ADVERTISEMENT

ದಲಿತ ಮಹಿಳೆಯರಿಗೆ ಅವಮಾನ: ಯತ್ನಾಳ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:11 IST
Last Updated 18 ಸೆಪ್ಟೆಂಬರ್ 2025, 5:11 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ನಾಡಹಬ್ಬ ದಸರಾದಲ್ಲಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲು ಕೇವಲ ಬಾನು ಮುಷ್ತಾಕ್‌ ಅವರಿಗೆ  ಮಾತ್ರವಲ್ಲ, ಯಾವ ದಲಿತ ಮಹಿಳೆಯರಿಗೂ ಅವಕಾಶವಿಲ್ಲ’ ಎಂದು ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಸರ್ಕಾರ ಕಾನೂನು ಕ್ರಮಕೈಗೊಳ್ಳಬೇಕು ಎಂದು ದಲಿತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಶ್ರೀನಾಥ ಎಸ್. ಪೂಜಾರಿ ಆಗ್ರಹಿಸಿದ್ದಾರೆ.

ಯತ್ನಾಳ ಅವರ ಹೇಳಿಕೆ ಜಾತಿ ನಿಂಧನೆಯಾಗಿದೆ. ಯಾವ ಕಾನೂನಿನ ಭಯವೂ ಇಲ್ಲದೆ ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಿಸುವ ಇಂಥ ಸಂವಿಧಾನ ವಿರೋಧಿ, ಜಾತಿರೋಗಿಯ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಕ್ಷಮೆಯಾಚನೆಗೆ ಆಗ್ರಹ:

ಶಾಸಕ ಯತ್ನಾಳ ಅವರು ದಲಿತ ಮಹಿಳೆಯರನ್ನು ಅವಮಾನಿಸಿದ್ದಾರೆ. ಅಸ್ಪೃಶ್ಯತೆಯನ್ನು ಪುನರುಚ್ಚರಿಸಿ ಅವಮಾನಗೊಳಿಸಿರುವುದು ಖಂಡನೀಯ. ಯತ್ನಾಳರು ತಮ್ಮ ಹೇಳಿಕೆಯನ್ನು ವಾಪಸು ಪಡೆದು ದಲಿತರ ಕ್ಷಮೆಯಾಚಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ  ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ ಆಗ್ರಹಿಸಿದ್ದಾರೆ.

ADVERTISEMENT

ಮನುಸ್ಮೃತಿ ಮನಸ್ಥಿತಿಯುಳ್ಳ ಯತ್ನಾಳ ಜನಪ್ರತಿನಿಧಿಯಾಲು ಯೋಗ್ಯರಲ್ಲ. ದಲಿತರ ಬಗ್ಗೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಮಾತನಾಡಿರುವುದು ಖಂಡನಾರ್ಹ, ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿ, ಕ್ರಮಕೈಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರತಿಭಟನೆ ಇಂದು:

ಶಾಸಕ ಯತ್ನಾಳ ಅವರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದಿಂದ ಸೆ.18ರಂದು ಬೆಳಿಗ್ಗೆ 11.30ಕ್ಕೆ ನಗರದಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ವಿಭಾಗದ ಜಿಲ್ಲಾ ಘಟಕದ  ಅಧ್ಯಕ್ಷ ರಮೇಶ್ ಗುಬ್ಬೇವಾಡ ತಿಳಿಸಿದ್ದಾರೆ. 

ಹೇಳಿಕೆ ತಿರುಚಲಾಗಿದೆ:

‘ಸಾಮಾನ್ಯ ದಲಿತ ಮಹಿಳೆಯರಿಗೂ ದಸರಾ ಉದ್ಘಾಟನೆ ಮಾಡುವ ಹಕ್ಕಿದೆ. ಆದರೆ, ಭಾನು ಮುಸ್ತಾಕ್ ಅವರಿಗೆ ಆ ಹಕ್ಕಿಲ್ಲವೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ಆದರೆ, ಅವರ ಹೇಳಿಕೆಯನ್ನು ತಿರುಚಿ ಕೆಲವರು ತೆಜೋವಧೆ ಮಾಡುತ್ತಿದ್ದಾರೆ’ ಎಂದು ಶಾಸಕ ಯತ್ನಾಳ ಪರ ಕೆಲ ದಲಿತ ಮುಖಂಡರು ಆರೋಪಿಸಿದ್ದಾರೆ.

‘ಕೆಲವು ಅತೃಪ್ತ ಆತ್ಮಗಳು ನಮ್ಮ ನಾಯಕರನ್ನು ಕುಗ್ಗಿಸಲು ಇಂತಹ ಕೀಳು ಮಟ್ಟಕ್ಕೆ ಇಳಿದಿದ್ದು, ಯತ್ನಾಳರು ಇಡೀ ಹಿಂದೂ ಧರ್ಮದ ನಾಯಕರಾಗಿದ್ದಾರೆ. ಅವರೊಂದಿಗೆ ಸಾವಿರಾರು ದಲಿತರಿದ್ದು, ಸುಳ್ಳು ಸುದ್ದಿಗೆ ಯಾರು ಕಿವಿಗೊಡಬಾರದು ಎಂದು ದಲಿತ ಮುಖಂಡರಾದ ಜವಾಹರ ಗೋಸಾವಿ ವಿಠ್ಠಲ, ದಾದಾಸಾಹೇಬ ಬಾಗಾಯತ, ಮಡಿವಾಳ ಯಾಳವಾರ ಮತ್ತಿತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.