ADVERTISEMENT

ವಿಜಯಪುರ: ಕುಖ್ಯಾತ ಅಂತರರಾಜ್ಯ ಕಳ್ಳರ ಬಂಧನ

ಮನೆ, ಎಟಿಎಂ, ಬಂಗಾರದ ಅಂಗಡಿ ಕಳವು; ₹ 21.20 ಲಕ್ಷ ಕಿಮ್ಮತ್ತಿನ ವಸ್ತುಗಳು ವಶ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 12:55 IST
Last Updated 9 ಸೆಪ್ಟೆಂಬರ್ 2021, 12:55 IST
ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿರುವ ಕುಖ್ಯಾತ ಅಂತರರಾಜ್ಯ ಕಳ್ಳರು ಹಾಗೂ ವಶಪಡಿಸಿಕೊಂಡಿರುವ ಚಿನ್ನಾಭರಣ –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿರುವ ಕುಖ್ಯಾತ ಅಂತರರಾಜ್ಯ ಕಳ್ಳರು ಹಾಗೂ ವಶಪಡಿಸಿಕೊಂಡಿರುವ ಚಿನ್ನಾಭರಣ –ಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಕಲಬುರ್ಗಿ ಹಾಗೂ ನೆರೆಯ ಮಹಾರಾಷ್ಟ್ರದ ಸೋಲಾಪುರ, ಕೊಲ್ಹಾಪುರ, ಸಾಂಗಲಿ, ಮೀರಜ್‌ ಜಿಲ್ಲೆಗಳಲ್ಲಿ ಮನೆ, ಎಟಿಎಂ, ಬಂಗಾರದ ಅಂಗಡಿ ಕಳವು ಮಾಡುತ್ತಿದ್ದ ಕುಖ್ಯಾತ ಕಳ್ಳರ ಗ್ಯಾಂಗ್‌ ಅನ್ನು ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌, ಏಳು ಜನ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರಿಂದ ಒಟ್ಟು 11 ಪ್ರಕರಣಗಳಿಗೆ ಸಂಬಂಧಿಸಿದಂತೆ₹16.02 ಲಕ್ಷ ಮೌಲ್ಯದ 356 ಗ್ರಾಂ ಬಂಗಾರದ ಆಭರಣ ₹8 ಸಾವಿರ ಮೌಲ್ಯದ 200 ಗ್ರಾಂ ಬೆಳ್ಳಿಯ ಆಭರಣ, ₹10 ಸಾವಿರ ಮೌಲ್ಯದವಿವೊ ಮೊಬೈಲ್, ₹5ಲಕ್ಷ ಮೌಲ್ಯದ ಬೊಲೇರೊ ಪಿಕ್-ಅಪ್ ವಾಹನ ಸೇರಿದಂತೆ ಒಟ್ಟು ₹21.20 ಲಕ್ಷ ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದರು.

ಸೊಲಾಪೂರ ಜಿಲ್ಲೆಯ ಅಕ್ಕಲಕೋಟ ಪಟ್ಟಣದ ರಮೇಶ ಕಾಳೆ (56) ಮತ್ತು ಗಂಗಾರಾಮ ಚವ್ಹಾಣ(25) ಹಾಗೂ ವಿಜಯಪುರ ನಗರದಹರಣಶಿಕಾರಿ ಕಾಲೊನಿಯ ಪರಶುರಾಮ ಕಾಳೆ(22), ದೇವದಾಸ ಚವ್ಹಾಣ(40), ವಿಜಯಪುರದ ಕಸ್ತೂರಿ ಕಾಲೊನಿಯ ಕಿರಣ ಬೇಡೆಕರ(28),ವಿಜಯಪುರದ ರಂಗಿನ ಮಸೀದಿ ಹತ್ತಿರದ ನಿವಾಸಿತನವೀರ ಹೊನ್ನಟುಗಿ(24) ಮತ್ತುವಿಜಯಪುರ ತಾಲ್ಲೂಕಿನ ಉಕಮನಾಳದದಶರಥ ಹೊಸಮನಿ(34) ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ADVERTISEMENT

ಬಾಗಿಲು ಹಾಕಿರುವ ಮನೆಗಳು, ಸಿಸಿಟಿವಿ ಕ್ಯಾಮೆರಾ ಇಲ್ಲದ ಎಟಿಎಂ ಮತ್ತು ಬಂಗಾರದ ಅಂಗಡಿಗಳನ್ನು ಹಗಲು ವೇಳೆ ಗುರುತಿಸಿ, ರಾತ್ರಿ ಕಳವು ಮಾಡುತ್ತಿದ್ದರು ಎಂದು ಹೇಳಿದರು.

ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ಎ.ಪಿ.ಎಂ.ಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1(ಎಟಿಎಂ ಕಳವು), ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1,ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಬಾಗಲಕೋಟೆ ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1, ಬಾದಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 (ಬಂಗಾರದ ಅಂಗಡಿ ಕಳವು) ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1 ಕಳವು ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದ್ದು, ಎಲ್ಲರಿಗೂ ಬಹುಮಾನ ನೀಡುವುದಾಗಿ ಹೇಳಿದರು.

ವಿಜಯಪುರ ಉಪವಿಭಾಗದಡಿಎಸ್‍ಪಿಲಕ್ಷ್ಮೀನಾರಾಯಣ, ಗೋಳಗುಮ್ಮಟ ಸಿಪಿಐರಮೇಶ ಸಿ. ಅವಜಿ, ಗಾಂಧಿಚೌಕ್ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ರವೀಂದ್ರ ನಾಯ್ಕೋಡಿ, ಜಲನಗರ ಠಾಣೆ ಪಿ.ಎಸ್.ಐ ಎಸ್.ಎಂ.ಶಿರಗುಪ್ಪಿ, ಎ.ಪಿ.ಎಂ.ಸಿ ಠಾಣೆ ಪಿ.ಎಸ್.ಐ ಸೋಮೇಶ ಗೆಜ್ಜಿಹಾಗೂ ಸಿಬ್ಬಂದಿಗಳಾದ ಎಂ.ಪವಾರ, ಎಸ್.ಬಿ.ಚನ್ನಶಟ್ಟಿ, ಪ್ರಭು ಹಿಪ್ಪರಗಿ, ಬಾಬು ಗುಡಿಮನಿ, ಐ.ಎಂ. ಬೀಳಗಿ, ಎಂ.ಬಿ.ಡವಳಗಿ, ವೈ.ಆರ್.ಮಂಕಣಿ, ನಬಿ ಮುಲ್ಲಾ, ಶಿವು ಅಳ್ಳಿಗಿಡದ,ರಾಮನಗೌಡ ಬಿರಾದಾರ, ಆನಂದ ಯಳ್ಳೂರ, ಕರೆಪ್ಪ ನಾಲತವಾಡ, ಪುಂಡಲೀಕ ಬಿರಾದಾರ, ಸಿದ್ದು ಬಿರಾದಾರ, ಮಹಾದೇವ ಅಡಿಹುಡಿ, ನಿಂಗಪ್ಪ ವಠಾರ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಜಿಲ್ಲಾ ಪೊಲೀಸ್‌ ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಲು ಆದ್ಯತೆ ನೀಡಲಾಗಿದೆ. ಜನರು ಯಾವುದೇ ಭಯ, ಆತಂಕವಿಲ್ಲದೇ ಇಲಾಖೆಯ ಸೇವೆಯನ್ನು ಪಡೆದುಕೊಳ್ಳಬೇಕು
– ಎಚ್‌.ಡಿ.ಆನಂದಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.