ವಿಜಯಪುರ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕುಲಪತಿ ಹುದ್ದೆಯನ್ನು ಪಡೆದಿರುವ ಗಂಭೀರ ಆರೋಪ ಹೊತ್ತಿರುವ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಗರದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ವಿಶ್ವವಿದ್ಯಾಲಯದ ಕುಲ ಸಚಿವರು ಹಾಗೂ ಎಲ್ಲ ಸೀಡಿಕೇಡ್ ಸದಸ್ಯರಿಗೆ ಮನವಿ ನೀಡಿದರು.
ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಶ್ರೀನಾಥ ಪೂಜಾರಿ ಮಾತನಾಡಿ, ಪ್ರೊ.ಸಿ.ಎಂ. ತ್ಯಾಗರಾಜ ಅವರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಿ ನೇಮಕಗೊಳ್ಳವ ಮುನ್ನ 2007 ರಲ್ಲಿ ತಮ್ಮ ಉಪನ್ಯಾಸಕ ಹುದ್ದೆಗೆ ಸ್ವಯಂ ನಿವೃತ್ತಿ ನೀಡಿರುತ್ತಾರೆ. ಸರ್ಕಾರ ಇದನ್ನು ಒಪ್ಪಿದೆ. ಇಷ್ಟಾದರೂ ಅವರಿಗೆ ಪುನಃ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಆಯ್ಕೆ ಮಾಡಿದ್ದು ತಪ್ಪು. ಈಗಾಗಲೇ ಕುಲಪತಿಗಳ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿವೆ, ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕರಾಗಲು ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಸರ್ಕಾರದ ಕಣ್ಣಿಗೆ ಮಣ್ಣು ಎರೆಚಿ ಕುಲಪತಿ ಹುದ್ದೆಯನ್ನು ಪಡೆದಿದ್ದಾರೆ. ಇವರ ವಿರುದ್ಧ ಸೀಡಿಕೇಡ್ ಸದಸ್ಯರು ನಿರ್ಣಯ ಕೈಗೊಂಡು, ಅವರನ್ನು ಕೂಡಲೇ ಅಮಾನತು ಮಾಡಲು ಸರ್ಕಾರಕ್ಕೆ ಮತ್ತು ರಾಜ್ಯಪಾಲಕರಿಗೆ ಆಗ್ರಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಬಾಲಾಜಿ ಕಾಂಬಳೆ, ಜಿಲ್ಲಾ ಸಂಚಾಲಕ ಅಕ್ಷಯಕುಮಾರ, ಬೆಳಗಾವಿ ಜಿಲ್ಲಾ ಸಂಚಾಲಕ ಆದರ್ಶ ಗಸ್ತಿ, ಜಿಲ್ಲಾ ಸಹ ಸಂಚಾಲಕ ಮಹಾದೇವ ಚಲವಾದಿ, ವಿಜಯಲಕ್ಷ್ಮಿ ಮುರಗನೂರ, ಪ್ರತಾಪ್, ಪ್ರಜ್ವಲ್, ರಾಜು, ಮುತ್ತು ಪೂಜಾರಿ, ಶಂಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.