ನಾಲತವಾಡ: ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ತಕ್ಷಣ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು, 3 ತಿಂಗಳ ನಿರಂತರ ಮಳೆಯಿಂದ ಬೆಳೆಗಳು ಹಾಳಾಗಿವೆ. ರೈತರು ಬೆಳೆ ಹಾನಿಯ ಸಂಕಷ್ಟದಲ್ಲಿದ್ದಾರೆ. ಶಾಸಕ ನಾಡಗೌಡರು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆಯದೇ ಇದ್ದದ್ದು, ಮತ್ತೊಂದೆಡೆ ರೈತರ ಜಮೀನುಗಳಿಗೆ ಭೇಟಿ ನೀಡದ ಶಾಸಕ ಅಪ್ಪಾಜಿ ನಾಡಗೌಡ ನಡೆ ಕ್ಷೇತ್ರದ ಬಡ ರೈತರ ದುರಂತ ಎಂದು ರಾಜ್ಯ ರೈತ ಬಿಜೆಪಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಕಿಡಿ ಕಾರಿದ್ದಾರೆ.
ಭಾನುವಾರ ನಾಲತವಾಡ ಹೋಬಳಿಯ ವಿವಿಧ ರೈತರ ಹೊಲಗಳಿಗೆ ಬಿಜೆಪಿ ಗಣ್ಯರೊಂದಿಗೆ ವಿಕ್ಷಣೆ ಮಾಡಿ ನಂತರ ಪತ್ರಿಕಾಗೋಷ್ಟೀಯಲ್ಲಿ ಮಾನಾಡಿದ ಅವರು, ತೊಗರಿ, ಸಜ್ಜೆ, ಮೆಕ್ಕೆ, ಹತ್ತಿ ಸೇರಿ ಮಳೆಗೆ ಹಾಳಾದ ನಾನಾ ಬೆಳೆಗಳ ಪರೀಶೀಲನೆ ನಡೆಸಿದರು.
ರೈತ ವಿರೋಧಿ ಕಾಂಗ್ರೇಸ್ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡಿದರೆ ಬಾರಕೋಲಿನಿಂದ ಚಾಟಿ ಬೀಸುವ ಹೋರಾಟ ಮಾಡುವ ಪ್ಲಾನ್ ಮಾಡಿದ್ದೇವೆ. ತಾಲ್ಲೂಕಿನಲ್ಲಿ 1.24 ಲಕ್ಷ ಹೆಕ್ಟರ್ ಬಿತ್ತನೆಯಾಗಿದೆ. 80ರಷ್ಟು ಬೆಳೆ ಹಾನಿಯಾಗಿದೆ. 2019ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರತಿ ಹೆಕ್ಟರ್ ಖುಷ್ಕಿಗೆ ₹16800, ನೀರಾವರಿಗೆ ₹23500 ಪರಿಹಾರ ಕೊಟ್ಟಿದ್ದೇವೆ. ತೋಟಗಾರಿಕೆ ಬೆಳೆಗೆ ₹28000 ನೀಡಿದ್ದೇವೆ. ಮನೆಗಳಿಗೆ 80 ರಷ್ಟು ಹಾನಿಯಾಗಿದ್ದರೆ ₹5 ಲಕ್ಷ ನೀಡಿದ್ದೇವೆ ಎಂದರು. ಹೀಗಾಗಿ ಶೀಘ್ರವೇ ಕಾಂಗ್ರೇಸ್ ಸರ್ಕಾರ ಪ್ರತಿ ಎಕರೆಗೆ 25 ಸಾವೀರ ಕೊಡಬೇಕು ಎಂದರು.
