ADVERTISEMENT

ಕೋವಿಡ್ 2ನೇ ಅಲೆ: ನಿಯಮ ಪಾಲನೆ ಕಡ್ಡಾಯ

ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 15:36 IST
Last Updated 22 ಫೆಬ್ರುವರಿ 2021, 15:36 IST
ಪಿ.ಸುನೀಲ್‌ ಕುಮಾರ್‌
ಪಿ.ಸುನೀಲ್‌ ಕುಮಾರ್‌   

ವಿಜಯಪುರ: ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್‌–19 ಎರಡನೇ ಅಲೆ ಕಾಣಿಸಿಕೊಂಡಿರುವುದರಿಂದ ರಾಜ್ಯದ ಗಡಿ ಭಾಗದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಜೊತೆಗೆ ಕೋವಿಡ್ ನಿಯಂತ್ರಣ‌ ಕ್ರಮಗಳನ್ನು ಜಿಲ್ಲೆಯಲ್ಲಿ ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚಿಸಿದ್ದಾರೆ.

ಯಾವುದೇ ಒಂದು ಸಂಸ್ಥೆಯಲ್ಲಿ ಐದಕ್ಕಿಂತ ಹೆಚ್ಚು ಕೋವಿಡ್‌ ಪಾಸಿಟಿವ್ ಪ್ರಕರಣಗಳು ಪತ್ತೆಯಾದಲ್ಲಿ, ಅಂತಹ ಸಂಸ್ಥೆಯನ್ನು ಕಂಟೇನ್ಮೆಂಟ್‍ ಝೋನ್‍ ಎಂದು ಆದೇಶಿಸಲಾಗುವುದು. ತದ ನಂತರ 7 ದಿನಗಳ ನಂತರ ಎಲ್ಲ ವಿದ್ಯಾರ್ಥಿ, ಇತರೆ ಸಿಬ್ಬಂದಿಗಳ ಆರ್.ಟಿ.ಪಿ.ಸಿ.ಆರ್. ಟೆಸ್ಟ್‌ ಕಡ್ಡಾಯವಾಗಿ ಮಾಡಿಸಲಾಗುವುದು ಎಂದು ತಿಳಿಸಿದ್ದಾರೆ.

ವಿದೇಶದಿಂದ ಆಗಮಿಸುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ತರಬೇಕು. ಒಂದು ವೇಳೆ ನೆಗೆಟಿವ್ ವರದಿಯು ಇರದ ಪಕ್ಷದಲ್ಲಿ ವಿಮಾನನಿಲ್ದಾಣದಲ್ಲಿ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಮಾಡಿಸಿಕೊಂಡು ಬರಬೇಕು ಎಂದು ಅವರು ಹೇಳಿದ್ದಾರೆ.

ADVERTISEMENT

ವಿದೇಶದಿಂದ ಅಥವಾ ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಬಸ್, ರೈಲು, ಖಾಸಗಿ ವಾಹನಗಳ ಮೂಲಕ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಮೊದಲು ಮಾಡಿದ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನೆಗೆಟಿವ್ ವರದಿಯೊಂದಿಗೆ ಆಗಮಿಸಬೇಕು ಎಂದು ಸೂಚಿಸಿದ್ದಾರೆ.

ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ನೆಗೆಟಿವ್ ವರದಿ ಇಲ್ಲದೇ ಜಿಲ್ಲೆಗೆ ಆಗಮಿಸಿದ ವ್ಯಕ್ತಿಗಳ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಫಲಿತಾಂಶ ಬರುವರೆಗೂ ಅಂಥವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ ಕೊಠಡಿಯಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದಿಂದ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಹಾಗೂಖಾಸಗಿ ಟ್ರಾವೆಲ್ಸ್‌ಗಳ ಮೂಲಕ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ 72 ಗಂಟೆಗಳ ಮುಂಚೆ ಪಡೆಯಲಾದ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯೊಂದಿಗೆ ಪ್ರಯಾಣಿಸುವ ಬಗ್ಗೆ ಬಸ್‌ ನಿರ್ವಾಹಕರು ಖಚಿತಪಡಿಸಿಕೊಂಡು ಪ್ರಯಾಣಿಸಲು ಅನುಮತಿ ನೀಡಬೇಕು ಎಂದರು.

ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯೊಂದಿಗೆ ಬಾರದ ಪ್ರಯಾಣಿಕರನ್ನು ಮರಳಿ ಅವರು ಬಂದ ಸ್ಥಳಕ್ಕೆ ಹಿಂದಿರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ ಧರಿಸುವುದು, ದೈಹಿಕ ಅಂತರ ಪಾಲನೆ ಮತ್ತು ಹ್ಯಾಂಡ್ ಸ್ಯಾನಿಟೈಜರ್ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದರು.

ಹಾಸ್ಟೆಲ್, ವಸತಿ ಶಾಲೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.

ಜಿಲ್ಲೆಯ ಎಲ್ಲ ಕಾಲೇಜು, ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಒಬ್ಬ ಅಧಿಕಾರಿಯನ್ನು ಕೋವಿಡ್ ನೋಡಲ್‍ ಅಧಿಕಾರಿ ಎಂದು ನೇಮಿಸಬೇಕು ಎಂದರು.

ಹಾಸ್ಟೆಲ್, ವಸತಿ ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಕೋವಿಡ್ ನೋಡಲ್‍ ಅಧಿಕಾರಿಯ ಅನುಮತಿ ಇಲ್ಲದೇ, ಅತಿಥಿ, ಸಂಬಂಧಿಕರನ್ನು ಭೇಟಿ ಮಾಡುವಂತಿಲ್ಲ. ಕಾಲೇಜು, ಹಾಸ್ಟೆಲ್‍ಗಳಿಗೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಭೇಟಿ ನೀಡುವ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಪ್ರಾಧಿಕಾರವು ನಿರ್ವಹಿಸಬೇಕು ಎಂದರು.

ಕಳೆದ ಎರಡು ವಾರಗಳ ಅವಧಿಯಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಿಂದ ಜಿಲ್ಲೆಗೆ ಆಗಮಿಸಿರುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲೆಯ ವಿವಿಧ ಕಂಪನಿಗಳಲ್ಲಿ, ಹೋಟೆಲ್‌, ರೆಸಾರ್ಟ್‌, ಲಾಡ್ಜ್‌ಗಳು, ಹೋಂ ಸ್ಟೇಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳ, ಮಹಾರಾಷ್ಟ್ರ ಮೂಲದ ಸಿಬ್ಬಂದಿ ತಮ್ಮ ಸ್ವಂತ ಖರ್ಚಿನಲ್ಲಿ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೋವಿಡ್‌ ಸೂಚನೆಯನ್ನು ಪಾಲಿಸದಿದ್ದಲ್ಲಿ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.