ADVERTISEMENT

ವಿಜಯಪುರ | ಪ್ರತಿದಿನ 1500 ಕೊರೊನಾ ಸೋಂಕು ಪರೀಕ್ಷೆ: ಡಿಸಿ

ಮತ್ತೊಬ್ಬರಿಗೆ ಕೋವಿಡ್‌; ನಾಲ್ವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 21 ಮೇ 2020, 13:38 IST
Last Updated 21 ಮೇ 2020, 13:38 IST
ವಿಜಯಪುರದ ಬಸ್‌ ನಿಲ್ದಾಣದಿಂದ ಪ್ರಯಾಣಿಕರೊಬ್ಬರು ಟಾಂಗಾದಲ್ಲಿ ಹೋಗುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ
ವಿಜಯಪುರದ ಬಸ್‌ ನಿಲ್ದಾಣದಿಂದ ಪ್ರಯಾಣಿಕರೊಬ್ಬರು ಟಾಂಗಾದಲ್ಲಿ ಹೋಗುತ್ತಿದ್ದ ದೃಶ್ಯ ಗುರುವಾರ ಕಂಡುಬಂದಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವ ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಬಂದಿರುವವರ ಪೈಕಿ ಪ್ರತಿದಿನ 1500 ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಸರ್ಕಾರದ ನಿರ್ದೇಶನದಂತೆ ಗಂಟಲು ದ್ರವ ಮಾದರಿಯನ್ನು ಜಿಲ್ಲೆಯಿಂದ ಬೆಂಗಳೂರಿಗೆ ಕಳುಹಿಸಲಾಗುತ್ತಿದ್ದು, ತೀರಾ ತುರ್ತು ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಿದ ಟ್ರ್ಯೂನ್ಯಾಟ್ ಹಾಗೂ ಸಿಬಿನ್ಯಾಟ್ ಯಂತ್ರಗಳ ಮೂಲಕವೂ ಹೆಚ್ಚಿನ ಪ್ರಮಾಣದಲ್ಲಿ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

ಮಹಾರಾಷ್ಟ್ರದಿಂದ ಸುಮಾರು 15 ಸಾವಿರ ವಲಸೆ ಕಾರ್ಮಿಕರು ಜಿಲ್ಲೆಗೆ ವಾಪಸಾಗಿದ್ದು, ಸಾಂಸ್ಥಿಕ ಕ್ವಾರಂಟೈನ್‍ಗೆ ಕ್ರಮ ಕೈಗೊಳ್ಳಲಾಗಿದೆ. 14 ದಿನಗಳ ಕ್ವಾರಂಟೈನ್ ಅವಧಿ ಪೂರೈಸಿದವರಿಗೆ ತಕ್ಷಣ ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ADVERTISEMENT

ಮತ್ತೊಬ್ಬರಿಗೆ ಕೋವಿಡ್‌:ಮಹಾರಾಷ್ಟ್ರದ ಮುಂಬೈನಿಂದ ಜಿಲ್ಲೆಗೆ ಬಂದಿರುವ 30 ವರ್ಷ ವಯಸ್ಸಿನ ವ್ಯಕ್ತಿಗೆ (ಪಿ1494)ಕೋವಿಡ್-19 ಪಾಸಿಟಿವ್ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದರು.

ನಾಲ್ವರು ಗುಣಮುಖ:ಕೋವಿಡ್-19ರಿಂದ ಗುಣಮುಖರಾದ ನಾಲ್ವರನ್ನು ಗುರುವಾರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 61 ಸೋಂಕಿತರ ಪೈಕಿ 41 ಜನ ಗುಣಮುಖರಾಗಿದ್ದಾರೆ ಎಂದರು.

38 ವರ್ಷ ವಯಸ್ಸಿನ ಮಹಿಳೆ (ಪಿ275), 33 ವರ್ಷದ ಮಹಿಳೆ (ಪಿ538), 11 ವರ್ಷದ ಬಾಲಕಿ (ಪಿ769) ಹಾಗೂ 45 ವರ್ಷ ವಯಸ್ಸಿನ ಪುರುಷ (ಪಿ510)ಗುಣಮುಖರಾಗಿ ಮನೆಗೆ ತೆರಳಿದರು ಎಂದು ಹೇಳಿದರು.

