ದೇವರಹಿಪ್ಪರಗಿ: ಡೋಣಿ ನದಿಯಿಂದ ಉಂಟಾದ ಪ್ರವಾಹ ಹಾಗೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಡೋಣಿ ತೀರದ ಹತ್ತಿ, ತೊಗರಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಸೇರಿದಂತೆ ಹಲವು ಬೆಳೆಗಳು ನೀರಿನಿಂದ ಆವೃತವಾಗಿದ್ದು, ರೈತರು ಆತಂಕ ಪಡುವಂತಾಗಿದೆ.
ತಾಲ್ಲೂಕಿನ ಡೋಣಿ ನದಿ ತೀರದ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಭೈರವಾಡಗಿ, ನಾಗರಾಳ ಡೋಣ, ಯಾಳವಾರ ಸೇರಿದಂತೆ ಹಲವು ಗ್ರಾಮಗಳ ಎಡಬಲಗಳಲ್ಲಿಯ ಜಮೀನುಗಳು ಡೋಣಿ ಪ್ರವಾಹ ಹಾಗೂ ಸತತವಾಗಿ ಸುರಿಯುತ್ತಿರುವ ಮಳೆ ನೀರಿನಿಂದ ತುಂಬಿದ್ದು, ಬೆಳೆಗಳು ಸಂಪೂರ್ಣ ಹಾಳಾಗುವ ಹಂತದಲ್ಲಿವೆ.
‘ಭೈರವಾಡಗಿ ಗ್ರಾಮದಲ್ಲಿ ತೊಗರಿ ಹಾಗೂ ಹತ್ತಿ ಬೆಳೆ ಹೊಂದಿದ ತಗ್ಗಾದ ಹಾಗೂ ಎರೆಮಣ್ಣಿನ ಜಮೀನುಗಳಲ್ಲಿ ಅದರಲ್ಲೂ ಡೋಣಿ ತೀರದ ಜಮೀನುಗಳಲ್ಲಿ ನೀರು ಅಧಿಕವಾಗಿ ಸಂಗ್ರಹವಾದ ಪರಿಣಾಮ ಬೆಳೆ ಹಾಳಾಗುವ ಹಂತದಲ್ಲಿದ್ದು, ರೈತರು ನಿರಾಶಗೊಂಡಿದ್ದಾರೆ’ ಎಂದು ಗ್ರಾಮದ ರೈತ ಐ.ಐ.ಶಾಬಾದಿ ಆತಂಕ ವ್ಯಕ್ತಪಡಿಸಿದರು.
ಗ್ರಾಮದ ಜಮೀನಿನಲ್ಲಿ ಡೋಣಿ ಪ್ರವಾಹದ ನೀರು ನಿಂತಿದೆ. ಇದು ಒಣಗಲು ಬಿಡದಂತೆ ಸತತವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಗ್ರಾಮದ ಜಮೀನುಗಳಲ್ಲಿ ಬಿತ್ತನೆ ಮಾಡಿದ ಹತ್ತಿ, ತೊಗರಿ, ಉಳ್ಳಾಗಡ್ಡಿ, ಮೆಕ್ಕೆಜೋಳ ಬೆಳೆಗಳು ನೀರಿನಲ್ಲಿ ನಿಂತಿವೆ. ಗ್ರಾಮದ ಸಿದ್ದಣ್ಣ ಉತ್ನಾಳ, ಐ.ಎಲ್.ಶಾಬಾದಿ, ಅಬ್ದುಲ್ ರಜಾಕ್ ಶಾಬಾದಿ, ಅಬ್ದುಲ್ ರಜಾಕ್ ಸಲಾದಹಳ್ಳಿಯವರ ತೊಗರಿ ಬೆಳೆ, ಸಿದ್ರಾಮ ನಾಗೂರ, ಚನ್ನಪ್ಪಗೌಡ ಪಾಟೀಲರ ಉಳ್ಳಾಗಡ್ಡಿ ಬೆಳೆ ಹಾಗೂ ರಿತೇಶ ಪಾಟೀಲ ಅವರಿಗೆ ಸೇರಿದ 36 ಎಕರೆಯಲ್ಲಿಯ ಹೆಸರು ಬೆಳೆ ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗಿವೆ.
ಈಗಾಗಲೇ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿದ್ದಾರೆ. ಬಿತ್ತನೆಗಾಗಿ ರೈತರು ಮಾಡಿದ ಶ್ರಮ ಮತ್ತು ಹಣ ಎರಡು ವ್ಯರ್ಥವಾದ ಬಗ್ಗೆ ರೈತರಲ್ಲಿ ಬೇಸರ ಮೂಡಿಸಿದೆ. ಕೇವಲ ಒಂದು ತಿಂಗಳ ಹಿಂದೆ ಮಳೆ ಬೇಕು ಎಂದು ಹಂಬಲಿಸುತ್ತಿದ್ದ ರೈತ ಸಮುದಾಯಕ್ಕೆ ಪ್ರವಾಹ ಮತ್ತು ನಿರಂತರ ಮಳೆ ನಿರಾಶೆಯನ್ನುಂಟು ಮಾಡಿದೆ.
ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಫಸಲ ಭೀಮಾ ಯೋಜನೆಯಡಿ ವಿಮೆ ಹಣ ತುಂಬಿದ ರೈತರು ಟ್ರೋಲ್ ಫ್ರಿ ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಲು ತಿಳಿಸಲಾಗಿದೆಪ್ರಕಾಶ ಸಿಂದಗಿ ತಹಶೀಲ್ದಾರ್ ದೇವರಹಿಪ್ಪರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.