ADVERTISEMENT

ಹೆದ್ದಾರಿ ದರೋಡೆಕೋರರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:38 IST
Last Updated 26 ಮೇ 2020, 16:38 IST

ವಿಜಯಪುರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಹಣ ದರೋಡೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಒಬ್ಬ ಬಾಲಾಪರಾಧಿ ಸೇರಿದಂತೆ 9 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್‌ ಅಗರವಾಲ್ ತಿಳಿಸಿದರು.

ಬಸವನ ಬಾಗೇವಾಡಿ ತಾಲ್ಲೂಕಿನ ಸಂಗಮೇಶ ಅಗಸರ, ಬಸವರಾಜ ಮಡಿವಾಳರ, ಬಸವರಾಜ ಮೇಟಿ, ಶಿವಾನಂದ ಕಂಟೆ, ರವಿ ಬಿರಾದಾರ, ಶೇಖ ಮಡಿವಾಳ, ಬಸವರಾಜ ಬಿರಾದಾರ ಬಂಧಿತ ಆರೋಪಿಗಳಾಗಿದ್ದಾರೆ.

ADVERTISEMENT

ಕೃತ್ಯಕ್ಕೆ ಬಳಸಲಾಗಿರುವ ಆಟೊರಿಕ್ಷಾ, ಬೈಕ್‌, ಮೊಬೈಲ್, ₹89 ಸಾವಿರ ನಗದು ಹಣವನ್ನು ಬಂಧಿತ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಮೇ 22 ರಂದು ವಿಜಯಪುರದಿಂದ - ದಾವಣಗೆರೆ ಕಡೆಗೆ ಹೊರಟಿದ್ದ ಲಾರಿಯನ್ನು ಮನಗೂಳಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ತಡೆದು, ಮಾರಕಾಸ್ತ್ರಗಳಿಂದ ಚಾಲಕ, ನಿರ್ವಾಹಕರನ್ನು ಹೆದರಿಸಿ ₹ 1.28ಲಕ್ಷ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.

ಆರೋಪಿಗಳು ಸೋಮವಾರ ಮಧ್ಯಾಹ್ನ ಮನಗೂಳಿ ಬಳಿ ಇರುವ ಡಾಬಾವೊಂದರ ಬಳಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

‘ಐಷಾರಾಮಿ ಜೀವನಕ್ಕಾಗಿ ಈ ರೀತಿಯ ಕೃತ್ಯಕ್ಕೆ ಕೈ ಹಾಕಿದ್ದೇವ ಎಂದು ಯುವಕರು ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಬಂಧಿತವಾಗಿರುವ ಆರೋಪಿಗಳಿಗೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ’ ಎಂದರು.

ಡಿವೈಎಸ್‍ಪಿ ಶಾಂತವೀರ, ಸೋಮಶೇಖರ ಜುಟ್ಟಲ್, ಎನ್.ಬಿ. ಶಿವೂರ, ಸಿ.ಬಿ. ಚಿಕ್ಕೋಡಿ, ಬಿ.ಎಂ. ಬಸವನಗೌಡರ್ ಅವರನ್ನೊಳಗೊಂಡ ತಂಡದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.