ADVERTISEMENT

ಫಿನಾಯಿಲ್‌ ಪರಿಮಳಕ್ಕೆ ಮೂರ್ಚೆ: ಮನೆ ದರೋಡೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 15:01 IST
Last Updated 3 ಆಗಸ್ಟ್ 2020, 15:01 IST

ವಿಜಯಪುರ: ಕಡಿಮೆ ಬೆಲೆಗೆ ಫಿನಾಯಿಲ್ ಮಾರಾಟ ಮಾಡುವ ನೆಪದಲ್ಲಿ ಮನೆಗೆ ಬಂದ ಮಹಿಳೆಯೊಬ್ಬಳು ಮನೆಯವರಿಗೆ ಪ್ರಜ್ಞೆ ತಪ್ಪಿಸಿ, ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಶಾಂತಿನಗರದಲ್ಲಿ ನಡೆದಿದೆ.

ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಅವರ ಮನೆಗೆ ಆಗಸ್ಟ್‌ 2ರಂದು ಮಧ್ಯಾಹ್ನ ಬಂದಿದ್ದಮಹಿಳೆ ₹100 ರೂಪಾಯಿಗೆ 3 ಫಿನಾಯಿಲ್ ಬಾಟಲಿ ನೀಡುತ್ತೇನೆ ತೆಗೆದುಕೊಳ್ಳಿ ಎಂದು ಹೇಳಿದ್ದಾಳೆ.

ತೋಳಬಂದಿ ಅವರ ಪುತ್ರ ಕೇಶವ ತೋಳಬಂದಿ ಅವರಿಗೆ ಫಿನಾಯಿಲ್‌ ಪರಿಮಳ ಚನ್ನಾಗಿದೆಯಾ ನೋಡಿ ಎಂದು ಮೂಗಿಗೆ ಹಿಡಿದಿದ್ದಾಳೆ. ಆ ಕ್ಷಣವೇ ಅವರು ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಬಿದ್ದಿದ್ದಾರೆ. ಬಳಿಕ ಮಹಿಳೆಯು ಮನೆಯೊಳಗೆ ಮಲಗಿದ್ದ ದಂಪತಿಗೂ ಮೂರ್ಛೆ ಬರಿಸುವರಾಸಾಯನಿಕವನ್ನು ಮೂಗಿಗೆ ಹಿಡಿದು ಅವರ ಪ್ರಜ್ಞೆಯನ್ನು ತಪ್ಪಿಸಿದ್ದಾಳೆ.

ADVERTISEMENT

ಮನೆ ಬೆಡ್‌ರೂಂನಲ್ಲಿದ್ದ 40 ಗ್ರಾಂ ಚಿನ್ನ, 220 ಗ್ರಾಂ ಬೆಳ್ಳಿ ಆಭರಣ, ಎರಡು ಮೊಬೈಲ್ ಫೋನ್ ಸೇರಿದಂತೆ ಒಟ್ಟು ₹2.49.800 ಮೌಲ್ಯದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾಳೆ.

ಸ್ವಲ್ಪ ಸಮಯದ ಬಳಿಕ ಪ್ರಜ್ಞೆ ಬಂದಾಗ ಮನೆ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ, ಮನೆಯಲ್ಲಿ ಸಾಕಿದ್ದ ನಾಯಿಗೂ ವಿಷ ಉಣಿಸಿದ್ದು, ಸಂಜೆ ವೇಳೆಗೆ ನಾಯಿ ಮೃತಪಟ್ಟಿದೆ. ಈ ಸಂಬಂಧ ಗೋಳ ಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಂದಿಗೆ ದೊಡ್ಡ ಗ್ಯಾಂಗ್ ಈ ಕೃತ್ಯ ಮಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.‌ ಈ ರೀತಿ ಯಾರಾದರು ಮನೆಗೆ ಬಂದರೆ ಎಚ್ಚರ ವಹಿಸಿ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಪೊಲೀಸರು ಸಾರ್ವಜನಿಕರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.