ADVERTISEMENT

ಸರ್ಕಾರಗಳಿಂದ ಕೊರೊನಾ ಸಮರ್ಥ ನಿರ್ವಹಣೆ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 10:35 IST
Last Updated 19 ಮೇ 2021, 10:35 IST
ಆರ್.ಎಸ್.ಪಾಟೀಲ ಕುಚಬಾಳ
ಆರ್.ಎಸ್.ಪಾಟೀಲ ಕುಚಬಾಳ   

ವಿಜಯಪುರ: ಕೊರೊನಾ ಎರಡನೇ ಅಲೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಥವಾಗಿ ಎದುರಿಸುತ್ತಿವೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯನ್ನು ಸಮರ್ಪಕವಾಗಿ ನಿಭಾಯಿಸಲು ದೇಶದಲ್ಲಿ 26 ಸಾವಿರ ವೆಂಟಿಲೇಟರ್ ಬೆಡ್‌ಗಳನ್ನು 80 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.

ADVERTISEMENT

ಆಕ್ಸಿಜನ್ ಕೊರತೆಯಾಗದಂತೆ ತುರ್ತು ಲಭ್ಯವಾಗುವಂತೆ ಏರ್ ಕ್ರಾಫ್ಟ್, ರೈಲ್ವೆ ಹಾಗೂ ಹಡಗುಗಳನ್ನು ಬಳಸಲಾಗುತ್ತಿದೆ ಎಂದರು.

ಇನ್ನೂ ಕೊವಿಡ್ ನಿಯಂತ್ರಣ ಸಲುವಾಗಿ ಅಲ್ಪ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿ 18.5 ಕೊಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ವಿಜಯಪುರ ನಗರದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಕಳೆದ 22 ದಿನಗಳಿಂದ ಕೊರೊನಾ ಸೋಂಕಿತರಿಗೆ, ಸಂಬಂಧಿಕರಿಗೆ ಹಾಗೂ ಬಡವರಿಗೆ ಅನ್ನದಾಸೋಹವನ್ನು ಗಜಾನನ ಮಹಾಮಂಡಳದ ವತಿಯಿಂದ ವಿತರಿಸುತ್ತಿದ್ದಾರೆ. ಇನ್ನೂ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾರ್ಡ್‌ವಾರು ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇನ್ನೂ ಯುವ ಮೊರ್ಚಾ ಕಾರ್ಯಕರ್ತರು ಶವ ಸಂಸ್ಕಾರದಂತಹ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಹೇಳಿದರು.

ಇನ್ನೂ ಲಾಕ್ ಡೌನ್ ಮುಂದುವರಿಸುವ ಕುರಿತು ಹಾಗೂ ಬಡವರಿಗೆ ಪ್ಯಾಕೇಜ್ ನೀಡುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದವರು ₹ 100 ಕೋಟಿ ಸರ್ಕಾರಕ್ಕೆ ನೀಡುತ್ತಿರುವುದು ಸರ್ಕಾರದ ಹಣವೇ ಆಗಿದ್ದು, ಇಂತಹ ಸಂದಿಗ್ಧ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಎನು? ಎಂದು ಪ್ರಶ್ನಿಸಿದರು.

ಇನ್ನೂ ಲಸಿಕೆ ಕುರಿತು ಕಾಂಗ್ರೆಸ್‌ ಮುಖಂಡರು ಅಪ್ರಪಚಾರ ಮಾಡುವ ಮೂಲಕ ದೇಶದ ಜನತೆಗೆ ತಪ್ಪು ಸಂದೇಶ ಕೊಟ್ಟರು ಎಂದು ಆರೋಪಿಸಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಕರ್ನಾಟಕ ರಾಜ್ಯ ಸಾವಯವ ಹಾಗೂ ಬೀಜ ಪ್ರಮಾಣದ ಮಂಡಳಿ ಅಧ್ಯಕ್ಷ ವಿಜುಗೌಡಾ ಪಾಟೀಲ, ಬೆಳಗಾವಿ ವಿಭಾಗೀಯ ಸಂಘಟಕ ಚಂದ್ರಶೇಖರ ಕವಟಗಿ, ಬಿಜೆಪಿ ಜಿಲ್ಲಾ ವಕ್ತಾರ ರವೀಂದ್ರ ಲೋಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಹಾಗೂ ಮಾಧ್ಯಮ ಪ್ರಮುಖ ವಿಜಯ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.