲ್ಲಿ ಮಡಿದ ಪೊಲೀಸರಿಗೆ ಮತ್ತು ಅವರ ಕುಟುಂಬಕ್ಕೆ ಗೌರವ ಸಲ್ಲಿಸಬೇಕಾಗಿರುವುದು ಪ್ರತಿಯೊಬ್ಬರ ನಾಗರಿಕನ ಕರ್ತವ್ಯ ಎಂದರು ಹೇಳಿದರು.

ಪೊಲೀಸ್‌ ಕಾರ್ಯವೈಖರಿ ಬಗ್ಗೆ ಸಾಕಷ್ಟು ಟೀಕೆ, ಟಿಪ್ಪಣಿಗಳು ಕೇಳಿಬರುತ್ತವೆ. ಯಾರೋ ಒಬ್ಬರ ತಪ್ಪಿನಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಇಲಾಖೆ ಮೇಲೆ ಜನರಿಗೆ ವಿಶ್ವಾಸ ಬರುವಂತೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ಧಿ ಇದ್ದರು.

ಪೊಲೀಸ್‌ ಹುತಾತ್ಮಕರ ಸ್ಮಾರಕಕ್ಕೆ ಗಣ್ಯರು ಮಾಲಾರ್ಪಣೆ ಮಾಡಿದರು. ಕವಾಯತ್‌ ತಂಡದಿಂದ ಮೂರು ಸುತ್ತು ಕುಶಾಲ ತೋಪು ಸಿಡಿಸಿ,ಪೊಲೀಸ್‌ ಬ್ಯಾಂಡ್‌ ನುಡಿಸಿ ಹಾಗೂ ಎರಡು ನಿಮಿಷ ಮೌನಾಚರಣೆ ಮೂಲಕ ಮಡಿದ ಪೊಲೀಸರಿಗೆ ಗೌರವ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.