
ವಿಜಯಪುರ: ವಿಜಯಪುರ ನಗರದ ಸೌಂದರ್ಯಿಕರಣಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.
ನಗರದ ಜನತಾ ಬಜಾರ್, ಎಂ.ಆರ್.ಹೋಟೆಲ್ ಹತ್ತಿರ, ಕೆ.ಎಸ್.ಆರ್.ಟಿ.ಸಿ. ಡಿಪೋ ಪಕ್ಕ, ಪ್ರವಾಸೋದ್ಯಮ ಮಂದಿರದ ಹಿಂದೆ, ಸೈನಿಕ ಶಾಲೆ ಜಿಮ್‍ಖಾನಾ ಕ್ಲಬ್ ಹಿಂದೆ ಹಾಗೂ ಆಹಾರ ಮಾರಾಟಕ್ಕೆ ಇಂಡಿ ರೋಡ್ ಕ್ರೀಡಾಂಗಣದ ಹತ್ತಿರ ಗುರುತಿಸಲಾಗಿರುವ ವೆಂಡಿಂಗ್ ಜೋನ್ ಜಾಗಗಳಿಗೆ ಭೇಟಿ ನೀಡಿ ಅವರು ಪರೀಶಿಲನೆ ನಡೆಸಿದರು.
ಬೀದಿ-ಬದಿ ವ್ಯಾಪಾರಿಗಳು ನಿಗದಿತ ಸ್ಥಳಗಳಲ್ಲಿ ವ್ಯವಸ್ಥಿತ ಹಾಗೂ ಶಿಸ್ತುಬದ್ಧ ವ್ಯಾಪಾರ ಮಾಡುವುದು ಮತ್ತು ಎಲ್ಲೆಂದರಲ್ಲಿ ಕಸ ಚೆಲ್ಲದೇ ಕಸದ ಡಬ್ಬಿಯಲ್ಲಿ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಣೆ ವಾಹನಕ್ಕೆ ನೀಡುವ ಮೂಲಕ ನಗರದ ಸೌಂದರ್ಯಿಕರಣಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದರು.
ವಿಜಯಪುರ ನಗರದಲ್ಲಿ ವಾಹನ ನಿಲುಗಡೆ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಪರಿಹಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ಮಹಾನಗರ ಪಾಲಿಕೆಯ ವಾಣಿಜ್ಯ ಪ್ರದೇಶಗಳಲ್ಲಿ ಕಸವನ್ನು ಸಂಗ್ರಹಿಸುವ ಕಾರ್ಯ ಪ್ರಗತಿಯಲ್ಲಿದ್ದು, ಸಾರ್ವಜನಿಕರು, ಉದ್ದಿಮೆದಾರರು ಕಸವನ್ನು ರಸ್ತೆಯ ಮೇಲೆ ಎಸೆಯದೇ ಕಸ ಸಂಗ್ರಹಿಸಿ ತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ನೀಡಬೇಕು. ಎಲ್ಲಾ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರು ಕಡ್ಡಾಯವಾಗಿ ಉದ್ದಿಮೆ ಪರವಾನಗಿಯನ್ನು ಪಡೆಯಬೇಕು ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಶಿಸ್ತುಬದ್ಧ ವ್ಯಾಪಾರಕ್ಕೆ ಸೂಚನೆ ಎಲ್ಲೆಂದರಲ್ಲಿ ಕಸ ಚೆಲ್ಲದಿರೆ ಕ್ರಮ ವಾಹನ ನಿಲುಗಡೆಗೆ ಶೀಘ್ರ ಸೂಕ್ತ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.