
ರಮೇಶ ಜಿಗಜಿಣಗಿ
ವಿಜಯಪುರ: ಹಗಲು ದರೋಡೆ, ಹಗರಣವೇ ರಾಜ್ಯ ಸರ್ಕಾರದ ಎರಡೂವರೆ ವರ್ಷದ ಸಾಧನೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಟೀಕಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಧನ ದೊಡ್ಡ ಶೂನ್ಯ. ದಿನಪತ್ರಿಕೆಗಳ ಜಾಹೀರಾತಿನಲ್ಲಿ ಮಾತ್ರ ಸಾಧನೆ ಇದೆ. ಕಾಂಗ್ರೆಸ್ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ಹೇಳಿದರು.
ದಲಿತರ ಪಾಲಿನ ಅನುದಾನವನ್ನು ಗ್ಯಾರಂಟಿ ಯೋಜನೆಗೆ ದುರುಪಯೋಗ ಪಡಿಸಿಕೊಳ್ಳುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.
ವಿಜಯಪುರದಲ್ಲಿ ಸರ್ಕಾರವೇ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು. ಯಾವುದೇ ಕಾರಣಕ್ಕೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಆಗಬಾರದು ಎಂದು ಒತ್ತಾಯಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ, ಈ ನಿಟ್ಟಿನಲ್ಲಿ ಹೋರಾಟ ಅಗತ್ಯ ಇಲ್ಲ, ನಾನು ಯಾವುದೇ ಪತ್ರಕ್ಕೂ ಸಹಿ ಹಾಕಿಲ್ಲ, ಅದು ಸುಳ್ಳು ಎಂದರು.
ಬೆಳೆ ಪರಿಹಾರಕ್ಕೆ ಆಗ್ರಹ:
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಬೆಳೆ ವಿಮೆ ಇನ್ನೂ ಬಿಡುಗಡೆಯಾಗಿಲ್ಲ, ರಾಜ್ಯ ಸರ್ಕಾರ ತನ್ನ ಪಾಲಿನ ಬೆಳೆ ವಿಮೆ ಕಂತು ಕಟ್ಟದೇ ಇರುವುದರಿಂದ ತೊಂದರೆಯಾಗಿದೆ. ಈ ಸರ್ಕಾರಕ್ಕೆ ದ್ರಾಕ್ಷಿ ಬೆಳೆಗಾರರ ಮೇಲೆ ಕಾಳಜಿ ಇಲ್ಲವೋ, ಸರ್ಕಾರದ ಬೊಕ್ಕಸ ಕಾಲಿಯಾಗಿದೆಯೋ ಎಂಬುದು ತಿಳಿಯದಾಗಿದೆ ಎಂದರು.
ದ್ರಾಕ್ಷಿ ಬೆಳೆ ವಿಮೆ ಆದಷ್ಟು ಬೇಗ ರೈತರಿಗೆ ಸಿಗುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಇಲ್ಲವಾದರೆ, ಬೆಳಗಾವಿ ಜಿಲ್ಲೆಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸಿದ ಹೋರಾಟದಂತೆ ವಿಜಯಪುರದಲ್ಲಿ ಸಂಸದರ ನೇತೃತ್ವದಲ್ಲಿ ರೈತರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯ ಬಬಲೇಶ್ವರ, ತಿಕೋಟಾ ಭಾಗದಲ್ಲಿ ಹೆಚ್ಚು ದ್ರಾಕ್ಷಿ ಬೆಳೆಗಾರರು ಇದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದ ದ್ರಾಕ್ಷಿ ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಿಸಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಸಿಂದಗಿ ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ಘೋಷಣೆ ಆಗಿ ಎರಡು ವರ್ಷ ಆಯ್ತು. ಇದುವರೆಗೂ ಆರಂಭಿಸಿಲ್ಲ. ಸರ್ಕಾರದ ವಿಳಂಬ ನಡೆ ಖಂಡನೀಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.