ವಿಜಯಪುರ: ಕೋವಿಡ್ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಎಲ್ಲ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಆಕ್ಸಿಜನ್ ಸಿಲೆಂಡರ್ ಮತ್ತು ಚಿಕ್ಕ ಮಕ್ಕಳ ವೆಂಟಿಲೇಟರ್ ಮತ್ತು ಹಾಸಿಗೆಗಳನ್ನು ವ್ಯವಸ್ಥೆ ಮಾಡಿಟ್ಟುಕೊಳ್ಳಲು ಸೂಚಿಸಲಾದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು, ವೈದ್ಯಾಧಿಕಾರಿಗಳು, ಚಿಕ್ಕ ಮಕ್ಕಳ ತಜ್ಞರೊಂದಿಗೆ ಈಗಾಗಲೇ ಈ ಸಂಬಂಧ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದರು.
ಕೋವಿಡ್ ಚಿಕಿತ್ಸೆಗಾಗಿ ಹಂಚಿಕೆ ಮಾಡಲಾದ ಬೆಡ್‍ಗಳ ಪೈಕಿ ಶೇ 50 ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾ ಎಂದು ಕಾಯ್ದಿರಿಸಲು ನಿರ್ದೇಶನ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೆ 23 ಕೋವಿಡ್ ಆಸ್ಪತ್ರೆಗಳ ಪೈಕಿ 20 ಆಸ್ಪತ್ರೆಗಳನ್ನು ಎ.ಬಿ.ಎ.ಆರ್.ಕೆ. ಅಡಿಯಲ್ಲಿ ನೋಂದಣಿಯಾಗಿವೆ ಎಂದು ತಿಳಿಸಿದರು.
ಜಿಲ್ಲಾ ಆಸ್ಪತ್ರೆಯು ಒಟ್ಟು 250 ಹಾಸಿಗೆಗಳಲ್ಲಿ ಕೋವಿಡ್ ರೋಗಿಗಳ ಸಲುವಾಗಿ ಮೀಸಲಿರಿಸಿದ 200 ಹಾಸಿಗೆಗಳ ಪೈಕಿ, 50 ಹಾಸಿಗೆಗಳನ್ನು ಚಿಕ್ಕ ಮಕ್ಕಳ ಸಲುವಾಗಿ ಮೀಸಲಿರಿಸಲಾಗಿದೆ ಎಂದರು.
ಜಿಲ್ಲಾಸ್ಪತ್ರೆಯಲ್ಲಿರುವ ಹಳೇ ಡಯಾಲಿಸಿಸ್ ವಾರ್ಡನ್ನು ಬದಲಾಯಿಸಿ 10 ವೆಂಟಿಲೆಟರ್‌ಗಳುಳ್ಳ ಚಿಕ್ಕಮಕ್ಕಳ ತುರ್ತು ಚಿಕಿತ್ಸಾ ನಿಗಾ ಘಟಕವನ್ನಾಗಿ ಪರಿವರ್ತಿಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರ, ದಾನಿಗಳಿಂದ ಮತ್ತು ಖರೀದಿಸಲಾದ ಒಟ್ಟು 231 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳಿದ್ದು, ಇವುಗಳನ್ನು ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬಳಸಲಾಗುತ್ತದೆ ಎಂದರು.
ಇಂಡಿ ತಾಲ್ಲೂಕು ಆಸ್ಪತ್ರೆಯ 50 ಬೆಡ್‍ಗಳ ಪೈಕಿ 20 ಬೆಡ್‍ಗಳನ್ನು ಚಿಕ್ಕಮಕ್ಕಳಿಗೆ ಮೀಸಲೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ 50 ಮತ್ತು ಸಮುದಾಯ ಕೇಂದ್ರಗಳಿಗೆ ತಲಾ 40ರಂತೆ ಒಟ್ಟು 560 ಜಂಬೋ ಸಿಲೆಂಡರ್‌ಗಳನ್ನು ಪೂರೈಸುವ,ಜಿಲ್ಲೆಯ ಎಲ್ಲ ಸಮುದಾಯ ಕೇಂದ್ರಗಳ ಅವಶ್ಯಕತೆಗೆ ಅನುಗುಣವಾಗಿ 100/6250 ಕೆ.ವಿ.ಎ. ಜನರೇಟರ್ ಹಾಗೂ ಚಿಕ್ಕ ಮಕ್ಕಳ ಸಲುವಾಗಿ ಒಟ್ಟು 26 ಚಿಕ್ಕ ಮಕ್ಕಳ ಕಾಟ್ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
ವಿಜಯಪುರಜಿಲ್ಲಾಸ್ಪತ್ರೆಯಲ್ಲಿ 1000 ಎಲ್‍ಪಿಎಂ ಸಾಮಾರ್ಥ್ಯದ ಆಕ್ಸಿಜನ್ ಪ್ಲಾಂಟ್, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆ 500 ಎಲ್‍ಪಿಎಂ,ಬಸವನ ಬಾಗೇವಾಡಿ ಸರ್ಕಾರಿ ಆಸ್ಪತ್ರೆ 500 ಎಲ್‍ಪಿಎಂ, ಇಂಡಿ ಸರ್ಕಾರಿ ಆಸ್ಪತ್ರೆ 500,ಸಿಂದಗಿ ಸರ್ಕಾರಿ ಆಸ್ಪತ್ರೆ 500, ಚಡಚಣ ಸಿಎಚ್‍ಸಿ 280 ಎಲ್‍ಪಿಎಂಸಾಮಾರ್ಥ್ಯದ ಆಕ್ಸಿಜನ್ ಪ್ಲಾಂಟಿನ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಜಿಲ್ಲಾಸ್ಪತ್ರೆ ಮತ್ತೆ 960 ಎಲ್‍ಪಿಎಂ ಸಾಮಾರ್ಥ್ಯದ ಆಕ್ಸಿಜನ್ ಪ್ಲಾಂಟಿನ ಕಾಮಗಾರಿ ಆರಂಭಿಸಬೇಕಾಗಿದೆ.
ಬಾಕಿ ಉಳಿದ ವೈದ್ಯಕೀಯ ಆಕ್ಸಿಜನ್ ಘಟಕಗಳನ್ನು ಈ ತಿಂಗಳ ಮಾಸಾಂತ್ಯಕ್ಕೆ ಅಳವಡಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ವೈದ್ಯಕೀಯ ಸಾಮಗ್ರಿಗಳ ಸರಬರಾಜು ನಿಗಮದಿಂದ ಜಿಲ್ಲೆಗೆ ಒಟ್ಟು 10 ವೆಂಟಿಲೇಟರ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಶಾಸಕರ ಅನುದಾನದಡಿ 9 ಅಂಬುಲೆನ್ಸ್‌ಗಳನ್ನು ಖರೀದಿಸಲಾಗಿದ್ದು, ಆ ಪೈಕಿ 6 ಅಂಬುಲೆನ್ಸ್‌ಗಳನ್ನು ಹಸ್ತಾಂತರವಾಗಿರುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.