ತರಾಟೆಗೆ: ಮಂತ್ರಿಗಳು, ಶಾಸಕರು ಬರೀ ವೈಮಾನಿಕ ಸಮೀಕ್ಷೆ ನಡೆಸಿದರೆ ರೈತರ ಕಷ್ಟ ಅರಿವಾಗುವುದಿಲ್ಲ. ಜಮೀನುಗಳಿಗೆ ಭೇಟಿ ನೀಡಬೇಕು ಅಂದಾಗ ಮಾತ್ರ ವಾಸ್ತವ ಸ್ಥಿತಿ ಗೊತ್ತಾಗುತ್ತದೆ, ಸ್ಥಳೀಯ ಶಾಸಕ ನಾಡಗೌಡ ಅವರೇ, ಮನೆಯಿಂದ ಹೊರ ಬಂದು ಪ್ರತಿ ಜಮೀನುಗಳಿಗೆ ಭೇಟಿರಿ ನೀಡಿ. ಜನ ನಿಮ್ಮನ್ನು ನಂಬಿ ಆಯ್ಕೆ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಸತ್ತವರಿಗೆ ಬಾರದ ಪರಿಹಾರ: ನಾಗಬೇನಾಳ ಗ್ರಾಮಕ್ಕೆ ಭೇಟಿ ನೀಡಿದ ಅವರು ಕಳೆದ 1 ತಿಂಗಳಿಂದ ನಾಗಬೇನಾಳದ ರೈತರ ಸುಮಾರು 18 ಕುರಿಗಳು ಸತ್ತು ತಿಂಗಳು ಕಳೆದಿವೆ. ಆದರೆ, ಶಾಸಕರು ಗಮನ ಹರಿಸುತ್ತಿಲ್ಲ, ಕಂದಾಯ ಇಲಾಖೆಯವರು ಸತ್ತ ಕುರಿಗಳಿಗೆ ಪರಿಹಾರ ಇಲ್ಲ ಎಂದು ಪತ್ರ ನೀಡಿದ್ದಾರೆ. ಇದೆಂತಾ ಆಡಳಿತ ಎಂದು ಕಿಡಿ ಕಾರಿದ ನಡಹಳ್ಳಿ ಅವರು ಕುಂಚಗನೂರಿನಲ್ಲಿ ಮೊಸಳೆಗೆ ಬಲಿಯಾದ ವ್ಯಕ್ತಿಗೆ 20 ಲಕ್ಷ ಪರಿಹಾರದ ಆದೇಶ ನೀಡಿದ್ದಾರೆ. ಅದು ನನ್ನ ಹೋರಾಟದ ಫಲ ಎಂದರು. ಅವರು ತಾಲ್ಲೂಕಿನಲ್ಲಿ ಜನರ ಕಡಗಣನೆ ಕಂಡು ಬಂದರೆ ನನ್ನ ಹೋರಾಟ ನಿರಂತರ ಎಂದು ಎಚ್ಚರಿಸಿದರು.
ಜನ್ಮದಿನ ಆಚರಿಸಿಕೊಂಡ ಶಾಸಕರ ಪುತ್ರಿ: ಬಿಜೆಪಿ ಧುರಿಣ ಜಿ.ಪಂ ಮಾಜಿ ಅಧ್ಯಕ್ಷರಾದ ಮುನ್ನಾಧಣಿ ನಾಡಗೌಡ ಮಾತನಾಡಿ, ರೈತರು ಬೆಳೆ ಹಾನಿಯಿಂದ ಸಂಕಷ್ಟದಲ್ಲಿದ್ದಾರೆ. ಶಾಸಕರ ಪುತ್ರಿಯೊಬ್ಬರು ತಮ್ಮ ಹುಟ್ಟು ಹಬ್ಬದ ಸಂಭ್ರಮದಲ್ಲಿರುವುದು ನ್ಯಾಯವೇ? ಕನಿಷ್ಠ ಶಾಸಕರ ಬದಲಿಗೆ ಪುತ್ರಿಯಾದರೂ ರೈತರ ಜಮೀನುಗಳಿಗೆ ಭೇಟಿ ನೀಡಿ ರೈತರ ಸಂಕಷ್ಟ ಆಲಿಸಬಹುದಿತ್ತು ಬರೀ ಕಾರ್ಯಕ್ರಮಗಳನ್ನು ನಡೆಸಿ ಸಾಮಾಜೀಕ ಜಾಲ ತಾಣದಲ್ಲಿ ಮಿಂಚುವ ಕೆಲಸ ಕೈಬಿಡಿ ಎಂದು ಕಿಡಿ ಕಾರಿದರು.
ಈ ವೇಳೆ ಜಿ.ಪಂ ಮಾಜಿ ಉಪಾಧ್ಯಕ್ಷರಾದ ಕೆ.ಆರ್.ಬಿರಾದಾರ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಶಶಿ ಬಂಗಾರಿ,ಗಿರೀಶಗೌಡ ಮುರಾಳ ಪಾಟೀಲ ಮಾತನಾಡಿದರು.
ಜಗದೀಶ ಪಂಪಣ್ಣವರ, ಸಂಜು ಬಾಗೇವಾಡಿ, ಸಂಗಮೇಶ ಗುಂಡಕನಾಳ, ಸಂಗಣ್ಣಗೌಡ ಕುಳಗೇರಿ, ಬಾಬುಗೌಡ ಪಾಟೀಲ,ಈರಣ್ಣ ಮುದ್ನೂರ,ರಾಮನಗೌಡ ಹಂಪನಗೌಡ್ರ, ಚಂದ್ರು ಹಂಪನಗೌಡ್ರ, ವೀರೇಶ ಚಲವಾದಿ,ಸಂಗಮೇಶ ಮೇಟಿ, ಚಂದ್ರು ಗಂಗನಗೌಡ್ರ, ಮುದಕಣ್ಣ ಗಂಗನಗೌಡ್ರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.