ADVERTISEMENT

ಶಿಕ್ಷಕನಿಂದ ದಲಿತ ವಿದ್ಯಾರ್ಥಿ ಹತ್ಯೆ: ಆಕ್ರೋಶ

ದಲಿತ ವಿದ್ಯಾರ್ಥಿ ಪರಿಷತ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 11:02 IST
Last Updated 19 ಆಗಸ್ಟ್ 2022, 11:02 IST
ರಾಜಸ್ಥಾನದಲ್ಲಿ ನಡೆದ ದಲಿತ ವಿದ್ಯಾರ್ಥಿ ಅಮಾನವೀಯ ಹತ್ಯೆ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ಮನವಿ ಸಲ್ಲಿಸಲಾಯಿತು
ರಾಜಸ್ಥಾನದಲ್ಲಿ ನಡೆದ ದಲಿತ ವಿದ್ಯಾರ್ಥಿ ಅಮಾನವೀಯ ಹತ್ಯೆ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರಿಗೆ ಮನವಿ ಸಲ್ಲಿಸಲಾಯಿತು   

ವಿಜಯಪುರ: ರಾಜಸ್ಥಾನದ ಜಲೋರ್ ಜಿಲ್ಲೆಯಲ್ಲಿ ನಡೆದ ದಲಿತ ವಿದ್ಯಾರ್ಥಿ ಅಮಾನವೀಯ ಹತ್ಯೆ ಖಂಡಿಸಿ, ಆರೋಪಿ ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಅಜಮನಿ ಮಾತನಾಡಿ, ಭಾರತವು ಸ್ವತಂತ್ರವಾಗಿ 75 ವರ್ಷವಾದ ಈ ಸಂಧರ್ಭದಲ್ಲಿ ಅಮೃತ ಮಹೋತ್ಸವವನ್ನು ಆಚರಿಸುತ್ತದೆ. ಆದರೆ, ಇಂತಹ ಸಂದರ್ಭದಲ್ಲಿ ಇಡೀ ದೇಶದ ಮಾನವ ಕುಲವೇ ತಲೆತಗ್ಗಿಸುವಂತಹ, ನಾಚಿಕೆ ಪಡುವಂತಹ ಅಮಾನವೀಯ ಕೃತ್ಯ ರಾಜಸ್ಥಾನದಲ್ಲಿ ನಡೆದಿರುವುದು ತೀವ್ರ ಖಂಡನೀಯ ಎಂದರು.

ರಾಜಸ್ಥಾನದ ಜಲೋರ್‌ ಜಿಲ್ಲೆಯ ಸರಸ್ವತಿ ವಿದ್ಯಾಮಂದಿರದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಇಂದ್ರಕುಮಾರ್ ಅವರನ್ನು ಅಲ್ಲಿನ ಜಾತಿವಾದಿ ಶಿಕ್ಷಕ ತನಗೆ ಮೀಸಲಿರಿಸಿದ ಮಣ್ಣಿನ ನೀರಿನ ಮಡಿಕೆಯನ್ನು ಮುಟ್ಟಿದ ಎನ್ನುವ ಕಾರಣಕ್ಕೆ ದಲಿತ ವಿದ್ಯಾರ್ಥಿಗೆ ಮನುವಾದಿ ಶಿಕ್ಷಕ ಮಗುವಿಗೆ ಸಾಯುವ ರೀತಿಯಲ್ಲಿ ಥಳಿಸಿದ್ದಾನೆ. ಶಿಕ್ಷಕನಿಂದ ಹಲ್ಲೆಗೊಳಗಾದ ವಿದ್ಯಾರ್ಥಿಯು ಕಿವಿಯಲ್ಲಿ ರಕ್ತಸ್ರಾವವಾಗುತ್ತಿತ್ತು, ಕಣ್ಣುಗಳು ತುಂಬಾ ಗಾಯವಾಗಿ ಉದುಕೊಂಡಿದ್ದವು, ದೇಹವನ್ನು ಮತ್ತೊಂದು ಮಗ್ಗುಲಿಗೆ ಬದಲಿಸಲು ಸಾಧ್ಯವಾಗುತ್ತಿರಲಿಲ್ಲ. ಚಿಕಿತ್ಸೆ ಫಲಿಸದೇವಿದ್ಯಾರ್ಥಿ ಮೃತಪಟ್ಟಿದ್ದಾರೆ. ಇದು ಅತ್ಯಂತ ನಾಚಿಕೆ ಮಾಡುವ ಸಂಗತಿ ಎಂದರು.

ADVERTISEMENT

ದೇಶವು ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ, ದಲಿತರು ಮತ್ತು ಇತರ ವಂಚಿತ ವರ್ಗಗಳ ಮೇಲಿನ ದೌರ್ಜನ್ಯಗಳು ಮುಂದುವರಿದಿವೆ. ದಲಿತರು ಕೊಡ ಮುಟ್ಟಿದರೆ ಕೊಲ್ಲುತ್ತಾರೆ, ದಲಿತರು ಮದುವೆಯಲ್ಲಿ ಕುದುರೆ ಸವಾರಿ ನಡೆಸಿದರೆ, ಮೀಸೆ ಬಿಟ್ಟರೆ ಕೊಲ್ಲುತ್ತಾರೆ. ಪ್ರಕರಣ ದಾಖಲಿಸಿದರೂ ಪೊಲೀಸರು ಬಿ ರಿಪೋರ್ಟ್ ಹಾಕಿ ಕೇಸು ಮುಚ್ಚಿ ಹಾಕುತ್ತಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಕೆಲವು ವರ್ಷಗಳಿಂದ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಆದರೆ. ಇಂತಹ ಪ್ರಕರಣಗಳನ್ನು ತಡೆಯಲು ಯಾವುದೇ ಸರ್ಕಾರದಿಂದಲೂ ಸಾಧ್ಯವಾಗುತ್ತಿಲ್ಲ, ಹೇಳಿಕೆಗಳು ಕೇವಲ ಚುನಾವಣೆಗೆ ಸೀಮಿತವಾಗಿವೆ ಎಂದು ದೂರಿದರು.

ಜಿಲ್ಲಾ ಮುಖಂಡರಾದ ಆನಂದ ಮೂದುರ, ದರ್ಶನ್ ಸಾಲೋಟಗಿ, ಈಶ್ವರ ಯಂಟಮನ, ಸುರೇಶ ರಾಠೋಡ, ಆಕಾಶ ದೊಡಮನಿ, ಸಂಗಮೇಶ, ಪ್ರವೀಣ್, ಭೀಮಾಶಂಕರ, ಸತೀಶ್ ಅಂಜುಟಗಿ, ಋತಿಕೇಶ್, ಪ್ರಭು, ಕಾಶಿನಾಥ್ ಕಟ್ಟಿಮನಿ ಇದ್ದರು.

***

ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿ ಹತ್ಯೆಯಂತಹ ಕೃತ್ಯ ಮರುಕಳಿಸದಂತೆ ತಡೆಯಲು ಈಗಾಗಲೇ ಪೊಲೀಸರ ಬಂಧನದಲ್ಲಿರುವ ಮನುವಾದಿ ಶಿಕ್ಷಕನಿಗೆ ಕಠಿಣ ಶಿಕ್ಷೆ ನೀಡಲು ಕ್ರಮಕೈಗೊಳ್ಳಬೇಕು

–ಅಕ್ಷಯ್ ಕುಮಾರ್ ಅಜಮನಿ, ಮುಖಂಡ, ದಲಿತ ವಿದ್ಯಾರ್ಥಿ ಪರಿಷತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.