ADVERTISEMENT

ವಿಜಯಪುರ: ಸುಪಾರಿ ಕೊಲೆ ಹಂತಕರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 16:36 IST
Last Updated 17 ಸೆಪ್ಟೆಂಬರ್ 2021, 16:36 IST
ಸುಪಾರಿ ಹತ್ಯೆಗೆ ಸಂಬಂಧಿಸಿದಂತೆ ಐವರು ಹಂತಕರನ್ನು ಬಂಧಿಸಿರುವ ವಿಜಯಪುರ ಜಿಲ್ಲಾ ಪೊಲೀಸರು 
ಸುಪಾರಿ ಹತ್ಯೆಗೆ ಸಂಬಂಧಿಸಿದಂತೆ ಐವರು ಹಂತಕರನ್ನು ಬಂಧಿಸಿರುವ ವಿಜಯಪುರ ಜಿಲ್ಲಾ ಪೊಲೀಸರು    

ವಿಜಯಪುರ: ಸುಪಾರಿ ಹತ್ಯೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಇಟ್ಟಂಗಿಹಾಳ ಕ್ರಾಸ್ ಬಳಿದಂಧರಗಿ ಗ್ರಾಮದ ಅನಿಲ ಮಾದೇವ ಬಿರಾದಾರ(32) ಎಂಬ ವ್ಯಕ್ತಿಯನ್ನು ಕೊಲೆ ಮಾಡಿದ್ದ ದುಷ್ಕರ್ಮಿಗಳು, ಬೈಕ್‌ ಅಪಘಾತ ಎಂದು ಬಿಂಬಿಸಿದ್ದರು.

ಈ ಕುರಿತು ಮೃತನ ಪತ್ನಿ ಮಹಾದೇವಿ ನೀಡಿದ ದೂರಿನಂತೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಅಪಘಾತ ಪ್ರಕರಣವೆಂದೇ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು. ಆದರೆ, ತನಿಖೆ ಹಂತದಲ್ಲಿ ದೊರೆತ ಸುಳಿವಿನ ಆಧಾರದಲ್ಲಿ ಸುಪಾರಿ ಹತ್ಯೆಯ ಕೃತ್ಯ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್‌ ತಿಳಿಸಿದರು.

ADVERTISEMENT

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆದಂಧರಗಿ ಗ್ರಾಮದ ಬನ್ನೆಪ್ಪ ಬಿರಾದಾರ(41), ಸುರೇಶ ಅವಟಿ(34),ಲೋಗಾವಿಯ ಭೀರಪ್ಪ ಗುಗವಾಡ (22), ದದಾಮಟ್ಟಿಯ ಕಿರಣಕುಮಾರ ಅಸ್ಕಿ(23) ಹಾಗೂ ತೊರವಿಯ ರಾಜು ಆಸಂಗಿ(23) ಎಂಬುವವರನ್ನು ಬಂಧಿಸಲಾಗಿದೆ ಎಂದರು.

ಆರೋಪಿತರ ಕಡೆಯಿಂದ ಒಂದು ಕಬ್ಬಿಣದ ಬಡಿಗೆ, ಎರಡು ಬೈಕ್‌, ಮೊಬೈಲ್‌ ಫೋನ್‌, ₹35,800 ಸುಪಾರಿ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಬನ್ನಪ್ಪ ಬಿರಾದಾರ ಮತ್ತು ಕೊಲೆಯಾದಅನಿಲ ಮಾದೇವ ಬಿರಾದಾರ ನಡುವೆ ಜಮೀನಿನ ಬದು ಹಾಗೂ ಭಾವಿ ನೀರಿನ ವಿಷಯದಲ್ಲಿ ಜಗಳವಾಗಿತ್ತು. ಮತ್ತೊಂದೆಡೆ, ಗ್ರಾಮ ಪಂಚಾಯ್ತಿ ಸದಸ್ಯ ಸುರೇಶ ಕಲ್ಲಪ್ಪ ಅವಟಿ ಮತ್ತುಅನಿಲ ಮಾದೇವ ಬಿರಾದಾರ ನಡುವೆ ಚುನಾವಣೆ ಸಂದರ್ಭದಲ್ಲಿ ಅನಿಲ ವಿರೋಧ ಅಭ್ಯರ್ಥಿಗೆ ಬಂಬಲಿಸಿದ್ದ. ಹೀಗಾಗಿ ಈ ಇಬ್ಬರೂ ಸೇರಿ ಅನಿಲನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದರು ಎಂದು ತಿಳಿಸಿದರು.

