ADVERTISEMENT

ವಿಜಯಪುರ | ಕೊರೊನಾ ಸೇನಾನಿಗಳಿಗೆ ಕಿರುಕುಳ, ಕ್ರಿಮಿನಲ್ ಕೇಸ್‌

ಮತ್ತಿಬ್ಬರಿಗೆ ಕೋವಿಡ್‌ 19 ದೃಢ; ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 39ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 19:30 IST
Last Updated 24 ಏಪ್ರಿಲ್ 2020, 19:30 IST
ವಿಜಯಪುರದ ಕೋವಿಡ್‌–19 ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ವೈದ್ಯ ಸಿಬ್ಬಂದಿ ಅತ್ಯಾಧುನಿಕ ಕ್ಯಾಬಿನ್‌ ಸಹಾಯದೊಂದಿಗೆ ಸಾರ್ವಜನಿಕರ ಗಂಟಲುದ್ರವ ಸಂಗ್ರಹ ಮಾಡಿದರು
ವಿಜಯಪುರದ ಕೋವಿಡ್‌–19 ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ವೈದ್ಯ ಸಿಬ್ಬಂದಿ ಅತ್ಯಾಧುನಿಕ ಕ್ಯಾಬಿನ್‌ ಸಹಾಯದೊಂದಿಗೆ ಸಾರ್ವಜನಿಕರ ಗಂಟಲುದ್ರವ ಸಂಗ್ರಹ ಮಾಡಿದರು   

ವಿಜಯಪುರ: ಜಿಲ್ಲೆಯಾದ್ಯಂತ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಸೇನಾನಿಗಳಾದ ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ, ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಗಳಿಂದ ಹೊರ ಹೋಗಲು ಒತ್ತಾಯಪಡಿಸುವುದು ಮತ್ತು ಕಿರುಕುಳ ನೀಡಿದರೆ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ತೀವ್ರ ಸಂಕಷ್ಟದ ಪರಿಸ್ಥಿತಿ ಇದಾಗಿದ್ದು, ಎಲ್ಲರು ಒಟ್ಟುಗೂಡಿ ಇದರ ವಿರುದ್ಧ ಹೋರಾಡಬೇಕಿದೆ ಎಂದು ಮನವಿ ಮಾಡಿದರು.

ಕೆಲವು ಕಡೆ ಸೇವೆ ಸಲ್ಲಿಸುತ್ತಿರುವ ವೈದ್ಯರು, ವೈದ್ಯ ಸಿಬ್ಬಂದಿ ಹಾಗೂ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಡಿಗೆ ಮನೆಯಿಂದ ಖಾಲಿ ಮಾಡಿಸಲು ಒತ್ತಾಯಿಸುವುದು ಹಾಗೂ ಕಿರುಕುಳ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ADVERTISEMENT

ಸೂಚನೆ:ತೀವ್ರ ಶ್ವಾಸಕೋಶ ತೊಂದರೆ ಹಾಗೂ ನೆಗಡಿ, ಕೆಮ್ಮು, ಜ್ವರ ಸಂಬಂಧಿಸಿದ ಯಾವುದೇ ರೋಗಿಗಳಿಗೆ ಯುನಾನಿ, ಆಯುರ್ವೇದ, ಹೋಮಿಯೊಪಥಿ ವೈದ್ಯರು ಚಿಕಿತ್ಸೆ ನೀಡದೇ ತಜ್ಞ ವೈದ್ಯರ ಬಳಿಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಖಾಸಗಿ ಆಸ್ಪತ್ರೆ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು ಅವರು, ಕೋವಿಡ್-19 ರೋಗಿಗಳಿಗೆ ತಜ್ಞ ವೈದ್ಯರಿಂದ ಉಪಚರಿಸುವುದು ಅವಶ್ಯಕತೆ ಇದೆ ಎಂದರು.

ಎಲ್ಲರೂ ಆರೋಗ್ಯ:ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿರುವ ಎಲ್ಲ ರೋಗಿಗಳೂ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಪಿ 221 ಸಂಪೂರ್ಣ ಗುಣಮುಖವಾಗಿದ್ದು, ಒಂದೆರಡು ದಿನಗಳಲ್ಲಿ ಅವರ ವರದಿ ಬರಲಿದೆ. ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸದೇ ಇನ್ನೊಂದು ವಾರ ಕ್ವಾರಂಟೈನ್‌ನಲ್ಲಿ ಇಡಲು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ ಎಂದರು.

2 ನೇ ಬಾರಗೆ ಕ್ವಾರಂಟೈನ್‌:ಈಗಾಗಲೇ ನೆಗೆಟಿವ್‌ ಬಂದಿರುವ ಹಾಗೂ ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ ಪೂರ್ಣಗೊಳಿಸಿರುವ 163 ಜನರಿಗೆ ಎರಡನೇ ಅವಧಿಗೆ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು ಎಂದರು.

ಅಂತರ ಕಾಪಾಡುವುದು ಮುಖ್ಯ:ಕೊರೊನಾ ಸೋಂಕಿತ ಪಿ221 ರೋಗಿಯ ಕುಟುಂಬದ ಬಹುತೇಕ ಎಲ್ಲರಿಗೂ ಕೋವಿಡ್‌–19 ದೃಢಪಟ್ಟಿದೆ. ಹೀಗಾಗಿ ಈ ಸೋಂಕಿನಿಂದ ಪಾರಾಗಬೇಕೆಂದರೆ ಅಂತರ ಕಾಪಾಡುವುದು ಅತಿ ಮುಖ್ಯ ಎಂಬುದು ಈ ಪ್ರಕರಣದಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.