ADVERTISEMENT

₹127 ಕೋಟಿ ಬೆಳೆ ಪರಿಹಾರ ವಿತರಣೆ

ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ: ಶಾಸಕ ಯಶವಂತರಾಯಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 2:54 IST
Last Updated 20 ಜನವರಿ 2026, 2:54 IST
ಇಂಡಿ ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು 
ಇಂಡಿ ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು    

ಇಂಡಿ: ‘ತಾಲ್ಲೂಕಿನ 52,337 ರೈತರಿಗೆ ₹127 ಕೋಟಿ ಬೆಳೆ ಪರಿಹಾರ ನೀಡಲಾಗಿದೆ’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಸರಬರಾಜು ಮಾಡುವ ನೀರು ನಿರ್ವಹಣೆಯ ಮಾಡುವ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗಿದೆ.ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಹಣ ವಿಲೇವಾರಿಯಾಗಿಲ್ಲ. ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಗುತ್ತಿಗೆದಾರರಿಗೆ ಈ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಶಾಸಕ ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ‘ವಾಡಿಕೆಗಿಂತ ಶೇ 53ರಷ್ಟು ಹೆಚ್ಚು ಮಳೆಯಾಗಿದ್ದು, ಮೆಕ್ಕೆಜೋಳ, ಹತ್ತಿ, ತೊಗರಿ, ಈರುಳ್ಳಿ ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿತ್ತು ಎಂದರು.

ಹೆಸ್ಕಾಂ ಅಧಿಕಾರಿ ಎಸ್.ಆರ್.ಮೆಂಡೇಗಾರ ಮಾತನಾಡಿ, ತಾಲ್ಲೂಕಿನಲ್ಲಿ 7 ವಿದ್ಯತ್ ವಿತರಣಾ ಘಟಕಗಳಿದ್ದು, ರೈತರಿಗೆ ಪ್ರತಿ ದಿನ 7 ಗಂಟೆ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡಲಾಗುವುದು. ನಿಂಬಾಳ ಗ್ರಾಮದಲ್ಲಿಯ ಹೊಸ ವಿದ್ಯುತ್ ಘಟಕದ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಒಟ್ಟು 60 ಸಾವಿರ ಮಕ್ಕಳು ಓದುತ್ತಿದ್ದಾರೆ, ಪ್ರಸಕ್ತ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಳಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಹಶೀಲ್ದಾರ್‌ ಬಿ.ಎಸ್.ಕಡಕಬಾವಿ ಮಾತನಾಡಿ, ತಾಲ್ಲೂಕಿನ ಎಲ್ಲಾ 88 ಗ್ರಾಮಗಳಲ್ಲಿ ಸ್ಮಶಾನಗಳಿದ್ದು, ಕೆಲವು ಕಡೆ ಸರ್ಕಾರಿ ಜಾಗವಿದ್ದು, ಅಲ್ಲಿಗೆ ಹೋಗಲು ದಾರಿ ಸಮಸ್ಯಯಿದೆ ಅದನ್ನು ಕೂಡಲೇ ಬಗೆಹರಿಸುವುದಾಗಿ ತಿಳಿಸಿದರು.

ಕಬ್ಬಿಗೆ ಡ್ರಿಪ್ ಮಾಡಿದರೆ ಶೇ 90ರಷ್ಟು ಸಬ್ಸಿಡಿ ಇದೆ ಎಂಬುದು ಪ್ರಚಾರ ಆಗಬೇಕು. ಈ ಕುರಿತು ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.

ಹೆಸ್ಕಾಂ, ಆರೋಗ್ಯ, ಶಿಕ್ಷಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ , ಕೆಬಿಜೆಎನ್‌ಎಲ್ ಸೇರಿದಂತೆ ಎಲ್ಲ ಇಲಾಖೆಗಳ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಯಿತು.

ವಿಜಯಪುರ ಬಸ್ ನಿಲ್ದಾಣದಲ್ಲಿ ಇರುವ ಕಿತ್ತೂರ ರಾಣಿ ಚನ್ನಮ್ಮನ ಮೂರ್ತಿಯಂತೆ ಇಂಡಿ ನಗರದ ಮಿನಿ ವಿಧಾನಸೌಧದಲ್ಲಿ  ಚನ್ನಮ್ಮನ ಮೂರ್ತಿ ಪ್ರತಿಷ್ಠಾಪಿಸಲು ಉಪ ಕಂದಾಯ ವಿಭಾಗಾಧಿಕಾರಿಗಳು ಸ್ಥಳವಕಾಶ ಮಾಡಿಕೊಡಬೇಕೆಂದು ಶಾಸಕರು ಸೂಚಿಸಿದರು.

ಡಿ.ಎಸ್.ಪ್ರಕಾಶ ವಡ್ಡರ, ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿ.ವೈ.ಎಸ್.ಪಿ ಸದಾಶಿವ ಕಟ್ಟಿಮನಿ, ಇಒ ಭೀಮಾಶಂಕರ ಕನ್ನೂರ, ಗುರನಗೌಡ ಪಾಟೀಲ, ಬಿ.ಕೆ.ಪಾಟೀಲ ಹಿರೇಬೇವನೂರ, ಇಲಿಯಾಸ್ ಬೋರಾಮಣಿ, ಪ್ರಶಾಂತ ಕಾಳೆ, ಬಾಬು ಸಾವಕಾರ ಮೇತ್ರಿ, ಶಿವಯೋಗಪ್ಪ ಚನಗೊಂಡ ಇದ್ದರು.

‘ನರೇಗಾ’ ಬದಲಾವಣೆ ಸರಿಯಲ್ಲ: ಶಾಸಕ

ಕಳೆದ ಎರಡು ವರ್ಷಗಳಿಂದ ‘ಜೆಜೆಎಂ’ಗೆ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತಿಲ್ಲ. ನರೇಗಾ ಯೋಜನೆ ಗ್ರಾಮೀಣ ಕೂಲಿಕಾರರಿಗೆ ಅನುಕೂಲವಾಗಿದೆ. ಅದನ್ನು ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿ ಬದಲಾವಣೆ ಮಾಡಲು ಹೊರಟಿರುವುದು ಸರಿಯಲ್ಲ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಠರಾವು ಪಾಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕೆಂದು ಶಾಸಕರು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.