ಇನ್ನುಳಿದ 16 ಕೋವಿಡ್ ಸೋಂಕಿತ ರೋಗಿಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಬಾಲಕಿಗೆ ವಿಶೇಷ ಚಿಕಿತ್ಸೆ:ಕೋವಿಡ್-19 ದಿಂದ ಗುಣಮುಖಳಾಗಿದ್ದ 11 ವರ್ಷದ ಬಾಲಕಿ(ಪಿ769) ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ರಕ್ತಹೀನತೆಯಿಂದ ಬಳಲುತ್ತಿದ್ದಳು. ಅನುವಂಶಿಕವಾಗಿ ಇರುವ ಈ ಕಾಯಿಲೆಗೆ ಕೆಂಪು ರಕ್ತಕಣಗಳ ಉತ್ಪತ್ತಿ ಕಡಿಮೆ ಇರುವುದರಿಂದ ಪ್ರತಿ ತಿಂಗಳು ಈ ರೋಗಿಗೆ ಕೆಂಪುರಕ್ತ ನೀಡಬೇಕಾಗುತ್ತಿತ್ತು ಎಂದು ವೈದ್ಯಾಧಿಕಾರಿ ಲಕ್ಕಣ್ಣವರ ತಿಳಿಸಿದರು.

ಲಾಕ್‍ಡೌನ್ ಜಾರಿಯಿಂದಾಗಿ ಈ ಬಾಲಕಿಗೆ ಎರಡು ತಿಂಗಳುಗಳಿಂದ ರಕ್ತ ದೊರೆಯದೆ ರಕ್ತಹೀನತೆಯಿಂದ ಬಳಲಿದ್ದಳು. ಈ ಬಾಲಕಿಗೆ ಚಿಕ್ಕಮಕ್ಕಳ ತಜ್ಞರಿಂದ ಚಿಕಿತ್ಸೆ ಒದಗಿಸುವ ಮೂಲಕ ಹಿಮೋಗ್ಲೋಬಿನ್ ಹೆಚ್ಚಿಸಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾಳೆ ಎಂದರು.

17,626 ಜನರಿಗೆ ಕ್ವಾರಂಟೈನ್‍
ವಿಜಯಪುರ
: ಗೋವಾ ಹೊರತುಪಡಿಸಿ ದೇಶದ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿರುವ 17,626 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಹೊರ ರಾಜ್ಯಗಳಿಂದ ಅಧಿಕೃತ ಪರವಾನಗಿ ಪಡೆದು 9987 ಹಾಗೂ ಪರವಾನಗಿ ಪಡೆಯದೆ 7639 ಜನರು ಸೇರಿದಂತೆ ಒಟ್ಟು 17,626 ಜನರು ಜಿಲ್ಲೆಗೆ ಆಗಮಿಸಿದ್ದು, ಅವರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದರು.

ನಗರ ಪ್ರದೇಶದಲ್ಲಿ 2,342 ಹಾಗೂ ಗ್ರಾಮಿಣ ಪ್ರದೇಶಗಳಲ್ಲಿ 15,285 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 1,066, ವಿದ್ಯಾರ್ಥಿನಿಲಯಗಳಲ್ಲಿ 3,316, ಪ್ರೌಢಶಾಲೆಗಳಲ್ಲಿ 3,733, ಪ್ರಾಥಮಿಕ ಶಾಲೆಗಳಲ್ಲಿ 7,871, ಸಮುದಾಯ ಭವನಗಳಲ್ಲಿ 266, ಇತರ ಕಡೆಗಳಲ್ಲಿ 1,145 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ ಎಂದರು.

ಗೋವಾ‌ದಿಂದ ಈವರೆಗೆ ಬಂದಿರುವ 2,911 ಜನರನ್ನು ಹೋಂಕ್ವಾರಂಟೈನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.