ADVERTISEMENT

ವಿಜಯಪುರ | 'ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹ'

ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:26 IST
Last Updated 15 ಮೇ 2024, 14:26 IST
ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು
ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಮನವಿ ಸಲ್ಲಿಸಿದರು   

ವಿಜಯಪುರ: ‘ಲೈಂಗಿಕ ಹಗರಣದಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಲ್ಲಿದ್ದರೂ ಕರೆತಂದು ಬಂಧಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರ ಈ ಪ್ರಕರಣದಲ್ಲಿ ಪ್ರಜ್ವಲ್‌ ರಕ್ಷಣೆಗೆ ಮುಂದಾಗಿರುವುದು ಖಂಡನೀಯ ಎಂದರು.

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿದ್ಯಾವತಿ ಅಂಕಲಗಿ ಮಾತನಾಡಿ, ‘ಪ್ರಜ್ವಲ್ ರೇವಣ್ಣ ಪ್ರಕರಣವನ್ನು ರಾಜ್ಯ ಸರ್ಕಾರವು ಎಸ್.ಐ.ಟಿ.ಗೆ ವಹಿಸಿದ್ದು ಸರಿಯಾಗಿದೆ.  ಎಸ್.ಐ.ಟಿ. ಯಾವುದೇ ಒತ್ತಡಕ್ಕೆ ಒಳಗಾಗದೇ ನ್ಯಾಯಯುತ ತನಿಖೆ ನಡೆಸಲಿದೆ ಎಂಬ ವಿಶ್ವಾಸ, ಭರವಸೆ ಇದೆ. ಕರ್ನಾಟಕದ ಪೊಲೀಸರು ದಕ್ಷರಿದ್ದು, ಈಗಾಗಲೇ ಛಾಪಾ ಕಾಗದ ಪ್ರಕರಣ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣವನ್ನು ಭೇದಿಸಿದ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದರು. 

ADVERTISEMENT

ನಾಗಠಾಣ ಶಾಸಕ ವಿಠ್ಠಲ ಕತಕಧೋಂಡ ಮಾತನಾಡಿ, ‘ಪ್ರಜ್ವಲ್ ರೇವಣ್ಣ  ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಿಗೆ ಸೂಕ್ತ ರಕ್ಷಣೆಗಾಗಿ ವಿಶೇಷ ವ್ಯವಸ್ಥೆ ಹಾಗೂ ತುರ್ತಾಗಿ ಭರವಸೆಯ ಅವಶ್ಯಕತೆ ಇದೆ. ಈ ಪ್ರಕರಣವು ಒಂದು ಗಂಭೀರ ಸ್ವರೂಪದ್ದಾಗಿದ್ದು, ನಾಡಿನ ಜನತೆ ತಲೆತಗ್ಗಿಸುವಂತಹ ಹಾಗೂ ನಾಚಿಕೆಗೇಡಿನ ವಿಷಯವಾಗಿದೆ’ ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್‌ ಪ್ರಮುಖರಾದ ಮಹಾದೇವಿ ಗೋಕಾಕ, ಭಾರತಿ ಹೊಸಮನಿ, ಮಂಜುಳಾ ಗಾಯಕವಾಡ, ಆಸ್ಮಾ ಕಾಲೇಬಾಗ, ಹಮೀದಾ ಪಟೇಲ, ಮುಸ್ಕಾನ ಶಿವಣಗಿ, ಅಂಬಿಕಾ ಪಾಟೀಲ, ಶರಣಮ್ಮ ನಾಯಕ, ಜ್ಯೋತಿ ಗುಡಿಮನಿ, ಲಲಿತಾ ನಾಯಕ, ಭಾಗೀರಥಿ ನಾಗರಹಳ್ಳಿ, ಕಾಶಿಬಾಯಿ ಹಡಪದ, ಗಂಗವ್ವ ಕಣಮುಚನಾಳ, ಸುಮಿತ್ರಾ ಹನೂರ, ಶಶಿಕಲಾ ಮಣೂರ, ಶಾರದಾ ಬೆಟಗೇರಿ, ಅಶ್ವಿನಿ ಪಾತ್ರೋಟಿ, ಶಮೀಮಾ ಅಕ್ಕಲಕೋಟ, ಸಂಜನಾ ಭಜಂತ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.