ADVERTISEMENT

ಬೆಳೆಹಾನಿ: ಪರಿಹಾರ ಪ್ಯಾಕೇಜ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 14:49 IST
Last Updated 5 ಡಿಸೆಂಬರ್ 2021, 14:49 IST
ಪ್ರಕಾಶ ರಾಠೋಡ
ಪ್ರಕಾಶ ರಾಠೋಡ   

ವಿಜಯಪುರ: ಅಕಾಲಿಕ ಮಳೆ ಸುರಿದು ರೈತರಿಗೆ ತೀವ್ರ ನಷ್ಠವಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಗಾರು ಬೆಳೆಗಳು ಕಾಳುಕಟ್ಟುವ ಹಂತದಲ್ಲಿ ಮಳೆಯಾಗದೆ ಬೆಳೆಗಳು ಕಮರಿ ಹೋಗಿವೆ. ಈ ಪರಿಸ್ಥಿತಿ ಪರಿಗಣಿಸಿ ಬರಗಾಲ ಜಿಲ್ಲೆಯಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಭದ್ರಾ ಮೇಲ್ದಂಡೆಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ರಾಷ್ಟ್ರೀಯ ಯೋಜನೆಯಾಗಿ ಅನುಷ್ಠಾನಗೊಳ್ಳಲು ಎಲ್ಲ ರೀತಿಯಿಂದಲೂ ಅರ್ಹವಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪರಿಗಣಿಸದೇ ಮಲತಾಯಿ ಧೋರಣೆ ಅನುಸರಿಸುವ ಮೂಲಕ ಬಿಜೆಪಿ ಸರ್ಕಾರ ವಿಜಯಪುರಕ್ಕೆ ಘೋರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ADVERTISEMENT

ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ ₹ 10 ಸಾವಿರ ಕೋಟಿ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಆದ್ಯತೆ ನೀಡಿತ್ತು. ಎಂ.ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಕೆರೆಗೆ ನೀರು ತುಂಬುವ ಯೋಜನೆ, ನೀರಾವರಿ ಯೋಜನೆಗಳ ಅನುಷ್ಠಾನದ ಮೂಲಕ ಹಸಿರುಕ್ರಾಂತಿಯನ್ನೇ ಮಾಡಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಮಾತ್ರ ಈ ಯೋಜನೆಗಳಿಗೆ ಅನ್ಯಾಯ ಮಾಡಿದೆ ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಅನುಷ್ಠಾನಗೊಂಡರೆ ಕೇಂದ್ರ ಸರ್ಕಾರ, ವಿಶ್ವ ಬ್ಯಾಂಕ್ ಅನುದಾನ ಪಡೆಯಬಹುದು. ಆದರೆ ಇದಕ್ಕೆ ಕೇಂದ್ರ, ರಾಜ್ಯ ಸರ್ಕಾರ ಮನಸ್ಸು ಮಾಡುತ್ತಿಲ್ಲ ಎಂದು ಹೇಳಿದರು.

ಗೆಲುವು ನಮ್ಮದೆ:

ವಿಧಾನ ಪರಿಷತ್‌ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಚಾಂದಸಾಬ ಗಡಗಲಾವ, ಅಶೋಕ ರಾಠೋಡ, ಎಂ.ಎಸ್. ನಾಯಕ, ರಾಜು ಚವ್ಹಾಣ ಭೂತನಾಳ, ವಸಂತ ಹೊನಮೋಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.