ಈ ಸಂಬಂಧ ಬೀರಪ್ಪ ಗುಗವಾಡ, ಕಿರಣ ಅಸ್ಕಿ ಹಾಗೂ ರಾಜು ಅಸಂಗಿ ಅವರಿಗೆ ಅನಿಲನನ್ನು ಕೊಲೆ ಮಾಡಲು ₹2.50 ಲಕ್ಷ ಸುಪಾರಿ ನೀಡಿದ್ದರು. ಸುಪಾರಿ ನೀಡಿದ ಬಳಿಕ ಸುಪಾರಿ ಹತ್ಯೆ ಮಾಡಿದ ಮೂವರೊಂದಿಗೆ ಸೇರಿ ಆ.26 ರಂದು ಆರೋಪಿಗಳೆಲ್ಲ ಅನಿಲನ್ನು ಡಾಬಾಕ್ಕೆ ಕರೆಸಿ ವಿಪರೀತ ಮದ್ಯ ಕುಡಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕಬ್ಬಿಣದ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದಿದ್ದು, ಮರ್ಮಾಂಗಕ್ಕೆ ಒದ್ದಿರುವ ಕಾರಣ ಸ್ಥಳದಲ್ಲೇ ಅನಿಲ ಮೃತಪಟ್ಟಿದ್ದಾನೆ. ಹತ್ಯೆ ಬಳಿಕ ಅನಿಲನ ಶವವನ್ನು ಆತನದೇ ಬೈಕ್‍ನಲ್ಲಿ ಹೊತ್ತೊಯ್ದು, ಇಂಟಗಿಹಾಳ ಕ್ರಾಸ್ ಬಳಿ ಅಪಘಾತ ಆಗಿರುವ ರೀತಿಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ತಿಳಿಸಿದರು.

ತನಿಖೆಯ ಹಂತದಲ್ಲಿ ಲಭ್ಯವಾದ ಸಾಕ್ಷಾಧಾರಗಳನ್ನು ಆಧರಿಸಿ ಐವರೂ ಆರೋಪಿಗಳನ್ನು ಸೆ.16 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಪಾರಿ ಹತ್ಯೆಯ ಕೃತ್ಯ ಬೆಳಕಿಗೆ ಬಂದಿದೆ ಎಂದರು.

ಸಿಪಿಐ ಸಂಗಮೇಶ ಪಾಲಭಾವಿ ನೇತೃತ್ವದ ಎಸ್‌.ಐ. ಜಿ.ಎಸ್.ಉಪ್ಪಾರ, ಎಂ.ಎನ್.ಮುಜಾವರ, ಎಸ್.ಎ.ಸನದಿ, ಬಿ.ವಿ.ಪವಾರ್, ಹಣಮಂತ ಬಿರಾದಾರ, ಎಂ.ಬಿ.ಜನಗೊಂಡ, ಎಲ್.ಎಸ್.ಹಿರೇಗೌಡರ, ಆರ್.ಡಿ.ಅಂಜುಟಗಿ, ಗುರು ಹಡಪದ, ಶಿವನಂದ ಹಿರೇಗೋಳ ಅವರಿದ್ದ ವಿಶೇಷ ತನಿಖೆ ತಂಡಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಹುಮಾನ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.