ADVERTISEMENT

ಗುಂಡಿ ಬಿದ್ದ ರಸ್ತೆ ದುರಸ್ತಿಗೆ ಡಿಸಿ ಸೂಚನೆ

ವಿಜಯಪುರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 10:56 IST
Last Updated 6 ಅಕ್ಟೋಬರ್ 2020, 10:56 IST
ವಿಜಯಪುರದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಮಾತನಾಡಿದರು
ವಿಜಯಪುರದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಮಾತನಾಡಿದರು   

ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲ್‌ ಕುಮಾರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು. ಯಾವುದೇ ರೀತಿಯ ಅಪಘಾತ, ಸಾವು ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ADVERTISEMENT

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ಈಗಾಗಲೇ ಕರಡು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ.ಈ ಕ್ರಿಯಾ ಯೋಜನೆಯನ್ವಯ ರಸ್ತೆ ಸುಧಾರಣೆ ಮತ್ತು ಸಾಧನ ಸಲಕರಣೆಗಳ ಅಳವಡಿಕೆಗೆ ಪ್ರಾದೇಶಿಕ ಸಾರಿಗೆ ಕೇಂದ್ರ ಕಚೇರಿಯಿಂದ ಅನುದಾನ ಲಭ್ಯವಾಗಲಿದೆ ಎಂದರು.

ಪೊಲೀಸ್ ಇಲಾಖೆ ಮೂಲಕ ರಸ್ತೆ ಸುರಕ್ಷತೆಗೆ ಸಂಬಂಧಪಟ್ಟಂತೆ ರಸ್ತೆ ಸಾಧನ ಸಲಕರಣೆಗಳ ಖರ್ಚು-ವೆಚ್ಚ ವರದಿ ಪಡೆಯಬೇಕು, ಮಹಾನಗರ ಪಾಲಿಕೆಯೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸುವಂತೆ ಪ್ರ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಗೋದಾವರಿ ಹೋಟೆಲ್‍ನಿಂದ ಇಟಗಿ ಪೆಟ್ರೋಲ್ ಪಂಪ್, ಅಲ್ ಅಮೀನ್ ಮತ್ತು ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ವರೆಗಿನ ಚತುಷ್ಪಥ ರಸ್ತೆಯನ್ನು ಮಳೆಗಾಲ ಮುಗಿಯುವ ವರೆಗೆ ತಾತ್ಕಾಲಿಕವಾಗಿ ತಗ್ಗು-ಗುಂಡಿಗಳನ್ನು ಮುಚ್ಚಿ ಸರಿಪಡಿಸಬೇಕು. ರಸ್ತೆ ಮೇಲಿನ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಕನಕದಾಸ ವೃತ್ತದಿಂದ ಕಾಮತ್ ಹೋಟೆಲ್ ವರೆಗಿನ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ಸುರಕ್ಷತೆಯ ಹಿನ್ನೆಲೆಯಲ್ಲಿ ಕರೆಯಲಾಗಿರುವ ಈ ಸಭೆಗೆ ಗೈರು ಹಾಜರಾದ ಕಲಬುರ್ಗಿ ಹಾಗೂ ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಪಡೆಯುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಐದು ವೃತ್ತಗಳಾದ ಇಟಗಿ ಪೆಟ್ರೋಲ್‌ ಪಂಪ್ ವೃತ್ತ, ವಲ್ಲಭಬಾಯಿ‌‌ ವೃತ್ತ, ತಿಕೋಟಾ ವೃತ್ತ, ಸಿಂದಗಿ ವೈ ಜಂಕ್ಷನ್, ಬಬಲೇಶ್ವರ ವೈ ಜಂಕ್ಷನ್ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯಿಂದ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ತಿಳಿಸಿದರು.

ಈ ಕುರಿತು ಟ್ರಾಫಿಕ್ ಪೊಲೀಸ್‌ ಮತ್ತು ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಳ್ಳಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.